ಉಡುಪಿ: ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ “ಕೋಟಿ ಕಂಠ ಗಾಯನ” ಕಾರ್ಯಕ್ರಮ ರಾಜ್ಯಾದ್ಯಂತ ಏಕಕಾಲಕ್ಕೆ ಪ್ರಾರಂಭವಾಗಿದ್ದು, ಉಡುಪಿಯ ಮಲ್ಪೆಯಲ್ಲಿ ಚಲಿಸುತ್ತಿರುವ ಬೋಟುಗಳಲ್ಲಿ ಕನ್ನಡ ಗೀತೆಗಳು ಮೊಳಗಿ ದಾಖಲೆ ಬರೆಯಿತು.
ಕರಾವಳಿ ಭಾಗವಾಗಿರುವ ಉಡುಪಿ ಜಿಲ್ಲೆಯಲ್ಲಿಯೂ ಶುಕ್ರವಾರ (ಅ. ೨೮) ಕನ್ನಡದ ಕಂಪು ಹರಡಿದ್ದು, ಸಮುದ್ರ ತೀರದಲ್ಲಿ ಕನ್ನಡ ಗೀತಗಾಯನ ಮೊಳಗಿದೆ. ನೂರಕ್ಕೂ ಅಧಿಕ ಬೊಟುಗಳಲ್ಲಿ ಕನ್ನಡ ಅಭಿಮಾನಿಗಳು, ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಮೀನುಗಾರರು, ನಾಗರಿಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಒಟ್ಟಾಗಿ ಕನ್ನಡ ಗೀತ ಗಾಯನ ಮಾಡಿದ್ದಾರೆ. ಈ ಮೂಲಕ ಕೋಟಿ ಕಂಠ ಗಾಯನದ ಸಿರಿಯಲ್ಲಿ ತಮ್ಮ ಧ್ವನಿಯನ್ನೂ ಸೇರಿಸಿದ್ದಾರೆ.
ಬೋಟುಗಳಲ್ಲಿ ಕನ್ನಡದ ಜಾತ್ರೆ
ಮಲ್ಪೆ ಸೈಂಟ್ ಮೆರೀಸ್ ಸಮುದ್ರ ಮಾರ್ಗದಲ್ಲಿ ಸಾವಿರಾರು ಗಾಯಕರಿಂದ ಕನ್ನಡ ಹಾಡು ಮೊಳಗಿದೆ. ಇದಕ್ಕಾಗಿ ಮೀನುಗಾರಿಕಾ ಬೋಟುಗಳನ್ನು ಬಳಸಿಕೊಳ್ಳಲಾಗಿದೆ. ಹಳದಿ-ಕೆಂಪು ಬಣ್ಣಗಳ ಕನ್ನಡದ ಬಾವುಟ ಸೇರಿದಂತೆ ಕನ್ನಡ ಶಾಲುಗಳನ್ನು ಧರಿಸಿ ಗಾಯಕರು ಮಿಂಚಿದರು. ಇದರ ಜತೆಗೆ ಹತ್ತಾರು ಬೋಟ್‌ಗಳು ಸಮುದ್ರದಲ್ಲಿ ಸಾಗಿದ್ದು, ಕನ್ನಡ ಹಾಡಿನ ಗಾಯನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದವು. ಮೀನುಗಾರರೂ ಸಹ ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡಿದ್ದು, ಕನ್ನಡ ಬಾವುಟ ಹಿಡಿದು ಬಂದಿದ್ದಾರೆ.
ಸಿಕ್ಕಿತು ಉತ್ತಮ ಸ್ಪಂದನೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯಾದ್ಯಂತ “ನನ್ನ ನಾಡು ನನ್ನ ಹಾಡುʼ ಶೀರ್ಷಿಕೆಯಡಿ “ಕೋಟಿ ಕಂಠ ಗಾಯನ” ಎಂಬ ವಿಶೇಷ ಕಾರ್ಯಕ್ರಮಕ್ಕೆ ಕರೆ ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೋಟಿಗೂ ಅಧಿಕ ಮಂದಿ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಮುಖ್ಯವಾಗಿ ಕಂಠೀರವ ಸ್ಟೇಡಿಯಂನಲ್ಲಿ ಪ್ರಧಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬೆಳಗ್ಗೆ 11 ಗಂಟೆಗೆ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಎಲ್ಲ ಕಡೆ ಏಕಕಾಲಕ್ಕೆ ಚಾಲನೆ ದೊರೆಯಿತು. ಕಂಠೀರವ ಸ್ಟೇಡಿಯಂನಲ್ಲಿ ಸುಮಾರು 50 ಸಾವಿರ ಮಂದಿ ಗಾನ ಸುಧೆ ಹರಿಸಿದರು. ಈ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಲಾಯಿತು.
ಇದನ್ನೂ ಓದಿ | ಇಂದು ದಾಖಲೆ ಕೋಟಿ ಕಂಠ ಗಾಯನ, ಕೋಟಿಗೂ ಹೆಚ್ಚು ಮಂದಿ ನೋಂದಣಿ, ಇದರ ಹಿಂದಿದೆ ರಾಜಕೀಯ ಲೆಕ್ಕಾಚಾರ!