ಕೊಪ್ಪಳ: 1992ರ ಡಿಸೆಂಬರ್ 6ರ ರಾಮ ಜನ್ಮಭೂಮಿ -ಬಾಬರಿ ಮಸೀದಿ (Rama Janmabhumi Case) ಧ್ವಂಸ ಘಟನೆಯ ಬಳಿಕ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ (Rama Mandir Case) ತನಿಖೆಗೆ ಮರು ಜೀವ ನೀಡಿದ್ದರಿಂದ ಹುಟ್ಟಿಕೊಂಡ ರಾಜಕೀಯ ಮೇಲಾಟಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯೆ ನೀಡಿದ್ದಾರೆ.
ಅಂದು ಮಳಿಗೆಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣ ಈಗ ಮತ್ತೆ ಮೇಲೆದ್ದು ಬಂದಿದ್ದು, ಪ್ರಕರಣದ ಮೂರನೇ ಆರೋಪಿಯನ್ನು ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಲಾಗಿತ್ತು. ಪ್ರಕರಣದ ಇನ್ನುಳಿದ ಆರೋಪಿಗಳಾದ ರಾಜು ಧರ್ಮದಾಸ್, ಅಶೋಕ್ ಕಲಬುರಗಿ ಷಣ್ಮುಖ ಕಾಟಗಾರ, ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿ ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಆಗ ಒಂದು ಮೂವತ್ತರ ಆಸುಪಾಸಿನಲ್ಲಿದ್ದ ಯುವಕರು ಈಗ ವಯಸ್ಸಾಗಿ ಜೀವನದಲ್ಲಿ ಸೆಟ್ಲ್ ಆಗಿದ್ದಾರೆ. ಈಗ 31 ವರ್ಷಗಳ ಬಳಿಕ ಅವರನ್ನು ಬಂಧಿಸಲು ಮುಂದಾಗಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕಾಂಗ್ರೆಸ್‌ನ ಸೇಡಿನ ರಾಜಕಾರಣ ಎಂಬ ಆಪಾದನೆ ಕೇಳಿಬಂದಿದೆ.
ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನದಲ್ಲಿ ನಾವು ಯಾವುದೇ ದ್ವೇಷದ ರಾಜಕಾರಣ ಮಾಡುವುದಾಗಲಿ, ನಿರಪರಾಧಿಗಳನ್ನು ಬಂಧಿಸುವ ಕೆಲಸವಾಗಲಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳ ವಿಮಾನ ನಿಲ್ದಾಣದಲ್ಲಿ ಸ್ಪಷ್ಟಪಡಿಸಿದರು.
ಹಳೆ ಪ್ರಕರಣಗಳ ವಿಲೇವಾರಿ ನಡೆಯುತ್ತಿದೆ ಎಂದ ಸಿಎಂ
ತಪ್ಪು ಮಾಡಿದವರಿಗೆ ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು, ಸುಮ್ಮನೆ ಬಿಟ್ಟುಬಿಡಬೇಕೇ ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. ಅದರ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದರು. ನ್ಯಾಯಾಲಯದ ಸೂಚನೆ ಇದ್ದರೆ, ಅದರಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಅತಿಥಿ ಉಪನ್ಯಾಸಕರು ಪಾದಯಾತ್ರೆ ಮಾಡುವ ಬಗ್ಗೆ ಮಾತನಾಡಿ ಅವರೊಂದಿಗೆ ಮಾತನಾಡಿದ್ದರೂ ಪಾದಯಾತ್ರೆ ಮಾಡುತ್ತಿದ್ದಾರೆ. ಅವರನ್ನು ಖಾಯಂ ಮಾಡಿ ಎಂದು ಬೇಡಿಕೆ ಇದೆ. ಖಾಯಂ ಮಾಡುವುದು ಕಷ್ಟದ ಕೆಲಸ ಎಂದರು.
ಇದನ್ನೂ ಓದಿ: Ram Janmabhoomi: ಅಯೋಧ್ಯೆ ಕೇಸ್ ರಿಓಪನ್; ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ
ರಾಮಮಂದಿರ ಉದ್ಘಾಟನೆಗೆ ಕೇವಲ ರಾಮಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ರಾಮಮಂದಿರದ ಮುಖ್ಯ ಅರ್ಚಕರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಯಾರಿಗೆ ಆಹ್ವಾನ ಹೋಗಿದೆ, ಬಿಟ್ಟಿದೆ ಎಂದು ಗೊತ್ತಿಲ್ಲ ಆಹ್ವಾನ ಕೊಟ್ಟವರು ಹೋಗುತ್ತಾರೆ, ಇಲ್ಲದವರು ಇಲ್ಲ ಎಂದರು.
ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೂ.ಗಳನ್ನು ಒದಗಿಸಲಾಗಿದೆ. ಆಧಾರ್ ಲಿಂಕ್ ಮಾಡಿದ ನಂತರ ಮೊತ್ತ ರೈತರಿಗೆ ತಲುಪಲಿದೆ ಎಂದರು.