ಕೊಪ್ಪಳ: ಯಾರೇ ಆಗಲಿ ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡಾಗ, ತಮ್ಮವರ ಪರವಾಗಿ ನಿಲ್ಲಬೇಕು ಎಂದಾದಾಗ ಯಾವ ಕೆಳಮಟ್ಟಕ್ಕೂ ಇಳಿಯಬಲ್ಲರು ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ. ತನ್ನ ಆಪ್ತನ ಮೇಲೆ ಅತ್ಯಾಚಾರದ (Physical Abuse) ಆರೋಪ ಕೇಳಿ ಬಂದಾಗ ಕಾಂಗ್ರೆಸ್ ನಾಯಕ, ಮಾಜಿ ಶಾಸಕರೊಬ್ಬರು (Former MLA) ಯುವತಿಯನ್ನೇ ದೂಷಣೆ ಮಾಡಿದ್ದಾರೆ. ನೀನು ಒಪ್ಪದೆ ಅತ್ಯಾಚಾರ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ʻʻಒಂದೇ ಕೈಯಲ್ಲಿ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ, ಹಾಗೆಯೇ ಜಗತ್ತಿನಲ್ಲಿ ಒಬ್ಬರಿಂದ ಅತ್ಯಾಚಾರ ಮಾಡಲು ಸಾಧ್ಯವಿಲ್ಲʼʼ ಎನ್ನುವುದು ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ (Kushtagi Former MLA), ಕಾಂಗ್ರೆಸ್ ಮುಖಂಡ ಅಮರೇಗೌಡ ಬಯ್ಯಾಪುರ (Amaregouda Bayyapura) ಅವರ ವಾದ.
ಏನಿದು ಪ್ರಕರಣ? ಯಾಕೆ ಹೀಗೆ ಹೇಳಿದರು?
ಕುಷ್ಟಗಿ ತಾಲೂಕಿನ ಎಂ. ಗುಡದೂರು ಗ್ರಾಮದ ಕಾಂಗ್ರೆಸ್ ಮುಖಂಡ ಸಂಗನಗೌಡ ಎಂಬಾತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಾಗಿತ್ತು. ಅಕ್ಟೋಬರ್ 10ರಂದು ಆತ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಹಿಳೆ ದೂರು ನೀಡಿದ್ದನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಮೀನಮೇಷ ಎಣಿಸುತ್ತಿದ್ದರು. ಹೀಗಾಗಿ ಸಂತ್ರಸ್ತೆಯ ಮಾವನಾಗಿರುವ ಯಮನೂರಪ್ಪ ಎಂಬವರು ನ್ಯಾಯ ಕೋರಿ ಕೊಪ್ಪಳ ಎಸ್ಪಿಗೆ ದೂರು ನೀಡಿದ್ದರು. ಹಾಗೆಯೇ ಕುಷ್ಟಗಿಯ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಬಳಿಯೂ ಯಮನೂರಪ್ಪ ಅವರಿಗೂ ಮನವಿ ಮಾಡಿದ್ದರು. ಆರೋಪಿ ಕೂಡಾ ಕಾಂಗ್ರೆಸ್ ಪಕ್ಷದವನಾಗಿರುವುದರಿಂದ ನ್ಯಾಯ ಸಿಗಬಹುದು ಎಂಬ ನಂಬಿಕೆಯಲ್ಲಿ ಯಮನೂರಪ್ಪ ದೂರು ಕೊಟ್ಟಿದ್ದರು.
ಆರೋಪಿ ಪರವೇ ನಿಂತ ಅಮರೇಗೌಡ ಬಯ್ಯಾಪುರ!
ಯಮನೂರಪ್ಪ ಹೋಗಿ ಸಂಗನ ಗೌಡ ಹೀಗೆ ಮಾಡಿದ್ದಾನೆ, ನ್ಯಾಯ ಕೊಡಿಸಿ ಎಂದು ಅಮರೇಗೌಡ ಬಯ್ಯಾಪುರ ಅವರಿಗೆ ಮನವಿ ಮಾಡಿದರೆ ಬಯ್ಯಾಪುರ ಅವರು ಆರೋಪಿ ಪರವಾಗಿಯೇ ವಾದ ಮಾಡಿದ್ದಾರೆ. ಜತೆಗೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಬಾರದಿತ್ತು ಎಂದು ಹೇಳಿದ್ದಾರೆ.
ಎಸ್‌ಪಿಗೆ ಯಾಕೆ ದೂರು ಕೊಟ್ಟಿದ್ದೀಯಾ? ನಿಮ್ಮ ಮರ್ಯಾದೆಯನ್ನು ನೀನೇ ಕಳೆದುಕೊಳ್ಳುತ್ತಿದ್ದೀಯಾʼʼ ಎಂದು ಹೇಳಿದ ಅವರು, ಒಬ್ಬರಿಂದ ಹೇಗೆ ಅತ್ಯಾಚಾರ ಮಾಡಲು ಸಾಧ್ಯ? ಇಬ್ಬರು ಸೇರಿದರೆ ಮಾತ್ರ ಇದು ಸಾಧ್ಯ ಎಂದು ಸಂತ್ರಸ್ತೆಯನ್ನೇ ಪ್ರಶ್ನಿಸಿದ್ದಾರೆ.
ʻʻನೀನು ಒಬ್ಬನನ್ನು ಕರೆದುಕೊಂಡು ಬಾ, ನಾನು ಓರ್ವ ಮಹಿಳೆಯನ್ನು ಕಳುಹಿಸುತ್ತೇನೆ. ಆ ವ್ಯಕ್ತಿ ಆಕೆಯನ್ನು ಅತ್ಯಾಚಾರ ಮಾಡಲಿ ನೋಡೋಣ. ಒಬ್ಬನಿಂದ ಅತ್ಯಾಚಾರ ಮಾಡಲು ಸಾಧ್ಯವಿಲ್ಲ. ಸೂಕ್ಷ್ಮ ವಿಚಾರ ಇದು, ಮರ್ಯಾದೆ ಪ್ರಶ್ನೆ ಇದೆ ಯೋಚಿಸು” ಎಂದು ಅಮರೇಗೌಡ ಬಯ್ಯಾಪುರ ಸಂತ್ರಸ್ತೆಯ ಮಾವನಿಗೇ ಬುದ್ಧಿ ಹೇಳಿದ್ದಾರೆ. ಈ ಆಡಿಯೋ ಈಗ ಸದ್ದು ಮಾಡಿದ್ದು, ಬಯ್ಯಾಪುರ ಅವರ ಸೂಕ್ಷ್ಮತೆಗೆ ಆಕ್ರೋಶ ವ್ಯಕ್ತವಾಗಿದೆ.
ಅತ್ಯಾಚಾರವಾಗಿದೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ಮಾಜಿ ಶಾಸಕರಿಗೆ ದೂರು ನೀಡಿದರೆ, ಆ ಮನುಷ್ಯ ಮಾತ್ರ ತಪ್ಪು ನಿಂದೂ ಇದೆ, ಎರಡು ಕೈ ಸೇರಿಸಿದರೆ ಮಾತ್ರ ಚಪ್ಪಾಳೆ ಎಂದಿದ್ದಾರೆ.