ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಎಂದು ಅಲ್ಲಿನ ಮತದಾರರು ಒತ್ತಾಯಿಸಿ ಧರಣಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿರಯವ ಸಿದ್ದರಾಂಯ್ಯ ಅಧಿಕೃತ ನಿವಾಸದ ಎದುರು ಜಮಾಯಿಸಿದ ನೀರಾರು ಜನರು, ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿದರು. ಕಳೆದ ಚುನಾವಣೆಯಲ್ಲಿ ನಾವು ಅವರನ್ನು ಗೆಲ್ಲಿಸಿ ಕೈ ಹಿಡಿದಿದ್ದೇವೆ. ಈ ಬಾರಿಯೂ ಅವರು ಬದಾಮಿಯಿಂದಲೇ ಸ್ಪರ್ಧೆ ಮಾಡಬೇಕು. ಯಾವುದೇ ಕಾರಣಕ್ಕೆ ಕೋಲಾರವನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಹೇಳಿದರು. ಈ ಕುರಿತು ಮಾತುಕತೆ ನಡೆಸಲು ಯಾರೂ ಆಗಮಿಸದೇ ಇರುವುದಕ್ಕೆ ಅಸಮಾಧಾನಗೊಂಡು, ಅಲ್ಲಿಯೇ ಧರಣಿ ನಡೆಸಿದರು.
ಬಾದಾಮಿ ಕ್ಷೇತ್ರವು ತಮಗೆ ಬಹಳ ದೂರವಾಗಿದ್ದು, ಈ ಬಾರಿ ಹತ್ತಿರದಲ್ಲಿರುವ ಕೋಲಾರದಿಂದಲೇ ಸ್ಪರ್ಧೆ ಮಾಡಲು ನಿರ್ಧಾರ ಮಾಡಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಈಗಾಗಲೆ ಕೋಲಾರ ಕ್ಷೇತ್ರದಲ್ಲಿ ಪ್ರವಾಸವನ್ನೂ ನಡೆಸುತ್ತಿದ್ದು, ವಾರ್ ರೂಂ ಸಹ ತೆರೆದಿದ್ದಾರೆ.
ಇದೇ ವೇಳೆ ಕೋಲಾರ ಕಾಂಗ್ರೆಸ್‌ನಲ್ಲಿ ಭಿನ್ನಮತ ಅಪಾರವಾಗಿದ್ದು, ಅದರ ಬಿಸಿಯೂ ಸಿದ್ದರಾಮಯ್ಯ ಅವರಿಗೆ ತಟ್ಟುವ ಸಾಧ್ಯತೆಯಿದೆ. ಅಸಮಾಧಾನವನ್ನು ತಣಿಸಿಕೊಂಡು ಸುಲಭವಾಗಿ ಗೆಲುವು ಸಾಧಿಸಲು ಕಸರತ್ತು ನಡೆಸಿದ್ದಾರೆ. ಕೋಲಾರದಲ್ಲಿ ಗೆಲ್ಲುವುದು ಸುಲಭವಾದರೆ, ಇದೇ ಸಮಯದಲ್ಲಿ ರಾಜ್ಯದ ವಿವಿಧೆಡೆ ಸಂಚರಿಸಿ ತಮ್ಮ ಬೆಂಬಲಿಗರ ಪರ ಪ್ರಚಾರ ಮಾಡುವುದು ಸಿದ್ದರಾಮಯ್ಯ ಉದ್ದೇಶ.
ಬಾದಾಮಿಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದ ಸಿದ್ದರಾಮಯ್ಯ
ಆನಂತರ ಸ್ಥಳಕ್ಕೆ ಆಗಮಿಸಿದ ಸಿದ್ದರಾಮಯ್ಯ, ನೆರೆದವರನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರೂ ಊಟ ಮಾಡಿದ್ರಾ ಎಂದು ಕೇಳಿದ ಸಿದ್ದರಾಮಯ್ಯ, ನಿಮ್ಮ ಅಭಿಮಾನಿಕ್ಕೆ ಧನ್ಯವಾದಗಳು ಎಂದರು. ನಿಮ್ಮ ಜೊತೆಗೆ ಪ್ರತಿದಿನ ಇರಕ್ಕೆ ಆಗಲ್ಲ. ನೀವು ಬಾದಾಮಿ ಅವರು ತುಂಬಾ ಒಳ್ಳೆಯವರು. ನನಗೆ ಗೆಲ್ಲಲು ನೀವು ಸಹಾಯ ಮಾಡಿದ್ದೀರ. ಮೈಸೂರಿನಿಂದ ಬಂದ ನನಗೆ ಗೆಲ್ಲುವು ಕೊಟ್ರಿ. ಬಾದಾಮಿಯಲ್ಲಿ ಚುನಾವಣೆಗೆ ನಿಲ್ಲಿ ಅಂತ ಜನರು ಬಂದಿದ್ದರು ಅಂತ ನಾನು ಹೈ ಕಮಾಂಡ್ ಜೊತೆಗೆ ಮಾತಾಡ್ತೀನಿ. ಹೈ ಕಮಾಂಡ್ ನಾಯಕರು ಯಾವ ಕ್ಷೇತ್ರದಲ್ಲಿ ನಿಲ್ಲಲು ಹೇಳುತ್ತೆ ಆ ಕ್ಷೇತ್ರದಲ್ಲಿ ನಿಲ್ತಿನಿ ಎಂದರು.
ಬಾದಾಮಿ , ವರುಣಾ ಕೋಲಾರ ಎಲ್ಲಾದರೂ ಸರಿ ಸ್ಪರ್ಧೆ ಮಾಡ್ತೀನಿ. ಒಂದು ವೇಳೆ ಬಾದಾಮಿಯಲ್ಲಿ ಸ್ಪರ್ಧೆ ಮಾಡಿಲ್ಲ ಅಂದ್ರೂ ನಾನು ಬಾದಾಮಿ ಶಾಸಕನೇ. ಇದು ನನ್ನ ಕೊನೆ ಚುನಾವಣೆ. ಮತ್ತೆ ಚುನಾವಣೆಗೆ ನಿಲ್ಲಲ್ಲ. ಹೀಗಾಗಿ ಹತ್ತಿರ ಇರುವ ಜಾಗಕ್ಕೆ ಹೋಗೋಣ ಅಂದುಕೊಂಡಿದ್ದೀನಿ. ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿ ನಿಂತ್ಕೊತೀನಿ. ಎಲ್ಲಿಂದಲೇ ಗೆದ್ದರೂ ಬಾದಾಮಿ ಜನರ ಋಣ ತೀರಿಸುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬಾದಾಮಿಯನ್ನು ನನ್ನ ಕ್ಷೇತ್ರ ಅಂತಲೇ ಅಭಿವೃದ್ಧಿ ಮಾಡುತ್ತೇನೆ. ನಿಮ್ಮ ಜೊತೆಗೆ ವಾದ ವಿವಾದ ಮಾಡುವುದಿಲ್ಲ. ಹೈಕಮಾಂಡ್ ಏನು ಹೇಳುತ್ತದೋ ಅದರ ಪ್ರಕಾರ ನಡೆದುಕೊಳ್ತೇನೆ ಎಂದರು.