ಕೊಪ್ಪಳ: ಗಂಗಾವತಿ ತಾಲೂಕಿನ ಆನೇಗೊಂದಿ ಬಳಿ ಇರುವ ಪಂಪಾಸರೋವರದ ಹತ್ತಿರದ ಪುರಾತನವಾದ ದೇವಾಲಯದಲ್ಲಿ ಗುತ್ತಿಗೆದಾರರು ಜೀರ್ಣೋದ್ಧಾರ ನೆಪದಲ್ಲಿ ಮೂರ್ತಿಯನ್ನು ತೆರವುಗೊಳಿಸಿದ್ದಾರೆ. ಈ ಕಾರ್ಯಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ, ಜೀರ್ಣೋದ್ಧಾರ ಕಾರ್ಯ ಮಾಡುವವರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಗರ್ಭ ಗುಡಿಯಲ್ಲಿನ ಮಹಾಲಕ್ಷ್ಮಿ ಮೂರ್ತಿ ಅಗೆದಿರುವ ಹಿನ್ನೆಲೆಯಲ್ಲಿ ಪಂಪಾಸರೋವರದ ಮಹಾಲಕ್ಷ್ಮಿ ದೇವಿ ಮೂರ್ತಿಗೆ ಧಕ್ಕೆಯಾಗಿದೆ. ಸಚಿವ ಶ್ರೀರಾಮುಲು ಸ್ವಂತ ಖರ್ಚಿನಲ್ಲಿ ಮಹಾಲಕ್ಷ್ಮಿ ಮೂರ್ತಿ, ಶ್ರೀಚಕ್ರವನ್ನು ತೆರವುಗೊಳಿಸಿ ಜೀರ್ಣೋದ್ಧಾರ ಮಾಡುತ್ತಿದ್ದಾರೆ.
ಇದನ್ನೂ ಓದಿ | ಮಾಂಟೆಸ್ಸರಿ ಸ್ಕೂಲ್ ಆನ್ ವೀಲ್ಸ್, ಇದು ಬಡಮಕ್ಕಳ ಪಾಲಿಗೆ ಪ್ರೀತಿಯ ಅರಮನೆ!
ಅದು ಶ್ರಿ ವಿದ್ಯಾರಣ್ಯರು ಪ್ರತಿಷ್ಠಾಪಿಸಿದ್ದ ಶ್ರೀಚಕ್ರ ಎನ್ನಲಾಗುತ್ತದೆ. ಜೀರ್ಣೋದ್ಧಾರ ಮಾಡುವವಾಗ ಪ್ರಾಚ್ಯವಸ್ತು ಇಲಾಖೆಯಿಂದ ಅನುಮತಿ ಪಡೆದಿರಬಹುದು, ಆದರೆ ಮೂಲ ದೇವರಿಗೆ ಧಕ್ಕೆಯಾಗದಂತೆ ಜೀರ್ಣೋದ್ಧಾರ ಮಾಡಬೇಕಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ರಾಜ ವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು, ಹವಾಮಾ ಆಯುಕ್ತ ಸಿದ್ದರಾಮೇಶ ಭೇಟಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ಜೀರ್ಣೋದ್ಧಾರ ನೆಪದಲ್ಲಿ ಗರ್ಭಗುಡಿಯಲ್ಲಿ ದೇವರ ಮೂರ್ತಿ ತೆರವುಗೊಳಿಸಿದ್ದು ತಪ್ಪು. ಇದಕ್ಕೂ ಮೊದಲು ಪ್ರಾಚ್ಯವಸ್ತು ಇಲಾಖೆಯ ಇಂಜಿನಿಯರ್ ಸಮ್ಮುಖದಲ್ಲಿ ಕೆಲಸ ಮಾಡಬೇಕಿತ್ತು. ಸಿಸಿಟಿವಿ ಕಣ್ಗಾವಲಿನಲ್ಲಿ ಕೆಲಸ ಮಾಡಬೇಕಿತ್ತು. ಆದರೆ ಈ ಪ್ರಕರಣದಲ್ಲಿ ನಿಯಮ ಪಾಲಿಸಿಲ್ಲ. ಈ ಘಟನೆಗೆ ಕಾರಣರಾದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಈ ಬಗ್ಗೆ ಸಮಗ್ರ ತನಿಖೆ ಮಾಡಲಾಗುವುದು ಎಂದು ತಿಳಿಸಿದರು.
ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಪ್ರತಿಕ್ರಿಯಿಸಿ, ಮಹಾಲಕ್ಷ್ಮಿ ಮೂರ್ತಿ ಸ್ಥಾಪನೆಯ ವೇಳೆ ವಜ್ರ ವೈಡೂರ್ಯ ಹಾಕುವ ಸಂಪ್ರದಾಯವಿದೆ. ಏಕಾಏಕಿ ಗರ್ಭಗುಡಿಯಲ್ಲಿನ ಮೂರ್ತಿ ತೆರವುಗೊಳಿಸಿದ್ದು ಅನುಮಾನ ಮೂಡುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶ್ರೀನಿವಾಸ್ ಹೆಬ್ಬಾರ್ ನೇತೃತ್ವದಲ್ಲಿ ಮಾರುತಿ ದೇವಸ್ಥಾನದ ಪ್ರವೇಶದ್ವಾರ ಉದ್ಘಾಟನೆ