Site icon Vistara News

ರಾಜ್ಯಪಾಲರ ಆಗಮನದ ವೇಳೆ ಪೂಜೆಗೆ ಪಟ್ಟು ಹಿಡಿದ ವಿದ್ಯಾದಾಸ ಬಾಬಾ, ಅಂಜನಾದ್ರಿಯಲ್ಲಿ ಡ್ರಾಮಾ

vidyadasa baba

ಕೊಪ್ಪಳ: ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಗಂಗಾವತಿ ತಾಲೂಕಿನ ಅಂಜನಾದ್ರಿಗೆ ಇಂದು ಮುಂಜಾನೆ ಆಗಮಿಸಿ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ವಿದ್ಯಾದಾಸ ಬಾಬಾ ಎಂಬವರು ಸ್ಥಳದಲ್ಲಿ ಪೂಜೆ ಸಲ್ಲಿಸಲು ಮುಂದಾದಾಗ ಅವರಿಗೂ ಅಧಿಕಾರಿಗಳಿಗೂ ಮಾತಿನ ಚಕಮಕಿ ನಡೆದು ಅವರನ್ನು ತಡೆಯಲಾಯಿತು.

ಅಂಜನಾದ್ರಿಗೆ 7.40ರ ವೇಳೆಗೆ ಆಗಮಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಂಜನಾದ್ರಿ ಗುಡಿಯ ಕೆಳಭಾಗದಲ್ಲಿ ಆಂಜನೇಯನಿಗೆ ಪೂಜೆ ಸಲ್ಲಿಸಿದರು. ಅವರಿಗಾಗಿ ರೆಡ್ ಕಾರ್ಪೆಟ್ ಹಾಕಿ ರಾಜ್ಯಪಾಲರನ್ನು ಸ್ವಾಗತಿಸಿದ ಜಿಲ್ಲಾಡಳಿತ, ಅಂಜನಾದ್ರಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದಲ್ಲದೆ ಪೂರ್ಣಕುಂಭದೊಂದಿಗೆ ಸ್ವಾಗತ ಕೋರಿತು.

ಇದಕ್ಕೂ ಮುನ್ನ, ಈ ಹಿಂದೆ ಅಂಜನಾದ್ರಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ವಿದ್ಯಾದಾಸ ಬಾಬಾ ಅವರು ಆಗಮಿಸಿ ಪೂಜೆಗೆ ಮುಂದಾದರು. ಈ ಸಂದರ್ಭದಲ್ಲಿ ಅವರನ್ನು ಪೂಜೆಗೆ ಬಿಡದ ಅಧಿಕಾರಿಗಳು ಹಾಗೂ ವಿದ್ಯಾದಾಸರ ನಡುವೆ ವಾಗ್ವಾದ ನಡೆಯಿತು. ನನಗೆ ಪೂಜೆಗೆ ಅವಕಾಶ ನೀಡಿ ಎಂದು ಆಗ್ರಹಿಸಿ ಸ್ಥಳದಲ್ಲಿ ಧರಣಿ ಕುಳಿತುಕೊಳ್ಳಲು ಮುಂದಾದ ವಿದ್ಯಾದಾಸ ಬಾಬಾರನ್ನು ಪೊಲೀಸರು ವಶಕ್ಕೆ ಪಡೆದರು.

ಈ ಹಿಂದೆ ಅಂಜನಾದ್ರಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ವಿದ್ಯಾದಾಸ ಬಾಬಾ, ಮಹಿಳೆಯೊಂದಿಗೆ ಲೈಂಗಿಕ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿವಾದ ಮಾಡಿಕೊಂಡಿದ್ದರು. ಬಳಿಕ ಅಂಜನಾದ್ರಿಯಿಂದ ವಿದ್ಯಾದಾಸ ಬಾಬಾರನ್ನು ಹೊರಹಾಕಲಾಗಿತ್ತು. ಅಂಜನಾದ್ರಿಯನ್ನು ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಲಾಗಿತ್ತು. ಈ ಕುರಿತು ವಿದ್ಯಾದಾಸ ಬಾಬಾ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೂಜೆ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Anjanadri hill | ಅಂಜನಾದ್ರಿ ಬೆಟ್ಟದ‌ ಸೆಕ್ಸ್‌, ಡ್ರಗ್‌ ಮಾಫಿಯಾ ತಡೆಯದಿದ್ದರೆ ಹೋರಾಟ: ಮುತಾಲಿಕ್‌ ಎಚ್ಚರಿಕೆ

Exit mobile version