ಕೊಪ್ಪಳ: ಮೂರು ದಿನಗಳಿಂದ ಸುರಿದ ಮಳೆ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾನಿಗೊಳಗಾಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅದರಲ್ಲೂ ಕೊಪ್ಪಳ ತಾಲೂಕಿನ ಹಿರೇಹಳ್ಳದ ದಡದಲ್ಲಿರುವ ಗ್ರಾಮಗಳ ರೈತರ ಬೆಳೆಗಳು ಹಾಗೂ ಜಮೀನುಗಳು ಹಾನಿಗೊಳಗಾಗಿವೆ.
ಕೊಪ್ಪಳ ತಾಲೂಕಿನ ಮುದ್ಲಾಪುರ ಗ್ರಾಮದ ಬಳಿ ಇರುವ ಹಿರೇಹಳ್ಳ ಜಲಾಶಯ ಒಂದೇ ರಾತ್ರಿಯಲ್ಲಿ ಭರ್ತಿಯಾದ ಪರಿಣಾಮ ಸುಮಾರು 17,290 ಕ್ಯುಸೆಕ್ ನೀರನ್ನು ಹಿರೇಹಳ್ಳಕ್ಕೆ ನಿನ್ನೆ ಬಿಡಲಾಗಿತ್ತು. ಹಿರೇಹಳ್ಳದಲ್ಲಿ ನಿರ್ಮಿಸಲಾಗಿರುವ ಬ್ರಿಡ್ಜ್ ಕಂ ಬ್ಯಾರೇಜ್‍ಗಳ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಗೇಟ್‍ಗಳನ್ನು ತೆಗೆದಿರಲಿಲ್ಲ.
ಇದನ್ನೂ ಓದಿ | ಭಾರೀ ಮಳೆ-ಬಿರುಗಾಳಿಗೆ ಕೊಪ್ಪಳದಲ್ಲಿ 5,599 ಪ್ರದೇಶದ ಕೃಷಿ ಬೆಳೆ ಹಾನಿ
ಅಪಾರ ಪ್ರಮಾಣದಲ್ಲಿ ನೀರು ಹಳ್ಳಕ್ಕೆ ಬಂದಿದ್ದು, ಬ್ರಿಡ್ಜ್ ಕಂ ಬ್ಯಾರೇಜ್‍ನ ಗೇಟ್‍ಗಳನ್ನು ತೆರೆಯದ ಕಾರಣ ಹಳ್ಳದ ಅಪಾರ ಪ್ರಮಾಣದ ನೀರು ಎರಡೂ ದಡದಲ್ಲಿ ಪ್ರವಾಹ ರೀತಿಯಲ್ಲಿ ಹರಿದಿದೆ. ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಬಳಿ ಇರುವ ಬ್ರಿಡ್ಜ್ ಕಂ ಬ್ಯಾರೇಜ್ ಪಕ್ಕದಲ್ಲಿನ ನೂರಾರು ಎಕರೆಯಲ್ಲಿನ ಬೆಳೆಗಳು ಹಾನಿಗೊಳಗಾಗಿವೆ.
ನೀರಿನ ರಭಸಕ್ಕೆ ಹತ್ತಾರು ಎಕರೆ ಪ್ರದೇಶದ ಉಳುವ ಭೂಮಿಯ ಮೇಲ್ಮಣ್ಣು ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ರೈತರು ಕಣ್ಣೀರಿಡುವಂತೆ ಮಾಡಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಹಿರೇಹಳ್ಳದ ನೀರು ಪಕ್ಕದ ಜಮೀನುಗಳಿಗೆ ನುಗ್ಗುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಜಾಮ್ ಆಗಿದ್ದ ಬ್ರಿಡ್ಜ್ ಕಂ ಬ್ಯಾರೇಜ್‍ನ ಗೇಟ್‍ಗಳನ್ನು ಇಂದು ಕಾರ್ಮಿಕರನ್ನು ಕರೆದುಕೊಂಡು ಬಂದು ತೆರೆಸುತ್ತಿದ್ದಾರೆ. ಅನಿರೀಕ್ಷಿತವಾಗಿ ಮಳೆ ಬಂದ ಹಿನ್ನೆಲೆಯಲ್ಲಿ ಹಳ್ಳಕ್ಕೆ ಅಪಾರ ಪ್ರಮಾಣದಲ್ಲಿ ನೀರು ಬಂದಿದೆ. ಇದರಿಂದಾಗಿ ಸಮಸ್ಯೆಯಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
ಸತತ ಮಳೆಯಿಂದ ಆಗಿರುವ ಹಾನಿಯ ಕುರಿತು ಸಮೀಕ್ಷೆಯನ್ನು ಮಾಡಲಾಗುತ್ತಿದೆ. ಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಬಾಧಿತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರೇಸಿಂದೋಗಿ ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ಸ್ಥಳಕ್ಕೆ ಬಂದಿದ್ದ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲ್ಯಾಣ ಶೆಟ್ಟರ್ ತಿಳಿಸಿದ್ದಾರೆ. ಮಳೆರಾಯನ ಅವಾಂತರದಿಂದ ಹಿರೇಹಳ್ಳ ದಡದಲ್ಲಿರುವ ಗ್ರಾಮಗಳ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಇದನ್ನೂ ಓದಿ: ಭಾರೀ ಮಳೆ-ಬಿರುಗಾಳಿಗೆ ಕೊಪ್ಪಳದಲ್ಲಿ 5,599 ಪ್ರದೇಶದ ಕೃಷಿ ಬೆಳೆ ಹಾನಿ