Site icon Vistara News

ಬಿ.ಎಸ್‌. ಯಡಿಯೂರಪ್ಪ ಕೋಪ ಶಮನಗೊಳಿಸಿದ ಬಿಜೆಪಿ; ಕೊಪ್ಪಳಕ್ಕೆ ಆಗಮಿಸಲು ಕೊನೆಗೂ ಒಪ್ಪಿಗೆ

BS Yediyurappa

ಬೆಂಗಳೂರು: ರಾಜ್ಯದ 10 ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಾಲಯಗಳನ್ನು ಉದ್ಘಾಟನೆ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸುತ್ತಿರುವ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನು ಆಹ್ವಾನಿಸದೆ ರಾಜ್ಯ ಬಿಜೆಪಿ ಯಡವಟ್ಟು ಮಾಡಿಕೊಂಡಿದೆ.

ಕೊಪ್ಪಳದಲ್ಲಿ ಗುರುವಾರ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿಂದಲೇ ವರ್ಚುವಲ್‌ ಮೂಲಕ ಉಳಿದ 9 ಕಾರ್ಯಾಲಯಗಳನ್ನು ನಡ್ಡಾ ಉದ್ಘಾಟನೆ ಮಾಡಲಿದ್ದಾರೆ. ಕೊಪ್ಪಳದಲ್ಲಿ ಬಹಿರಂಗ ಸಮಾವೇಶದಲ್ಲಿ ನಡ್ಡಾ ಮಾತನಾಡುವುದನ್ನು ಉಳಿದ ಕಡೆಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಆದರೆ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅವರನ್ನು ಆಹ್ವಾನಿಸಿಲ್ಲ ಎನ್ನುವುದು ರಾಜ್ಯ ಬಿಜೆಪಿ ನಾಯಕರಿಗೆ ಬುಧವಾರ ಅರಿವಿಗೆ ಬಂದಿದೆ.

ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿರುವಂತೆಯೇ ವರಿಷ್ಠರಿಂದ ಸೂಚನೆ ಬಂದಿದೆ. ಇದರ ಬೆನ್ನಿಗೇ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ನೇರವಾಗಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.

ಭೇಟಿ ನಂತರ ಮಾತನಾಡಿದ ಯಡಿಯೂರಪ್ಪ, ತುರ್ತಾಗಿ ರಾಷ್ಟ್ರೀಯ ಅಧ್ಯಕರ ಕಾರ್ಯಕ್ರಮ ನಿಗದಿಯಾಗಿತ್ತು. 10 ಜಿಲ್ಲೆಯಲ್ಲಿ ಕಾರ್ಯಾಲಯ ಉದ್ಘಾಟನೆ ಆಗುತ್ತಿರುವುದರಿಂದ ಒಬ್ಬೊಬ್ಬ ಪ್ರಮುಖರು ಒಂದೊಂದು ಕಡೆ ಎಂದು ಯೋಜನೆ ಆಗಿತ್ತು. ಈಗ ರಾಷ್ಟ್ರೀಯ ಅಧ್ಯಕ್ಷರ ಜತೆ ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರು ಭಾಗಿಯಾಗುತ್ತಾರೆ. ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗುತ್ತಾರೆ. ಬೀದರ್‌ನಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಭಾಗಿಯಾಗುತ್ತಾರೆ. ಗೋವಿಂದ ಕಾರಜೋಳ, ರಾಮುಲು ಅವರು ಬೇರೆ ಬೇರೆ ಕಡೆ ಭಾಗಿಯಾಗುತ್ತಾರೆ ಎಂದರು.

ರವಿಕುಮಾರ್‌ ಮನವೊಲಿಕೆಗೆ ಯಡಿಯೂರಪ್ಪ ಒಪ್ಪಿಗೆ ನೀಡಿದ್ದು, ವಿಶೇಷ ವಿಮಾನದಲ್ಲಿ ಕೊಪ್ಪಳಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಯಡಿಯೂರಪ್ಪ ಜತೆಗೆ ಇರುವ ಗನ್‌ ಮ್ಯಾನ್‌ ನಿಜವಾಗಿ ಇ.ಡಿ. ಅಧಿಕಾರಿ: ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ್‌ ಹೇಳಿಕೆ

Exit mobile version