Site icon Vistara News

ಎಲೆಕ್ಷನ್‌ ಹವಾ | ಕುಷ್ಟಗಿ | ಎರಡನೇ ಬಾರಿ ಗೆಲ್ಲಿಸದ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ ಪೈಪೋಟಿ

kushtagi-assembly-constituency-has-never-elected-consecutively

ಮೌನೇಶ್‌ ಬಡಿಗೇರ್‌, ಕೊಪ್ಪಳ
ಕೊಪ್ಪಳ ಜಿಲ್ಲೆಯ ಒಟ್ಟು ಏಳು ತಾಲೂಕುಗಳ ಪೈಕಿ ಕುಷ್ಟಗಿಯೂ ಒಂದು. ಇಡೀ ತಾಲೂಕು ವ್ಯಾಪ್ತಿಯನ್ನು ಕುಷ್ಟಗಿ ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಐತಿಹಾಸಿಕ ಪುರದ ಸೋಮನಾಥ ದೇವಸ್ಥಾನ, ಪಂಚಪಕ್ಷಿ ಮಾರುತಿ ದೇವಸ್ಥಾನ ಸೇರಿದಂತೆ ಒಂದು ಕಾಲದಲ್ಲಿ ದಾಳಿಂಬೆ ಬೆಳೆಯಿಂದಲೂ ಅತ್ಯಂತ ಪ್ರಸಿದ್ದಿ ಪಡೆದ ತಾಲೂಕು ಇದು. 1952ರಲ್ಲಿಯೇ ರಚನೆಯಾಗಿರುವ ಈ ವಿಧಾನಸಭಾ ಕ್ಷೇತ್ರ ಕೊಪ್ಪಳ ಜಿಲ್ಲೆಯ ಅತ್ಯಂತ ವಿಶಿಷ್ಠ ಮತ್ತು ವಿಶೇಷತೆಯನ್ನು ಹೊಂದಿರುವ ಕ್ಷೇತ್ರವಾಗಿದೆ. ಸಮುದಾಯದ ಮತಗಳು ಅಷ್ಟೊಂದು ಇಲ್ಲದಿದ್ದ ಸಮುದಾಯದವರೂ ಈ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದ ಉದಾಹರಣೆ ಇದೆ. ಅಲ್ಲದೆ ಒಂದು ಬಾರಿ ಗೆದ್ದು, ಒಮ್ಮೆ ಸೋತು ಮತ್ತೆ ಗೆದ್ದವರು ಇದ್ದಾರೆ. ಆದರೆ ಒಂದು ಬಾರಿ ಗೆದ್ದವರು ಮತ್ತೆ ನಿರಂತರ ಎರಡನೇ ಬಾರಿಗೆ ಈ ಕ್ಷೇತ್ರದ ಮತದಾರ ಮಣೆಹಾಕಿಲ್ಲ. ಇದು ಈ ಕ್ಷೇತ್ರದ ವಿಶೇಷತೆ.

ನಿರಂತರ ಎರಡನೇ ಬಾರಿ ಗೆದ್ದ ಉದಾಹರಣೆ ಇಲ್ಲ

ಕುಷ್ಟಗಿ ವಿಧಾನಸಭಾ ಕ್ಷೇತ್ರ ಅತ್ಯಂತ ವಿಶೇಷತೆಯಿಂದ ಕೂಡಿದ ಕ್ಷೇತ್ರ. ಈ ಕ್ಷೇತ್ರದ ಮತದಾರ ಒಮ್ಮೆ ಅಧಿಕಾರ ನೀಡಿದವರಿಗೆ ನಿರಂತರ ಎರಡನೇ ಬಾರಿ ಅಧಿಕಾರ ನೀಡಿಲ್ಲ ಎನ್ನುವುದು 2018ರವರೆಗೆ ನಡೆದ ವಿಧಾನಸಭೆಯ ಎಲ್ಲ ಚುನಾವಣೆಗಳ ಫಲಿತಾಂಶ ಸಾಬೀತುಪಡಿಸುತ್ತದೆ. 1952ರಲ್ಲಿ ಲೋಕಸೇವಕ ಸಂಘದ ಅಂದಾನಪ್ಪ ಚಿನಿವಾಲರ, 1957ರಲ್ಲಿ ಕಾಂಗ್ರೆಸ್‌ನ ಪುಂಡಲೀಕಪ್ಪ ಜ್ಞಾನಮೋಠೆ, 1962ರಲ್ಲಿ ಲೋಕಸೇವಕ ಸಂಘದ ಕಾಂತರಾವ್ ದೇಸಾಯಿ, 1967ರಲ್ಲಿ ಕಾಂಗ್ರೆಸ್‌ನ ಪುಂಡಲೀಕಪ್ಪ ಜ್ಞಾನಮೋಠೆ, 1972ರಲ್ಲಿ ಕಾಂಗ್ರೆಸ್‌ನ ಕಾಂತರಾವ್ ದೇಸಾಯಿ, 1978ರಲ್ಲಿ ಕಾಂಗ್ರೆಸ್‌ನ ಎಂ.ಗಂಗಣ್ಣ, 1983 ರಲ್ಲಿ ಕಾಂಗ್ರೆಸ್‌ನ ಹನುಮಗೌಡ ಪಾಟೀಲ, 1985 ರಲ್ಲಿ ಜನತಾ ಪಕ್ಷದ ಎಂ.ಎಸ್. ಪಾಟೀಲ, 1989 ರಲ್ಲಿ ಕಾಂಗ್ರೆಸ್‌ನ ಹನುಮಗೌಡ ಪಾಟೀಲ, 1994 ರಲ್ಲಿ ಜನತಾದಳದ ಕೆ. ಶರಣಪ್ಪ, 1999ರಲ್ಲಿ ಕಾಂಗ್ರೆಸ್‌ನ ಹಸನಸಾಬ ದೋಟಿಹಾಳ, 2004 ರಲ್ಲಿ ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ, 2008ರಲ್ಲಿ ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ, 2013 ರಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ, 2018 ರಲ್ಲಿ ಕಾಂಗ್ರೆಸ್‌ನ ಅಮರೇಗೌಡ ಪಾಟೀಲ್ ಬಯ್ಯಾಪುರ ಆಯ್ಕೆಯಾಗಿದ್ದಾರೆ. ಇದರಲ್ಲಿ ಹನುಮಗೌಡ ಹಾಗೂ ದೊಡ್ಡನಗೌಡ ಪಾಟೀಲ ತಂದೆ ಮಗನಾಗಿದ್ದಾರೆ. ಇಬ್ಬರೂ ಎರಡು ಬಾರಿ ಸೋಲು ಅನುಭವಿಸಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಎಂ ಗಂಗಣ್ಣ, ಹನುಮಗೌಡ ಹಾಗೂ ದೊಡ್ಡನಗೌಡ ಕುರುಬ ಜನಾಂಗಕ್ಕೆ ಸೇರಿದವರಾಗಿದ್ದಾರೆ.

ಪುಂಡಲೀಕಪ್ಪ ಜ್ಞಾನಮೋಠೆ, ಕಾಂತರಾವ್ ದೇಸಾಯಿ ಎರಡು ಬಾರಿ ಶಾಸಕರಾಗಿದ್ದಾರೆ. ಅದರಲ್ಲಿ ಪುಂಡಲೀಕಪ್ಪ ಎರಡು ಬಾರಿ ಸೋಲು ಅನುಭವಿಸಿದ್ದರೆ, ಕಾಂತರಾವ್ ಒಂದು ಬಾರಿ ಸೋಲು ಅನುಭವಿಸಿದ್ದಾರೆ. ಇಬ್ಬೂ ಎರಡು ಬಾರಿ ಶಾಸಕರಾಗಿದ್ದರು. ಪುಂಡಲೀಕಪ್ಪ ಜ್ಞಾನಮೋಠೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ವಾರಕರಿ ಜನಾಂಗದವರಾಗಿದ್ದರು. ಕಾಂತರಾಬ್ ದೇಸಾಯಿ ಬ್ರಾಹ್ಮಣ ಸಮುದಾಯರವರು. ಮುಸ್ಲಿಂ ಜನಾಂಗದಿಂದ ಹಸನಸಾಬ ದೋಟಿಹಾಳ ಒಂದು ಬಾರಿ ಆಯ್ಕೆಯಾಗಿದ್ದಾರೆ. ಉಳಿದಂತೆ ಕೆ. ಶರಣಪ್ಪ, ಅಮರೇಗೌಡ, ಎಂ.ಎಸ್ ಪಾಟೀಲ ವೀರಶೈವ ಲಿಂಗಾಯತ ಸಮುದಾಯದವರು.

ದಾಖಲೆ ಬರೆಯುವ ಕನಸು, ನನಸಾಗಲು ಬಿಡದ ಪಟ್ಟು

ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೆ ನಿರಂತರ ಎರಡನೇ ಬಾರಿ ಗೆಲುವು ಸಾಧಿಸಿದ ಉದಾಹರಣೆ ಇಲ್ಲ. ಹೀಗಾಗಿ ಈ ದಾಖಲೆಯನ್ನು ಮುರಿಯಬೇಕು ಎಂದು ಅನೇಕರು ಶತಾಯಗತಾಯ ಪ್ರಯತ್ನಪಟ್ಟರೂ ಆಗಿಲ್ಲ. ಈ ಕ್ಷೇತ್ರಕ್ಕೆ ಮಸ್ಕಿಯಿಂದ ವಲಸೆ ಬಂದ ಅಮರೇಗೌಡ ಪಾಟೀಲ್ ಅಂತಹವರಿಗೂ ರಾಜಕೀಯ ಮರುಜೀವ ಕೊಟ್ಟಿದೆ. ಈ ಕ್ಷೇತ್ರದಲ್ಲಿ ಜಾತಿ ಮೇಲೆ ರಾಜಕಾರಣ ನಿಂತಿಲ್ಲ ಎಂಬ ಮಾತು ಅನೇಕ ಬಾರಿ ಸಾಬೀತಾಗಿದ್ದರೂ ಇತ್ತೀಚಿಗೆ ಜಾತಿಯಾಧಾರಿತ ರಾಜಕಾರಣ ನಡೆಯುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ. ಈ ಕ್ಷೇತ್ರದಲ್ಲಿ ಹೆಚ್ಚು ಲಿಂಗಾಯತ ಸಮುದಾಯದ ಮತದಾರರಿದ್ದಾರೆ. ಎರಡನೇ ಸ್ಥಾನದಲ್ಲಿ ಕುರುಬ ಸಮುದಾಯದಲ್ಲಿದ್ದಾರೆ. ಲಿಂಗಾಯತ ಸಮುದಾಯದಲ್ಲಿ ಇಬ್ಬರು ಸ್ಪರ್ಧಿಸಿದರೆ ಮತಗಳು ವಿಭಜನೆಗೊಂಡು ಲಿಂಗಾಯತೇತರ ಅಭ್ಯರ್ಥಿ ಗೆಲುವಿಗೆ ಕಾರಣವಾಗುತ್ತದೆ. ಹೀಗಾಗಿ ನಿರಂತರ ಎರಡನೇ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ಹೊಂದಿದ್ದ ಅಭ್ಯರ್ಥಿಗಳ ದಾಖಲೆ ಬರೆಯುವ ಕನಸು 2018 ರ ಚುನಾವಣೆಯವರೆಗೂ ಕನಸಾಗಿಯೇ ಉಳಿದಿದೆ.

2023 ರಲ್ಲಿ ಮುಖಾಮುಖಿ

2023 ರ ವಿಧಾನಸಭಾ ಚುನಾವಣೆಯಲ್ಲಿ ಕುಷ್ಟಗಿ ಕ್ಷೇತ್ರದಲ್ಲಿಯೂ ಮತ್ತೆ ಅದೇ ಅಮರೇಗೌಡ ಪಾಟೀಲ್ ಬಯ್ಯಾಪುರ ಹಾಗೂ ದೊಡ್ಡನಗೌಡ ಪಾಟೀಲ್ ಅವರು ಮುಖಾಮುಖಿಯಾಗಲಿದ್ದಾರೆ. ಪ್ರಸ್ತುತ ಶಾಸಕರಾಗಿರುವ ಅಮರೇಗೌಡ ಪಾಟೀಲ್ ಬಯ್ಯಾಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಗೂ ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ್ ಕಣಕ್ಕಿಳಿಯುವುದು ನಿಶ್ಚಿತ. ಆದರೆ ಕ್ಷೇತ್ರದಲ್ಲಿ ಹೆಚ್ಚು ಕುರುಬ ಸಮುದಾಯದ ಮತಗಳು ಇರುವುದರಿಂದ ಆ ಮತಗಳನ್ನು ಮುಖ್ಯವಾಗಿ ನಂಬಿಕೊಂಡು ಹಾಗೂ ಈ ಹಿಂದೆ(1991)ಜನತಾದಳದಿಂದ ಒಂದು ಬಾರಿ ಲೋಕಸಭೆಗೆ ಸ್ಪರ್ಧಿಸಿ ಸೋಲುಂಡಿರುವ ಸಿದ್ದರಾಮಯ್ಯ ಅವರೇನಾದರೂ ಈ ಬಾರಿ ಅದೇ ಕುಷ್ಟಗಿ ಕ್ಷೇತ್ರದಲ್ಲಿ ಅದೃಷ್ಠ ಪರೀಕ್ಷೆಗೆ ಇಳಿದರೆ ಹಣಾಹಣಿ ಜೋರಾಗಲಿದೆ. ಇದರ ಜತೆಗೆ ಬಿಜೆಪಿಯಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.  ಇದರಿಂದಾಗಿ ಕೊನೆ ಕ್ಷಣದಲ್ಲಿ ,ಕುಷ್ಟಗಿ ವಿಧಾನಸಭಾ ಕಣ ರಂಗೇರಲಿದೆ. ಆದರೆ ಕೊನೆ ಕ್ಷಣದ ಅಚ್ಚರಿಯ ಬೆಳವಣಿಗೆಗಳು ಏನಾದರೂ ಸಂಭವಿಸದೆ ಹೋದರೆ ಮತ್ತದೆ ಹಳೆ ಸ್ಪರ್ಧಿಗಳು ಕಣದಲ್ಲಿ ಮತ್ತೊಮ್ಮೆ ಎದುರಾಗಲಿದ್ದಾರೆ. ಕುರುಬ ಸಮುದಾಯದ ಮತಗಳೊಂದಿಗೆ ಬಿಜೆಪಿಯನ್ನು ಬೆಂಬಲಿಸುವ ಲಿಂಗಾಯತ ಮತಗಳು, ಉಪ್ಪಾರ ಸಮುದಾಯದ ಮತಗಳ ಹಾಗೂ ಯುವ ಮತದಾರರನ್ನು ನಂಬಿಕೊಂಡಿರುವ ಬಿಜೆಪಿಯ ದೊಡ್ಡನಗೌಡ ಈ ಬಾರಿ ಗೆಲುವು ನನ್ನದೆ ಎಂಬ ನಂಬಿಕೆಯಲ್ಲಿದ್ದಾರೆ. ಏಕೆಂದರೆ ಒಂದು ಬಾರಿ ಗೆದ್ದವರು ನಿರಂತರ ಎರಡನೇ ಬಾರಿ ಗೆಲ್ಲುವುದಿಲ್ಲ ಎಂಬ ನಂಬಿಕೆಯೂ ಇದರ ಹಿಂದೆ ಇದೆ.

ಪ್ರಸ್ತುತ ಶಾಸಕರಾಗಿರುವ ಕಾಂಗ್ರೆಸ್‍ನ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ವಿವಿಧ ಅಭಿವೃದ್ಧಿ ಕಾರ್ಯಗಳ ಜತೆಗೆ ಕೊರೊನಾ ಸಂಕಷ್ಟದಲ್ಲಿ ನಿರಂತರ ಜನರ ಸಂಪರ್ಕ ಹೊಂದ್ದಿದ್ದೇನೆ, ಅದರಿಂದಲೇ ಜಯಗಳಿಸುತ್ತೇನೆ ಎನ್ನುತ್ತಿದ್ದಾರೆ. ಆದರೆ ಲಿಂಗಾಯತ ಸಮುದಾಯದ ಮತ್ತೊಬ್ಬ ಪ್ರಭಾವಿ ಮುಖಂಡನೇನಾದರೂ ಸ್ಪರ್ಧಿಸಿದರೆ ಅಮರೇಗೌಡ ಪಾಟೀಲ್ ಅವರಿಗೆ ಗೆಲುವು ಕಷ್ಟವಾಗಲಿದೆ. ಇದರ ಜತೆಗೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಮಾಜಿ ಶಾಸಕ ಹಸನಸಾಬ ದೋಟಿಹಾಳ ಹಾಗೂ ನೀರಾವರಿ ಇಲಾಖೆಯ ನಿವೃತ್ತ ಅಧಿಕಾರಿ ಪ್ರಭಾಕರ ಚಿಣಿ ಸಹ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇತ್ತೀಚಿಗೆ ಕೊಪ್ಪಳ ತಾಲೂಕಿನ ವನಬಳ್ಳಾರಿಯಲ್ಲಿ ನಡೆದ ಮದುವೆ ಸಮಾರಂಭವೊಂದಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ಅಮರಗೌಡ ಪಾಟೀಲ್‌ ಹೆಸರು ಘೋಷಣೆ ಮಾಡಿ ಮತ ಯಾಚಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಆದರೆ ಕೊನೆ ಕ್ಷಣದಲ್ಲಿ ಯಾರಿಗೆ ಟಿಕೆಟ್‌ ಸಿಗುತ್ತದೆ ಎಂಬುದರ ಮೇಲೆ ಎಲ್ಲವೂ ನಿಂತಿದೆ.

ಬಿಜೆಪಿಯಿಂದ, ಈಗಾಗಲೆ ಎರಡು ಬಾರಿ ಶಾಸಕರಾಗಿರುವ ದೊಡ್ಡನಗೌಡ ಪಾಟೀಲರೇ ಪ್ರಬಲ ಆಕಾಂಕ್ಷಿ. ಕಳೆದ ಬಾರಿ ಸೋಲುಂಡಿರುವ ಪಾಟೀಲರ ಬದಲಿಗೆ ಹೊಸಬರಿಗೆ ಮಣೆ ಹಾಕಲು ಬಿಜೆಪಿ ನಿರ್ಧಾರ ಮಾಡಿದರೆ ಶರಣು ತಳ್ಳಿಕೇರಿ ಒಂದು ಆಯ್ಕೆ ಎನ್ನಲಾಗುತ್ತಿದೆ. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿದ್ದ ಶರಣು ತಳ್ಳಿಕೇರಿ ಈ ಹಿಂದೆ ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದವರು, ಇದೀಗ ಕುರಿ ಮೇಕೆ ಸಾಕಾಣಿಕೆದಾರರ ಸಹಕಾರ ಸಂಘದ ರಾಜ್ಯ ಅಧ್ಯಕ್ಷರೂ ಆಗಿದ್ದಾರೆ. ಮುಖ್ಯವಾಗಿ ರಾಜ್ಯ ಬಿಜೆಪಿ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿರುವುದು ಟಿಕೆಟ್‌ ತರುವಲ್ಲಿ ಅನುಕೂಲ ಆಗಬಹುದು ಎಂಬ ಮಾತಿದೆ.

2023 ರ ಸಂಭ್ಯಾವ್ಯ ಅಭ್ಯರ್ಥಿಗಳು

1. ಅಮರೇಗೌಡ ಪಾಟೀಲ್ ಬಯ್ಯಾಪುರ /ಪ್ರಭಾಕರ ಚಿಣಿ, ಹಸನಸಾಬ ದೋಟಿಹಾಳ, ಸಿದ್ದರಾಮಯ್ಯ (ಕಾಂಗ್ರೆಸ್)
2. ದೊಡ್ಡನಗೌಡ ಪಾಟೀಲ್ / ಶರಣು ತಳ್ಳಿಕೇರಿ (ಬಿಜೆಪಿ)

ಚುನಾವಣಾ ಫಲಿತಾಂಶ ಇತಿಹಾಸ

ಮತದಾರರ ವಿವರ

ಇದನ್ನೂ ಓದಿ | ಎಲೆಕ್ಷನ್‌ ಹವಾ | ಕನಕಗಿರಿ | ದಡೇಸೂಗೂರನ್ನು ಬದಿಗೆ ಸರಿಸಿ ಮತ್ತೆ ಅಂಗಡಿ ತೆರೆಯುವ ತವಕದಲ್ಲಿ ತಂಗಡಗಿ

Exit mobile version