ಕೊಪ್ಪಳ: ಸತತ ಮೂರು ಬಾರಿ ಸೋಲನುಭವಿಸಿದ್ದ ಕಾಂಗ್ರೆಸ್‌ಗೆ ಈ ಬಾರಿ ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ (Koppal Election Result 2024) ಗೆಲುವಿನ ಸಿಹಿ ಸಿಕ್ಕಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೊಪ್ಪಳ ಮಾಜಿ ಶಾಸಕ ಕೆ. ಬಸವರಾಜ್ ಹಿಟ್ನಾಳ್ ಅವರ ಪುತ್ರ ಕೆ. ರಾಜಶೇಖರ್ ಹಿಟ್ನಾಳ್ (Rajashekar Hitnal) ಅವರು ಬಿಜೆಪಿ ಡಾ.ಬಸವರಾಜ್ ಕ್ಯಾವಟರ್ (Dr Basavaraj Kyavator) ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಅವರು ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಬಸವರಾಜ್ ಕ್ಯಾವಟರ್ ಅವರು ಇದೇ ಮೊದಲ ಬಾರಿಗೆ ಚುನಾವಣೆ ರಾಜಕೀಯಕ್ಕೆ ಧುಮುಕಿದ್ದಾರೆ. ಖಂಡಿತವಾಗಿಯೂ ನರೇಂದ್ರ ಮೋದಿ ಅವರ ಅಲೆಯು ಕೆಲಸ ಮಾಡಲಿದೆ ಎಂದು ಹೇಳಲಾಗಿತ್ತು. ಆದರೆ, ಟಿಕೆಟ್ ವಂಚಿತ ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಬಸವರಾಜ್ ಕ್ಯಾವಟರ್ ಅವರಿಗೆ ನುಂಗಲಾರದ ತುತ್ತಾಗಿತ್ತು. ಹಾಗಾಗಿ, ಕೊಪ್ಪಳ ಲೋಕಸಭೆ ಚುನಾವಣೆ ಫಲಿತಾಂಶವು ಕುತೂಹಲ ಕೆರಳಿಸಿತ್ತು. ಆದರೆ, ಕಾಂಗ್ರೆಸ್ ಕೊನೆಗೂ ಗೆಲುವು ಸಾಧಿಸಿದೆ.
ರಾಜಶೇಖರ್ ಹಿಟ್ನಾಳ್ ಅವರು ಎರಡು ಬಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಇವರ ಸಹೋದರ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕೊಪ್ಪಳ ಕ್ಷೇತ್ರದ ಶಾಸಕರಾಗಿದ್ದಾರೆ. ಮಹಿಳೆಯರ ಮತಗಳನ್ನು ಸೆಳೆಯಲು ಗ್ಯಾರಂಟಿ ಯೋಜನೆಗಳಿದ್ದವು. ಡಾ.ಬಸವರಾಜ್ ಕ್ಯಾವಟರ್ ಅವರ ರಾಜಕೀಯ ಅನುಭವದ ಕೊರತೆಯನ್ನು ಪ್ಲಸ್ ಪಾಯಿಂಟ್ ಅನ್ನಾಗಿ ಮಾಡಿಕೊಂಡಿದ್ದರು. ಅದು ಈಗ ಅವರಿಗೆ ಫಲ ಸಿಕ್ಕಿದೆ.
2014, 2019ರ ಫಲಿತಾಂಶ ಏನಾಗಿತ್ತು?
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸಂಗಣ್ಣ ಕರಡಿ ವಿರುದ್ಧ ಕಾಂಗ್ರೆಸ್ ಮಾಜಿ ಶಾಸಕ ಬಸವರಾಜ್ ಹಿಟ್ನಾಳ್ ಸೋಲನುಭವಿಸಿದ್ದರು. ಇನ್ನು 2019ರ ಲೋಕಸಭೆ ಚುನಾವಣೆಯಲ್ಲಿ ಬಸವರಾಜ್ ಹಿಟ್ನಾಳ್ ಅವರ ಪುತ್ರ ರಾಜಶೇಖರ್ ಹಿಟ್ನಾಳ್ ಅವರು ಸ್ಪರ್ಧಿಸಿ, ಬಿಜೆಪಿಯ ಸಂಗಣ್ಣ ಕರಡಿ ಅವರ ವಿರುದ್ಧವೇ ಪರಾಭವಗೊಂಡಿದ್ದರು. ಸುಮಾರು 38 ಸಾವಿರ ಮತಗಳಿಂದ ರಾಜಶೇಖರ್ ಹಿಟ್ನಾಳ್ ಅವರು ಸೋಲನುಭವಿಸಿದ್ದರು.
ಇದನ್ನೂ ಓದಿ: Bagalkot Election Result 2024: ಬಾಗಲಕೋಟೆಯಲ್ಲಿ ಬಿಜೆಪಿಯ ಪಿ.ಸಿ.ಗದ್ದಿಗೌಡರ್‌ಗೆ ಜಯ