ಕೊಪ್ಪಳ: ಆಂಜನೇಯ ಹುಟ್ಟಿದ್ದು ಅಂಜನಾದ್ರಿ ಬೆಟ್ಟದಲ್ಲಿ ಎನ್ನುವುದಕ್ಕೆ ಐತಿಹಾಸಿಕವಾಗಿ ಸಾವಿರಾರು ವರ್ಷಗಳಿಂದ ಇದು ಕಿಷ್ಕಿಂದೆಯಾಗಿತ್ತು ಎನ್ನುವ ನಂಬಿಕೆಗಿಂತ ಇನ್ನೊಂದು ಪುರಾವೆ ಬೇಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇತ್ತೀಚಿನ ದಿನಗಳಲ್ಲಿ ಆಂಜನೇಯನ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆಗಳಿವೆ. ಮೂಲತಃ ಆಂಜನೇಯ ಹುಟ್ಟಿದ್ದು, ಅಂಜನಾದ್ರಿ ಬೆಟ್ಟದಲ್ಲಿಯೇ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಿದ್ದೇವೆ. ಈ ಕುರಿತು ಕರ್ನಾಟಕ, ಆಂಧ್ರಪ್ರದೇಶ ಬೇರೆ ಬೇರೆಯಾಗಿ ಘೋಷಣೆ ಮಾಡಬೇಕಿಲ್ಲ. ಇಡೀ ಭಾರತವಾಸಿಗಳು ಈ ವಿಷಯವನ್ನು ನಂಬಿದ್ದಾರೆ ಹಾಗೂ ಎಲ್ಲರಿಗೂ ವಿಶ್ವಾಸವಿದೆ ಎಂದರು.
ಆರಾಧ್ಯ ದೈವ ಆಂಜನೇಯ ಸ್ವಾಮಿಯ ಜನ್ಮಸ್ಥಳದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿತ್ತು. ಪ್ರತಿ ವರ್ಷ ಬಹಳಷ್ಟು ಯಾತ್ರಿಕರು ಆಗಮಿಸುತ್ತಾರೆ. ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆಯಾಗಬೇಕು ಎಂಬ ಉದ್ದೇಶವಿದೆ. ಅಂಜನಾದ್ರಿ ಬೆಟ್ಟದ ಕೆಳಗೆ ಹಾಗೂ ಮೇಲೆಯೂ ಅಭಿವೃದ್ಧಿಯಾಗಬೇಕು ಎನ್ನುವ ಚಿಂತನೆಯಿಂದ 100 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದೆ. ಆ ಪ್ರಕಾರ ಸರ್ಕಾರಿ ಆದೇಶವನ್ನೂ ಹೊರಡಿಸಲಾಗಿದೆ. ಯಾತ್ರಿಕರಿಗೆ ವಸತಿ, ಮಾರುಕಟ್ಟೆ , ಆಸ್ಪತ್ರೆ ಮುಂತಾದ ಎಲ್ಲ ರೀತಿಯ ಸವಲತ್ತುಗಳು ದೊರಕಬೇಕು ಮತ್ತು ರೋಪ್ ವೇ ನಿರ್ಮಿಸಿ ವಯಸ್ಸಾದವರಿಗೆ ಅವಕಾಶವನ್ನು ಕಲ್ಪಿಸುವುದು ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಬೆಳೆಸಬೇಕು ಎನ್ನುವ ಪರಿಕಲ್ಪನೆಯಿಂದ ಸ್ಥಳ ವೀಕ್ಷಣೆ ಮಾಡಲಾಗುತ್ತಿದೆ ಎಂದರು.
ಪ್ರವಾಸೋದ್ಯಮ ಸರ್ಕಿಟ್
ರೋಪ್ ವೇಗೆ ಟೆಂಡರ್ ಕರೆಯಲು ಸೂಚಿಸಲಾಗಿದೆ. ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಎಲ್ಲ ಪ್ರದೇಶಗಳ ಅಭಿವೃದ್ಧಿಯಾಗಬೇಕು. ಕರ್ನಾಟಕದಲ್ಲಿ ಮೈಸೂರು ಮತ್ತು ಹಂಪಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಸರ್ಕಿಟ್ ರೂಪಿಸಲು ಆದೇಶ ಹೊರಡಿಸಿದೆ. ಪುರಾತತ್ವ ಇಲಾಖೆಗೆ ಒಳಪಡುವ ಸ್ಥಳಗಳನ್ನು ಹೊರತುಪಡಿಸಿ ಹಂಪಿಯ ಸುತ್ತಮುತ್ತಲ ಪ್ರದೇಶಗಳು ಹಾಗೂ ಊರುಗಳ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲು ಸೂಚಿಸಿದೆ. ಐತಿಹಾಸಿಕ ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡಲು ಬಜೆಟ್‍ನಲ್ಲಿ ಅನುದಾನ ನೀಡಲಾಗಿದೆ. ಈಗ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಭೂಸ್ವಾಧೀನಕ್ಕಾಗಿ 24 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದು ಅತಿ ಶೀಘ್ರದಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕಾರ್ಯಗಳ ಕುರಿತು ಸಿಎಂ ಸೂಚನೆ
• ಅಂಜನಾದ್ರಿ ಬೆಟ್ಟದ ಕ್ಷೇತ್ರಕ್ಕೆ ಯಾತ್ರಿಕರು ಅವರಿಗೆ ವಸತಿ ಹಾಗೂ ಇತರ ಸೌಲಭ್ಯಗಳನ್ನು ಪೂರೈಸಬೇಕು. 100 ಕೋಟಿ ರೂ. ವೆಚ್ಚದಲ್ಲಿ 600 ಕೊಠಡಿಗಳ ಯಾತ್ರಿನಿವಾಸ, ಆಸ್ಪತ್ರೆ, ಶೌಚಾಲಯಗಳ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು.
• ಈ ಉದ್ದೇಶಕ್ಕಾಗಿ ವಾಸ್ತುಶಿಲ್ಪಿಗಳನ್ನು ನೇಮಿಸಿಕೊಂಡು 2 ತಿಂಗಳ ಅವಧಿಯಲ್ಲಿ ಕಾಮಗಾರಿಯ ವಿನ್ಯಾಸವನ್ನು ಸಿದ್ಧಪಡಿಸಿ, ಅನುಮೋದನೆಯನ್ನು ಪಡೆದುಕೊಳ್ಳಬೇಕು.
• ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಕ್ರಮ ತೆಗೆದುಕೊಂಡು ಈ ಬಗ್ಗೆ ಸ್ಥೂಲವಾದ ವರದಿಯನ್ನು ಸಲ್ಲಿಸಬೇಕು. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಗೆ 24 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಅನುದಾನವನ್ನೂ ನೀಡಲಾಗುವುದು.
• ವಾಹನ ನಿಲುಗಡೆ ವ್ಯವಸ್ಥೆಗೆ ಕನಿಷ್ಟ 35 ಎಕರೆ ಪ್ರದೇಶ ಅಗತ್ಯವಿದ್ದು, ಮೊದಲನೇ ಹಂತದಲ್ಲಿ ಕನಿಷ್ಟ 20 ಎಕರೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು.
• ಈ ಯೋಜನೆಯಡಿಯಲ್ಲಿ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಸ್ವಚ್ಛತೆಗಾಗಿ ಎಲ್ಲ ಕ್ರಮ ಕೈಗೊಳ್ಳಬೇಕು.
• ಕ್ಷೇತ್ರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಹಳಷ್ಟು ಧಾರ್ಮಿಕ ಕ್ಷೇತ್ರಗಳಲ್ಲಿ ಯಾತ್ರಿ ನಿವಾಸಗಳನ್ನು ನಿರ್ಮಿಸಲಾಗಿದ್ದರೂ, ನಿರ್ವಹಣೆ ಇರುವುದಿಲ್ಲ. ಮೊದಲ ದಿನದಿಂದಲೇ ನಿರ್ವಹಣೆ ಹಾಗೂ ಸ್ವಚ್ಛತಾ ಸೇವೆಯನ್ನು ಏಜೆನ್ಸಿಯಿಂದ ಪಡೆಯಬಹುದಾಗಿದೆ.
• ರಾಷ್ಟ್ರೀಯ ಹೆದ್ದಾರಿಯಿಂದ ಹಾಗೂ ಗಂಗಾವತಿಯಿಂದ ಸಂಪರ್ಕ ಕಲ್ಪಿಸಬಹುದಾಗಿದ್ದು, ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವುದು. ಯಾತ್ರಿನಿವಾಸದ ನಿರ್ಮಾಣದ ಜತೆಯಲ್ಲಿಯೇ ರಸ್ತೆ ನಿರ್ಮಾಣ ಕಾಮಗಾರಿಯೂ 7-8 ತಿಂಗಳಲ್ಲಿ ಪೂರ್ಣಗೊಳ್ಳಬೇಕು.
• ಅಂಜನಾದ್ರಿ ಕ್ಷೇತ್ರಕ್ಕೆ ಯಾತ್ರಿಕರ ಭೇಟಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು
• ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಮುಂದಿನ ಎರಡು ತಿಂಗಲ್ಲಿ ಭೂ ಸ್ವಾಧೀನ ಕಾರ್ಯಗಳು ಮುಗಿದು, 2 ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ನಾಲ್ಕು ತಿಂಗಳೊಳಗೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಬೇಕು. ಕಾಮಗಾರಿಗೆ ವೇಳಾಪಟ್ಟಿಯನ್ನು ನಿಗದಿಪಡಿಸಿ ಅದರಂತೆ ಕಾಮಗಾರಿ ಪೂರ್ಣಗೊಳಿಸಬೇಕು.
ಇದನ್ನೂ ಓದಿ | ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾರ್ಯಕ್ಕೆ ಸಿಗಲಿದೆ ಚಾಲನೆ: ಸಚಿವ ಆನಂದ್ ಸಿಂಗ್