Site icon Vistara News

Anjanadri Hill : ಕರ್ನಾಟಕದಲ್ಲೇ ಇದೆ ಹನುಮಂತನ ಜನ್ಮಸ್ಥಳ; ಪ್ರಸಿದ್ಧ ತಾಣದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

Anjanadri hills

ರಾಮಾಯಣದಲ್ಲಿ ರಾಮ ಸೀತೆಯಂತೆಯೇ ಪ್ರಮುಖ ಪಾತ್ರ ವಹಿಸಿದ್ದು ಹನುಮಂತ. ಹನುಮಂತನ ಮಹಿಮೆ ಬಗ್ಗೆ ಹಲವಾರು ಪುರಾಣ ಕಥೆಗಳಿವೆ. ರಾವಣನ ಲಂಕೆಯನ್ನೇ ಸುಟ್ಟು ರಾಮ ಸೀತೆಯನ್ನು ಒಂದು ಮಾಡಲು ಯತ್ನಿಸಿದ್ದ ಆ ಹನುಮಂತ ಜನಿಸಿದ ಸ್ಥಳ ನಮ್ಮ ಕರ್ನಾಟಕದಲ್ಲಿಯೇ (Anjanadri Hill) ಇದೆ. ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲೇ ಹನುಮ ಹುಟ್ಟಿದ್ದು ಎಂದು ಹಿಂದಿನ ಕಾಲದಿಂದಲೂ ನಂಬಲಾಗಿದೆ.


ಹನುಮಂತನ ತಾಯಿಯ ಹೆಸರು ಅಂಜನಾ. ಅದೇ ಕಾರಣಕ್ಕೆ ಹನುಮಂತನನ್ನು ಆಂಜನೇಯ ಎಂದು ಕರೆಯಲಾಗುತ್ತಿತ್ತು. ಆತ ಹುಟ್ಟಿದ ಸ್ಥಳವಾದ್ದರಿಂದಲೇ ಈ ಸ್ಥಳಕ್ಕೆ ಅಂಜನಾದ್ರಿ ಎಂದು ಹೆಸರು ಬಂದಿತು ಎನ್ನುವ ಪ್ರತೀತಿಯಿದೆ. ಇಲ್ಲಿರುವ ಬೆಟ್ಟವನ್ನು ಅಂಜನಾದ್ರಿ ಬೆಟ್ಟ ಎಂದೇ ಕರೆಯಲಾಗುತ್ತದೆ.

ಇದನ್ನೂ ಓದಿ: Places To Visit In July : ಜುಲೈ ತಿಂಗಳಲ್ಲಿ ಸುಮಧುರ ಪ್ರವಾಸಕ್ಕೆ ಸೂಕ್ತ ಸ್ಥಳಗಳಿವು…
ಈ ಬೆಟ್ಟದ ಮೇಲೆ ಹತ್ತಿ ನಿಂತು ನೋಡಿದರೆ ವಿಹಂಗಮವಾದ ಸೂರ್ಯಾಸ್ತಮಾನವನ್ನು ನೋಡಬಹುದು. ಹಾಗೆಯೇ ಬೆಟ್ಟಗಳು, ಬಂಡೆಗಳ ನಡುವೆ ತುಂಗಭದ್ರಾ ನದಿ ಬಳುಕುತ್ತ ಹರಿಯುವುದನ್ನೂ ಕಣ್ತುಂಬಿಸಿಕೊಳ್ಳಬಹುದು. ಬೆಟ್ಟದ ಕೆಳಗೆ ಅಲ್ಲಲ್ಲಿ ಭತ್ತದ ಗದ್ದೆಗಳು, ತೆಂಗಿನ ತೋಟಗಳು ಇರುವುದರಿಂದ ನಿಮ್ಮ ಕಣ್ಣಿಗೆ ಹಸಿರಿನ ಸಿರಿ ಕಂಡು ತಂಪಾಗುತ್ತದೆ. ವಿಶ್ವ ಪ್ರಸಿದ್ಧ ಹಂಪಿಗೆ ಸನಿಹದಲ್ಲಿಯೇ ಈ ಸ್ಥಳ ಇರುವುದರಿಂದಾಗಿ ಹಂಪಿಗೆ ಭೇಟಿ ನೀಡುವ ಪ್ರವಾಸಿಗರೆಲ್ಲರೂ ತಪ್ಪದೆ ಈ ಅಂಜನಾದ್ರಿ ಬೆಟ್ಟಕ್ಕೂ ಭೇಟಿ ನೀಡುತ್ತಾರೆ.


ಈ ಸ್ಥಳವನ್ನು ಪುರಾಣಗಳಲ್ಲಿ ಕಿಷ್ಕಿಂದೆ ಎಂದು ಕರೆಯಲಾಗುತ್ತಿತ್ತು. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆಯೇ ಇಲ್ಲಿಯ ಪ್ರಾಮುಖ್ಯತೆಯೂ ಹೆಚ್ಚಿರುವುದರಿಂದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದರು.

anjanadri hill

ಅಂಜನಾದ್ರಿ ಹಾದಿ ಹೇಗೆ?

ಅಂಜನಾದ್ರಿ ಕೊಪ್ಪಳ ಜಿಲ್ಲೆಯಲ್ಲಿದೆ. ಕೊಪ್ಪಳ ಜಿಲ್ಲೆಗೆ ವಿಮಾನ ಸಂಪರ್ಕ ಇನ್ನೂ ಸಿದ್ಧವಾಗಿಲ್ಲ. ಹಾಗಾಗಿ ನೀವು ರಸ್ತೆ ಮಾರ್ಗವಾಗಿಯೇ ಇಲ್ಲಿಗೆ ಹೋಗಬೇಕು. ಹಂಪಿಯಿಂದ ಅಂಜನಾದ್ರಿ ಕಡೆ ಪ್ರವಾಸ ಬೆಳೆಸುವುದಾದರೆ ಕೊರಕಲ್‌ ಬೋಟ್‌ ಮೂಲಕ ತುಂಗಭದ್ರಾ ನದಿಯನ್ನು ದಾಟಿ ಅಂಜನಾದ್ರಿ ಬೆಟ್ಟ ಸೇರಿಕೊಳ್ಳಬಹುದು. ಈ ಬೆಟ್ಟಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ವಿಜಯನಗರ ವಿಮಾನ ನಿಲ್ದಾಣ. ಅಲ್ಲಿಂದ 72.3ಕಿ.ಮೀ. ಇರುವ ಅಂಜನಾದ್ರಿಗೆ ಸರಿಸುಮಾರ ಒಂದೂವರೆ ಗಂಟೆಯ ಪ್ರಯಾಣ ಮಾಡಬೇಕಾಗುತ್ತದೆ.


ಇಲ್ಲಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಬೆಂಗಳೂರು ವಿಮಾನ ನಿಲ್ದಾಣವು 347 ಕಿ.ಮೀ. ದೂರದಲ್ಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಅಂಜನಾದ್ರಿಗೆ 123 ಕಿ.ಮೀ. ಅಂತರವಿದ್ದು, ಎರಡು ತಾಸುಗಳಲ್ಲಿ ಅಲ್ಲಿಗೆ ಸೇರಿಕೊಳ್ಳಬಹುದು.

ಇದನ್ನೂ ಓದಿ: Tiger Sighting: ಹುಲಿಯ ಲಂಗೂರ್‌ ಬೇಟೆ, ಪ್ರವಾಸಿಗರಿಗೆ ಕಂಡ ಅಪರೂಪದ ದೃಶ್ಯ
ರೈಲು ಪ್ರಯಾಣ ಮಾಡಿಕೊಂಡು ಇಲ್ಲಿಗೆ ಬರುವುದಾದರೆ ನಿಮಗೆ ಹತ್ತಿರದ ರೈಲು ನಿಲ್ದಾಣವೆಂದರೆ ಅದು ಕೊಪ್ಪಳ, ಹೊಸಪೇಟೆ ಮತ್ತು ಮುನಿರಾಬಾದ್‌. ಮೂರು ರೈಲ್ವೆ ನಿಲ್ದಾಣಗಳಿಂದ ಸುಮಾರು 40 ಕಿ.ಮೀ. ದೂರದಲ್ಲಿ ಅಂಜನಾದ್ರಿ ಬೆಟ್ಟವಿದೆ. ಕೊಪ್ಪಳದಿಂದ ಇಲ್ಲಿಗೆ ರಾಜ್ಯ ಸರ್ಕಾರದ ಸಾರಿಗೆ ಬಸ್ಸುಗಳು ಸಾಕಷ್ಟು ಇರುವುದರಿಂದ ಅರಾಮವಾಗಿ ನೀವು ಇಲ್ಲಿಗೆ ಹೋಗಬಹುದು.

ನಿಮಗಿದು ಗೊತ್ತಿರಲಿ:

ಈ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಂಗಗಳಿವೆ. ಅವುಗಳೊಂದಿಗೆ ಆಟವಾಡಲು ಅಥವಾ ಆಹಾರ ನೀಡಲು ಹೋಗಬೇಡಿ. ಬೆಟ್ಟಕ್ಕೆ 550 ಮೆಟ್ಟಿಲುಗಳಿದ್ದು ಬೆಟ್ಟ ಹತ್ತುವುದಕ್ಕೆ ನಿಮಗೆ 45 ನಿಮಿಷಗಳು ಬೇಕಾಗುತ್ತದೆ. ಪಾದರಕ್ಷೆಗಳನ್ನು ಬೆಟ್ಟದ ಮೇಲೆಯೇ ಬಿಡಬಹುದು. ಈ ದೇವಸ್ಥಾನಕ್ಕೆ ಯಾವುದೇ ಪ್ರವೇಶ ಟಿಕೆಟ್‌ ಬೇಕಿಲ್ಲ. ಬೆಟ್ಟ ಹತ್ತಬೇಕಾಗಿರುವುದರಿಂದ ಮಧ್ಯದಲ್ಲಿ ಬಾಯಾರಿಕೆ ತಣಿಸಿಕೊಳ್ಳುವುದಕ್ಕೆ ನೀರಿನ ಬಾಟೆಲ್‌ ಒಯ್ಯುವುದು ಒಳ್ಳೆಯದು.

Exit mobile version