Site icon Vistara News

Accident |ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ: ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ

accident

ಕೊಪ್ಪಳ: ಭಾನಾಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ(Accident) ಐವರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ನಾಲ್ವರಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಜಿಲ್ಲಾಸ್ಪತ್ರೆಗೆ ಸಚಿವ ಹಾಲಪ್ಪ ಆಚಾರ್ ಮತ್ತು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿ ವಿಚಾರಿಸಿ ಸಾಂತ್ವನ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಹಾಲಪ್ಪ ಆಚಾರ್‌, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಗವಿಸಿದ್ದೇಶ್ವರ ಸ್ವಾಮೀಜಿ ಭೇಟಿ

ಕುಟುಂಬದವರ ಆಕ್ರಂದನ

ಕೊಪ್ಪಳ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಮುಖ್ಯ ಪೇದೆಯಾಗಿರುವ ಶರಣಪ್ಪ ಕೊಪ್ಪದ ಎಂಬುವವರ ಮೊಮ್ಮಗಳ ಬರ್ತ್‌ಡೇ ಪಾರ್ಟಿ ಇತ್ತು. ಅದೇ ಸಂಭ್ರಮದಿಂದ ಪುನಃ ಮನೆಗೆ ಹೊರಟವರಿಗೆ ಭಾನಾಪುರದ ಟಾಯ್ಸ್ ಕ್ಲಸ್ಟರ್ ಬಳಿ ಅಪರಿಚಿತ ಭಾರಿ ವಾಹನವೊಂದು ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಘಟನೆಯಲ್ಲಿ ಪೇದೆ ಶರಣಪ್ಪ ಅವರ ಪತ್ನಿ, ಅಣ್ಣ ಸೇರಿದಂತೆ ಒಟ್ಟು ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ದೇವಪ್ಪ ಕೊಪ್ಪದ (62), ಗಿರಿಜಮ್ಮ (45), ಶಾಂತಮ್ಮ (32), ಪಾರ್ವತಮ್ಮ (32) ಹಾಗೂ ಕಸ್ತೂರಿ (22) ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪಲ್ಲವಿ (28), ಪುಟ್ಟರಾಜ (07), ಸ್ಕಾರ್ಪಿಯೋ ಚಾಲಕ ಹರ್ಷವರ್ಧನ (35) ಮತ್ತು ಭೂಮಿಕಾ 5 ವರ್ಷದ ಮಗುವಿಗೂ ಗಂಭೀರ ಗಾಯವಾಗಿದೆ. ಗಾಯಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬರ್ತಡೆ ಕಾರ್ಯಕ್ರಮದ ಸಂಭ್ರಮದಲ್ಲಿದ್ದ ಕುಟುಂಬದವರಿಗೆ ಘಟನೆಯ ಸುದ್ದಿ ಕೇಳಿ ಬರಸಿಡಿಲು ಬಡಿದಂತಾಗಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಚಾಲಕ ಪರಾರಿ

ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಗೆ ಧಾವಿಸಿ ಗಾಯಾಳುಗಳ ಸ್ಥಿತಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕುಕನೂರು ಆಸ್ಪತ್ರೆಗೆ ರವಾನಿಸಲಾಗಿದೆ. ಅಪರಿಚಿತ ಭಾರಿ ವಾಹನವೊಂದು ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದ ಪರಿಣಾಮದಿಂದ ಈ ದುರ್ಘಟನೆ ನಡೆದಿದೆ. ಡಿಕ್ಕಿ ಹೊಡೆದು ಹೋಗಿರುವ ಆ ಅಪರಿಚಿತ ವಾಹನದ ಮಡ್ ಗಾರ್ಡ್ ಅಲ್ಲಿ ಬಿದ್ದಿದೆ. ಅದರ ಆಧಾರದ ಮೇಲೆ ಆ ವಾಹನವನ್ನು ಪತ್ತೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದ್ದಾರೆ.

ಇದನ್ನೂ ಓದಿ | ಬೆಂಗಳೂರಿನ ಹೆಬ್ಬಾಳ ಬಳಿ ಸರಣಿ ಅಪಘಾತ, ಪ್ರಾಣಾಪಾಯದಿಂದ ಪಾರಾದ ಕಾರು ಚಾಲಕರು

Exit mobile version