ಬೆಂಗಳೂರು: ಭೂಮಿಯಲ್ಲೂ ಅದೇ ಹಾಡು, ಬಾನಿನಲ್ಲೂ ಅದೇ ಗಾನ, ಜಲದಲ್ಲೂ ಅದರದೇ ಅನುರಣನ. ಜಗತ್ತಿನೆಲ್ಲೆಡೆ ಕನ್ನಡ ಹಾಡುಗಳದೇ ಕಂಪನ. ಇದು ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಲಾದ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮ ಕಣ ಕಣದಲ್ಲೂ ಸೃಷ್ಟಿಸಿದ ಕಂಪನ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಅಭೂತಪೂರ್ವ ಕಾರ್ಯಕ್ರಮ ಇಡೀ ನಾಡನ್ನು ಒಂದೇ ಸ್ವರದಡಿ ತಂದು ನಿಲ್ಲಿಸಿದೆ. ವಿಧಾನ ಸೌಧದ ಮೆಟ್ಟಿಲಿನಿಂದ ಸರಕಾರಿ ಶಾಲೆಯ ಹೊಸ್ತಿಲ ವರೆಗೆ, ವಿಮಾನ ನಿಲ್ದಾಣದ ಅಂಗಳದಿಂದ ಸಾಗರದ ಅಲೆಗಳ ನಡುವಿನವರೆಗೆ ಎಲ್ಲೆಡೆ ಕನ್ನಡ ಗಾನ ಮೊಳಗಿತು. ಇದು ಕೋಟಿ ಕಂಠ ಗಾಯವಾದರೂ ಈಗಾಗಲೇ ೧.೨೫ ಕೋಟಿ ಮಂದಿ ನೋಂದಣಿ ಮಾಡಿಕೊಂಡು ಹಾಡಿದ್ದಾರೆ. ಇದರ ಜತೆ ನೋಂದಣಿ ಮಾಡಿಕೊಳ್ಳದೆ ತಮ್ಮ ಪಾಡಿಗೆ ತಾವೇ ಖುಷಿಯಿಂದ ಹಾಡಿದವರನ್ನೂ ಸೇರಿಸಿದರೆ ಇನ್ನಷ್ಟು ಕೋಟಿಗಳು ತೆರೆದುಕೊಂಡಾವು.
ರಾಜ್ಯದ ಪ್ರಧಾನ ಕಾರ್ಯಕ್ರಮ ವಿಧಾನಸೌಧದ ಮೆಟ್ಟಿಲ ಮೇಲೆ ಮತ್ತು ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ವತಃ ಹಾಡಿಗೆ ಧ್ವನಿಯಾಗಿ ಸಂಭ್ರಮಿಸಿದರು. ಈ ಕಾರ್ಯಕ್ರಮದ ರೂವಾರಿಯಾಗಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರೂ ಖುಷಿಯಿಂದ ಹಾಡಿದರು. ಕಂಠೀರವ ಕ್ರೀಡಾಂಗಣ, ಮೆಟ್ರೊ ರೈಲು ನಿಲ್ದಾಣ, ವಿಮಾನ ನಿಲ್ದಾಣ, ಹೈಕೋರ್ಟ್‌ಗಳ ಮುಂದೆಯೂ ಕನ್ನಡದ ಹಾಡು ಅನುರಣಿಸಿತು.
ನೆಲ- ಜಲ- ಆಕಾಶದಲ್ಲಿ ಈ ಕಾರ್ಯಕ್ರಮ ನಡೆಯಿತು. ವಿಧಾನಸೌಧದ ಮೆಟ್ಟಿಲು, ಮೈಸೂರು ಅರಮನೆ, ಪೌರಕಾರ್ಮಿಕರ ನಡುವೆ, ಜೋಗ್ ಜಲಪಾತ, ಚಿತ್ರದುರ್ಗದ ಕೋಟೆ, ರಾಯಚೂರಿನ ಥರ್ಮಲ್ ಪ್ಲಾಂಟ್- ಹೀಗೆ ಎಲ್ಲ ಕಡೆ ಗಾಯನ ಕೇಳಿಬಂತು. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ 50 ಸಾವಿರ ಜನರು ಭಾಗವಹಿಸಿದ್ದರು.
ಆರು ಹಾಡುಗಳ ಗುಂಜನ
ಕೋಟಿ ಕಂಠ ಗಾಯನದಲ್ಲಿ ಕನ್ನಡದ ಆರು ಶ್ರೇಷ್ಠ ಹಾಡುಗಳು ಕಂಪನ ಸೃಷ್ಟಿಸಿದವು.
೧) ಕನ್ನಡದ ನಾಡ ಗೀತೆ – ಜಯ ಭಾರತ ಜನನಿಯ ತನುಜಾತೆ (ಕುವೆಂಪು)
೨) ಬಾರಿಸು ಕನ್ನಡ ಡಿಂಡಿಮವ (ಕುವೆಂಪು)
೩) ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು (ಹುಯಿಲಗೋಳ ನಾರಾಯಣ ರಾಯರು)
೪) ಹಚ್ಚೇವು ಕನ್ನಡದ ದೀಪ (ಡಿ. ಎಸ್. ಕರ್ಕಿ)
೫) ವಿಶ್ವ ವಿನೂತನ ವಿದ್ಯಾಚೇತನ( ಚೆನ್ನವೀರ ಕಣವಿ)
೬) ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು (ಹಂಸಲೇಖ)
ಈ ಆರು ಹಾಡುಗಳು ಕನ್ನಡದ ಅತೀ ಶ್ರೇಷ್ಠವಾದ ಹಾಡುಗಳು ಅನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ!
ಕೋಟಿ ದಾಟಿದ ಕನ್ನಡಿಗರ ನೋಂದಣಿ!
ಈ ಕಾರ್ಯಕ್ರಮಕ್ಕೆ QR ಕೋಡ್ ಮೂಲಕ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಹಾಡುವವರ ನೋಂದಣಿ ಮಾಡಲಾಗಿದೆ. ಎರಡು ದಿನಗಳ ಮೊದಲೇ ಒಂದು ಕೋಟಿ ಹತ್ತು ಲಕ್ಷ ಮಂದಿ ನೋಂದಣಿ ಮಾಡಿ ದಾಖಲೆ ಬರೆದಿದ್ದಾರೆ ಅನ್ನುತ್ತದೆ ಕನ್ನಡ ಸಂಸ್ಕೃತಿ ಇಲಾಖೆ! ನೋಂದಣಿ ಮಾಡಿದವರಲ್ಲಿ ಹೊರ ರಾಜ್ಯ, ಹೊರದೇಶಗಳ ಕನ್ನಡಿಗರು ಬಹುದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ರಿಕ್ಷಾ ಚಾಲಕರು, ಬಸ್ಸು ಚಾಲಕರು, ವಿದ್ಯಾರ್ಥಿಗಳು, ಶಿಕ್ಷಕರು, ವಕೀಲರು, ವೈದ್ಯರು, ಸಾಹಿತಿಗಳು, ಕಾರ್ಮಿಕರು, ಶ್ರಮಿಕರು, ರೈತರು, ಕಲಾವಿದರು ಎಲ್ಲರೂ ಇದ್ದಾರೆ.
ಬೃಹತ್ ಮಟ್ಟದ ಕನ್ನಡದ ಗೀತ ಗಾಯನ
ಕೋಟಿ ಕಂಠ ಗಾಯನದಲ್ಲಿ ೪೧ ದೇಶಗಳು, ೨೭ ರಾಜ್ಯಗಳು, ೧೮,೮೦೦ ಸಂಘ ಸಂಸ್ಥೆಗಳು, ೧೦,೦೦೦ಕ್ಕಿಂತ ಅಧಿಕ ಬೃಹತ್ ವೇದಿಕೆಗಳು, ರಾಜ್ಯದ ಎಲ್ಲ ಶಾಲಾ ಕಾಲೇಜುಗಳು ಈ ಬೃಹತ್ ಅಭಿಯಾನದಲ್ಲಿ ಸ್ವಯಂ ಆಸಕ್ತಿಯಿಂದ ಪಾಲ್ಗೊಂಡಿವೆ. ದೆಹಲಿ, ಮುಂಬೈ, ಚೆನ್ನೈ, ಪೂನಾ, ನಾಗಪುರ, ಭೋಪಾಲ್, ಹೈದರಾಬಾದ್‌ಗಳಲ್ಲಿ ವಾಸವಾಗಿರುವ ಹೊರನಾಡ ಕನ್ನಡಿಗರು ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದರು.