ಕೊಪ್ಪಳ: ವಿದ್ಯುತ್ ಆಘಾತದಿಂದ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದಿದೆ.
ಶೈಲಮ್ಮ (28) ಮತ್ತು ಅವರ ಇಬ್ಬರು ಮಕ್ಕಳಾದ ಸಾನ್ವಿ (3) ಮತ್ತು ಪವನ್ (2) ಮೃತ ಪಟ್ಟ ದುರ್ದೈವಿಗಳು. ಶೈಲಮ್ಮ ಅವರು ಬಟ್ಟೆ ತೊಳೆದು ಒಣಗಿಸಲು ಹಾಕುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿದೆ. ಆಗ ವಿದ್ಯುತ್ ಪ್ರಸರಣಗೊಂಡು ಆಕೆ ಬಿದ್ದಿದ್ದಾರೆ. ಅವರ ಜತೆಗೇ ಇದ್ದ ಮಕ್ಕಳು ಕೂಡಾ ಅಮ್ಮನನ್ನು ತಬ್ಬಿಕೊಂಡ ಪರಿಣಾಮವಾಗಿ ಅವರಿಬ್ಬರೂ ಪ್ರಾಣ ಕಳೆದುಕೊಂಡರು.
ವಿಷಯ ತಿಳಿದು ಅಕ್ಕ ಪಕ್ಕದವರು ಓಡಿ ಬಂದರೂ ಏನೂ ಮಾಡಲಾಗಲಿಲ್ಲ. ಮೃತರು ಸಂಬಂಧಿಕರು ಧಾವಿಸಿ ಬಂದಿದ್ದು ಅವರ ಆಕ್ರಂದನವು ಮುಗಿಲು ಮುಟ್ಟಿದೆ. ಕನಕಗಿರಿ ಪೊಲೀಸ್ ಠಾಣೆಯಲ್ಲ್ಲಿ ಪ್ರಕರಣ ದಾಖಲಾಗಿದೆ.
ಅಪಾಯದ ತಂತಿಗಳು
ಹಲವರು ಭಾಗದಲ್ಲಿ ವಿದ್ಯುತ್ ತಂತಿಗಳು ಮನೆ ಪಕ್ಕದಲ್ಲೇ ಹಾದು ಹೋಗುತ್ತಿದ್ದು, ಇದರಿಂದ ಅಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಕೆಲವು ಮನೆಗಳ ಮೇಲೆಯೇ ವಿದ್ಯುತ್ ತಂತಿಗಳನ್ನು ಹಾಕಲಾಗಿರುತ್ತದೆ. ಬಟ್ಟೆ ಒಣಗಲು ಹಾಕುವಾಗ, ಕಬ್ಬಿಣ ಮತ್ತು ಇತರ ಸಲಕರಣೆಗಳನ್ನು ಒಂದು ಕಡೆಯಿಂದ ಇನ್ನೊಂದೆಡೆ ಸಾಗಿಸುವಾಗ ಈ ತಂತಿಗಳಿಗೆ ಸ್ಪರ್ಶವಾಗಿ ವಿದ್ಯುತ್ ಆಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ ಬಟ್ಟೆ ಒಣಗಲು ಹಾಕುವಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಘಟನೆಗಳು ಜಾಸ್ತಿ ಇವೆ. ಹೀಗಾಗಿ, ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕಾಗುತ್ತದೆ, ವಿದ್ಯುತ್ ಕಂಪನಿಗಳು ಕೂಡಾ ಮನೆ ಪರಿಸರದಲ್ಲಿರುವ ತಂತಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ.
ಇದನ್ನೂ ಓದಿ: ಮಣಿಪಾಲದ ಫರ್ನೀಚರ್ ಅಂಗಡಿಯಲ್ಲಿ ಅಗ್ನಿ ಅವಘಡ!