ಕೊಪ್ಪಳ: ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿಗಳಿಗೆ ಮತ್ತು ನಾಯಕರಿಗೆ ಕೊರತೆಯಿಲ್ಲ. ಬಿಜೆಪಿಯಲ್ಲಿ ಮೋದಿ ಬಿಟ್ಟರೆ ಪ್ರಧಾನಿ ಯಾರಾಗ್ತಾರೇ? ನಿಜವಾಗಿಯೂ ನಾಯಕತ್ವ ಕೊರತೆ ಬಿಜೆಪಿಗಿದೆ ಎಂದು ಸಿಎಂ ಸಿದ್ದರಾಮಯ್ಯ (Lok Sabha Election 2024) ಹೇಳಿದ್ದಾರೆ.
ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿಗಳಿಗೆ ಮತ್ತು ನಾಯಕರಿಗೆ ಕೊರತೆಯಿಲ್ಲ. ಬಿಜೆಪಿಯಲ್ಲಿ ಮೋದಿ ಬಿಟ್ಟರೇ ಪ್ರಧಾನಿ ಯಾರಾಗ್ತಾರೇ, ನಿಜವಾಗಿಯೂ ನಾಯಕತ್ವ ಕೊರತೆ ಬಿಜೆಪಿಗಿದೆ. ಹೀಗಾಗಿ ಸೋಲಿನ ಹತಾಶೆಯಿಂದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಹಿಂದಿನ ಬಿಜೆಪಿ ಸರ್ಕಾರದ 40% ಕಮಿಷನ್ ಬಗ್ಗೆ ತನಿಖೆ ನಡೆಯುತ್ತಿದ್ದು, ಒಂದು ವೇಳೆ ಕಮಿಷನ್ ಪಡೆದ ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: Karnataka Weather: ರಾಯಚೂರಿನಲ್ಲಿ ರಾಜ್ಯದಲ್ಲೇ ಗರಿಷ್ಠ ಉಷ್ಣಾಂಶ ದಾಖಲು; ಇನ್ನೂ 4 ದಿನ ಶಾಖದ ಅಲೆ ಎಚ್ಚರಿಕೆ
ಮೋದಿ ಕಳೆದ ಹತ್ತು ವರ್ಷದಲ್ಲಿ ಪ್ರಮಾಣಿಕ ಆಡಳಿತ ನಡೆಸಲಿಲ್ಲ. ರೈತರಿಗೆ ಜನಪರ ಕಾರ್ಯಕ್ರಮ ಜಾರಿ ಮಾಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಶ್ವಾಸನೆ ನೀಡಿದ ಐದು ಗ್ಯಾರಂಟಿ ಜಾರಿಗೊಳಿಸಿದ್ದೇವೆ. ಈವರೆಗೂ ಶಕ್ತಿ ಯೋಜನೆಯಡಿ 200 ಕೋಟಿ ಜನ ಸೌಲಭ್ಯ ಪಡೆದಿದ್ದಾರೆ. ಬಡವರೆಲ್ಲಾ ಕಾಂಗ್ರೆಸ್ ಪರ ಆಗ್ತಾರೆ ಅಂತ ಮೋದಿಯವರು ಅಕ್ಕಿ ನೀಡದೇ ರಾಜ್ಯದ ಜನತೆಗೆ ದ್ರೋಹ ಮಾಡಿದ್ರು. ಹೀಗಾಗಿ ಅಕ್ಕಿ ಬದಲಾಗಿ ಐದು ಕೆಜಿ ಅಕ್ಕಿಯ ಹಣ ಫಲಾನುಭವಿ ಅಕೌಂಟ್‌ಗೆ ಹಾಕುತ್ತಿದ್ದೇವೆ ಎಂದರು.
ದೇಶದಲ್ಲಿ ಹಿಂದುಳಿದ, ದಲಿತ, ಎಸ್‌ಟಿ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್. ಆದರೆ, ಮೋದಿಯವರು ಮೀಸಲಾತಿ ವಿರುದ್ಧ ಇದ್ದಾರೆ. ಜಾತಿ ಜಾತಿಗಳ ವಿರುದ್ಧ ಎತ್ತಿಕಟ್ಟುವ ಮೋದಿ ಸ್ಕೆಚ್ ವಿಫಲಗೊಳಿಸಿ. ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸುವ ಬಿಜೆಪಿಗರಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಎಂದರು.
ಕಾಂಗ್ರೆಸ್‌ನ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಇಡೀ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿ ಅಂಬಾನಿ, ಅದಾನಿಯಂತಹ ಬಂಡವಾಳಶಾಹಿ ಶ್ರೀಮಂತರ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರು. ರೈತರ ಸಾಲ ಮನ್ನಾ ಮಾಡಲು ಒಪ್ಪದ ಮೋದಿ ಯಾರ ಪರ ಎನ್ನುವುದನ್ನು ದೇಶದ ಜನರಿಗೆ ಮನವರಿಕೆಯಾಗಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಪ್ರಧಾನಿ ಮೋದಿ ಹತ್ತು ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ ? ಎಷ್ಟು ಅಭಿವೃದ್ಧಿ ಮಾಡಿದರು? ರೈತರ ಬದುಕಿನಲ್ಲಿ ಬದಲಾವಣೆ ಆಯ್ತಾ? ಅಚ್ಛೇದಿನ ಬಂತಾ? ನಿಮ್ಮ ಖಾತೆಗೆ 15 ಲಕ್ಷ ಬಂತಾ? ಬಿಜೆಪಿ ನುಡಿದಂತೆ ನಡೆದಿದ್ದಾರಾ? ಎಂದು ಆಲೋಚಿಸಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಗ್ಯಾರಂಟಿ ಅನುಷ್ಠಾನಗೊಳಿಸಿ, ರಾಜ್ಯದ ಬಡವರ ಹಿತ ಕಾಪಾಡಿದ್ದೇವೆ ಎಂದರು.
ಇಲ್ಲಿನ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದರಿಂದ ನವಲಿಯಲ್ಲಿ ಅಣೆಕಟ್ಟು ಕಟ್ಟಲು ನಾವು ಮುಂದಾಗಿದ್ದೇವೆ. ಇದಕ್ಕಾಗಿ ನಮ್ಮ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದು, ಚುನಾವಣೆ ನಂತರ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಜತೆ ಚರ್ಚೆ ಮಾಡಿ, ರೈತರ ಬದುಕು ರಕ್ಷಿಸುತ್ತೇವೆ ಎಂದರು.
ಇದನ್ನೂ ಓದಿ: Toyota Kirloskar Motor: ಕಾರ್ ಕೇರ್‌ಗೆ ʼಟಿಗ್ಲೊಸ್ʼ ಆರಂಭಿಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್
ಬಡವರಿಗಾಗಿ ಕಾರ್ಯಕ್ರಮ ರೂಪಿಸಿದ್ದರೆ ಅದು ಕಾಂಗ್ರೆಸ್ ಪಕ್ಷ. ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಮೋದಿ ಗ್ಯಾರಂಟಿಯಿಂದ ನಿಮ್ಮ ಹೊಟ್ಟೆ ತುಂಬುತ್ತಿದೆಯೇ? ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ನಮ್ಮ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಅನುಮೋದನೆ ನೀಡಿದೆವು ಎಂದು ತಿಳಿಸಿದರು.
ಸಚಿವರಾದ ಶಿವರಾಜ ತಂಗಡಗಿ, ಭೈರತಿ ಸುರೇಶ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಮತ್ತು ಕಾಡಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಮಾತನಾಡಿದರು.
ಇದನ್ನೂ ಓದಿ: Labour Day 2024: ಮೇ 1ರ ಕಾರ್ಮಿಕ ದಿನಾಚರಣೆಯ ಹಿನ್ನೆಲೆ ಏನು? ಏನಿದರ ಸಂದೇಶ?
ಈ ಸಂದರ್ಭದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಸ್ಕಿ ಶಾಸಕ ಬಸವನಗೌಡ ತುರವಿಹಾಳ, ಮಾಜಿ ವಿಪ ಸಭಾಪತಿ ವಿ.ಆರ್.ಸುದರ್ಶನ, ವೆಂಕಟರಾಮಯ್ಯ, ವಿಪ ಸದಸ್ಯ ಶರಣೇಗೌಡ ಪಾಟೀಲ್ ಬಯ್ಯಾಪುರ, ಎಎಪಿ ಜಿಲ್ಲಾಧ್ಯಕ್ಷ ಕನಕಪ್ಪ, ರಾಜ್ಯ ಕಾರ್ಯದರ್ಶಿ ಸಿದ್ದನಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ಮುಖಂಡರಾದ ಬಸವರಾಜಸ್ವಾಮಿ ಮಳೇಮಠ, ಅಮರೇಶ ಕರಡಿ, ಕೃಷ್ಣ ಎಂ. ಇಟ್ಟಂಗಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.