Site icon Vistara News

J.P. Nadda | ಕರ್ನಾಟಕದಲ್ಲಿ ಕಾಂಗ್ರೆಸ್‌ ಉಸಿರಾಟವನ್ನು ನಿಲ್ಲಿಸಿ: ಕೊಪ್ಪಳದಲ್ಲಿ ಬಿ.ಎಸ್‌. ಯಡಿಯೂರಪ್ಪ ಕರೆ

B.S. Yediyurappa

ಕೊಪ್ಪಳ: ಅಧಿಕಾರದಲ್ಲಿದ್ದಾಗ ಮೈಮರೆತ ಕಾರಣಕ್ಕೆ ನಾಯಕತ್ವವಿಲ್ಲದೆಯೇ ಕಾಂಗ್ರೆಸ್‌ ಎಲ್ಲ ಕಡೆಯೂ ಅಸ್ತಿತ್ವ ಕಳೆದುಕೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಉಸಿರು ನಿಲ್ಲಿಸಬೇಕಿದೆ ಎಂದು ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಕೊಪ್ಪಳದಲ್ಲಿ ಆಯೋಜನೆ ಮಾಡಿದ್ದ, ರಾಜ್ಯದ 10 ಜಿಲ್ಲಾ ಕಾರ್ಯಾಲಯಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಆಗಮಿಸಿರುವುದು ಅತ್ಯಂತ ಸಂತೋಷದ ಸಂಗತಿ. ವಿಶ್ವದಲ್ಲೇ ಅತ್ಯಂತ ಗೌರವದಿಂದ ನೋಡುವ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಪಡೆದಿರುವುದು ನಮ್ಮ ಸೌಭಾಗ್ಯ. ಈಗಲೂ ದೇಶದ ಬಹುಪಾಲು ಜನ ನರೇಂದ್ರ ಮೋದಿಯವರೇ ಪ್ರಧಾನಿ ಆಗಬೇಕು ಎಂದು ಬಯಸಿರುವುದು ಸಮೀಕ್ಷೆಯಲ್ಲಿ ಬಯಲಿಗೆ ಬಂದಿದೆ.

ನಾಯಕತ್ವ ಕೊರತೆ ಇರುವ ಕಾಂಗ್ರೆಸ್‌, ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಉಸಿರಾಡುತ್ತಿದೆ. ಆ ಉಸಿರು ನಿಲ್ಲಿಸಿದರೆ ಕಾಂಗ್ರೆಸ್‌ ಧೂಳಿಪಟವಾಗುತ್ತದೆ. ಅಧಿಕಾರ ಇದ್ದಾಗ ಜನಹಿತ ಮರೆತ ಕಾಂಗ್ರೆಸಿಗರು ನಾಯಕತ್ವ ಇಲ್ಲದೆ ತಬ್ಬಲಿಯಾಗಿ ಅಲೆಯುತ್ತಿದ್ದಾರೆ. ಕಾಶ್ಮೀರದಲ್ಲಿ ಶಾಮಪ್ರಸಾದ್‌ ಮುಖರ್ಜಿ, ತಾಷ್ಕೆಂಟ್‌ನಲ್ಲಿ ಲಾಲ್‌ಬಹದ್ದೂರ್‌ ಶಾಸ್ತ್ರಿ, ಮುಗಲ್‌ಸರಾಯ್‌ ರೈಲ್ವೆ ನಿಲ್ದಾಣದಲ್ಲಿ ಪಂಡಿತ್‌ ದೀನದಯಾಳ್‌ ಉಪಾಧ್ಯಾಯರ ಸಾವಿಗೆ ಯಾರು ಕಾರಣ? ಕಾಂಗ್ರೆಸ್‌ ಪಕ್ಷ ಅನಗತ್ಯವಾಗಿ ಮೋದಿಯವರನ್ನು ಟೀಕೆ ಮಾಡಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಈ ಭಾಗದ ರೈತರಿಗೆ, ನೀರಾವರಿ ಯೋಜನೆಗಳಿಗೆ ಪ್ರಾಮುಖ್ಯತೆ ಕೊಟ್ಟು ನೆಮ್ಮದಿಯ ಜೀವನ ಕೊಟ್ಟಿದ್ದು ಬಿಜೆಪಿ. ಯುವಕರು, ಮಹಿಳೆಯರು ಜನರಿಗೆ ಇದೆಲ್ಲವನ್ನೂ ಜನರಿಗೆ ಮನವರಿಕೆ ಮಾಡಬೇಕು.ಕನಕ ಜಯಂತಿ, ಅಂಬೇಡ್ಕರ್‌ ಜಯಂತಿ, ವಾಲ್ಮೀಕಿ ಜಯಂತಿ ಆರಂಭಿಸಿದ್ದು ನಾವು.

ಕಾಂಗ್ರೆಸ್‌ನಲ್ಲಿ ಇಬ್ಬರು ನಾಯಕರ ನಡುವೆ ಬಡಿದಾಟವನ್ನು ನಿಲ್ಲಿಸಲು ಖರ್ಗೆ ಅವರು ಒದ್ದಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಆ ರೀತಿ ಇಲ್ಲ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಕೆಲಸ ಮಾಡುತ್ತಿದ್ದೇವೆ. ನಾವೆಲ್ಲರೂ ಒಂದಾಗಿ ಪಕ್ಷವನ್ನು ಕಟ್ಟುತ್ತಿದ್ದೇವೆ. ಕಾರ್ಯಕರ್ತರು ಮೈಮರೆಯಬಾರದು. ಶೇ.70 ಮತ ಪಡೆದು ಎಲ್ಲ ಐದು ಕ್ಷೇತ್ರಗಳನ್ನೂ ಗೆದ್ದರೆ ಮಾತ್ರವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯ.

ಕೊಪ್ಪಳದಲ್ಲಿ ಐದಕ್ಕೆ ಐದೂ ಗೆದ್ದು, ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದರೆ ರಾಜ್ಯದಲ್ಲಿ ಕಾಂಗ್ರೆಸ್‌ ಧೂಳೀಪಟ ಆಗುತ್ತದೆ. ಈ ರೀತಿ ಗೆಲ್ಲಿಸಿಕೊಡುತ್ತೇವೆ ಎಂದು ಎಲ್ಲರೂ ಸಂಕಲ್ಪ ಮಾಡಬೇಕು. ಮನೆಮನೆಗೂ ತೆರಳಿ ಬಿಜೆಪಿ ವಿಚಾರವನ್ನು ತಿಳಿಸಬೇಕು. ಇವತ್ತು ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ಮುಂದಿನ ದಿನಗಳಲ್ಲಿ ಅಮಿತ್‌ ಶಾ, ನಡ್ಡಾ, ಮೋದಿ ಪ್ರವಾಸ ಮಾಡಿದರೆ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಸೇರಿ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ | ಬಿ.ಎಸ್‌. ಯಡಿಯೂರಪ್ಪ ಕೋಪ ಶಮನಗೊಳಿಸಿದ ಬಿಜೆಪಿ; ಕೊಪ್ಪಳಕ್ಕೆ ಆಗಮಿಸಲು ಕೊನೆಗೂ ಒಪ್ಪಿಗೆ

Exit mobile version