ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ಸಮ್ಮುಖದಲ್ಲಿ ಸಾವಿರಾರು ಮಕ್ಕಳಿಗೆ ಶುಕ್ರವಾರ ಅಕ್ಷರಾಭ್ಯಾಸ ಕಾರ್ಯಕ್ರಮ ನೆರವೇರಿತು. ಮಕ್ಕಳು ತಂದಿದ್ದ ಪಾಟಿ, ನೋಟ್ ಪುಸ್ತಕದಲ್ಲಿ ಓಂ ನಮ ಶಿವಾಯ ಎಂಬ ಅಕ್ಷರವನ್ನು ಮಕ್ಕಳ ಕೈಹಿಡಿದು ಬರೆಸುವ ಮೂಲಕ ಸ್ವಾಮೀಜಿ ಅಕ್ಷರಾಭ್ಯಾಸ ಮಾಡಿಸಿದರು.
ಶ್ರೀಗಳ ಕೈಯಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಆಗುವುದೇ ಒಂದು ಪುಣ್ಯ ಎಂದು ಭಾವಿಸುತ್ತಾರೆ. ಮೊದಲ ಬಾರಿ ಶಾಲೆಗೆ ಹೋಗಲು ಸಿದ್ದರಾಗಿರುವ ತಮ್ಮ ಮಕ್ಕಳಿಗೆ ಶಾಲೆಗೆ ಕಳಿಸುವುದಕ್ಕೂ ಮುನ್ನ ಸಾಧು, ಸಂತರಿಂದ, ಗುರುಗಳಿಂದ ಅಕ್ಷರಾಭ್ಯಾಸ ಮಾಡಿಸಿದರೆ ಮಕ್ಕಳ ಶೈಕ್ಷಣಿಕ ಜೀವನ ಉಜ್ವಲವಾಗಿರುತ್ತದೆ ಎಂಬುದು ಪಾಲಕರ ನಂಬಿಕೆ.
ಹೀಗಾಗಿ ಜನರು ತಮ್ಮ ಮಕ್ಕಳನ್ನು ಶಾಲೆಗೆ ಮೊದಲ ಬಾರಿ ಸೇರಿಸುವಾಗ ಗುರುಗಳಿಂದ ಅಕ್ಷರಾಭ್ಯಾಸ ಮಾಡಿ ಶಾಲೆಗೆ ಕಳಿಸುವ ಪರಂಪರೆ ಇದೆ. ಇದಕ್ಕಾಗಿಯೇ ಕೊಪ್ಪಳ ಭಾಗದಲ್ಲಿ ಪ್ರತಿ ವರ್ಷ ಸಾವಿರಾರು ಮಕ್ಕಳನ್ನು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಕರೆತಂದು ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳ ಮೂಲಕ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಗವಿಮಠದಲ್ಲಿ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಸಾವಿರಾರು ಮಕ್ಕಳು ಅಕ್ಷರಾಭ್ಯಾಸದ ಮೂಲಕ ಶಾಲೆಗೆ ಹೋಗಲು ಸಿದ್ದರಾದರು. “ಮಕ್ಕಳಿಗಾಗಿ ಆಸ್ತಿಯನ್ನು ಮಾಡುವುದು ಬೇಡ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು” ಎಂಬುದು ಕೊಪ್ಪಳ ಶ್ರೀ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ದೂರದ ತುಮಕೂರಿನ ಸಿದ್ದಗಂಗಾ ಮಠ ಹಾಗೂ ಶೃಂಗೇರಿಯ ಶಾರದಾಂಬ ಮಠದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯುತ್ತದೆ. ಅಷ್ಟು ದೂರ ಹೋಗಿ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದು ಈ ಭಾಗದ ಎಲ್ಲ ಜನರಿಗೂ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಸುಮಾರು ವರ್ಷಗಳ ಹಿಂದೆ ಗವಿಮಠದಲ್ಲಿಯೂ ಅಕ್ಷರಾಭ್ಯಾಸ ಮಾಡಿಸುವ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ.
ಇದನ್ನೂ ಓದಿ | SSLC RESULT | ಬಡತನದಲ್ಲಿ ಅರಳಿದ ಪ್ರತಿಭೆಗಳು: ಕಷ್ಟಪಟ್ಟು ಟಾಪರ್‌ಗಳಾದರು