Site icon Vistara News

ಕೋಟಿ ಕಂಠ ಗಾಯನ | ಆಕಾಶದಲ್ಲಿ ಮೊಳಗಿದ ಕನ್ನಡದ ಕಂಠ ಸಿರಿ; ಸ್ಪೈಸ್‌ ಜೆಟ್‌ ಸಿಬ್ಬಂದಿ, ಪ್ರಯಾಣಿಕರಿಂದ ಹಾಡು

spicejet song 2

ಬೆಂಗಳೂರು: ಕನ್ನಡ ರಾಜ್ಯೋತ್ಸವ ಆರಂಭಕ್ಕೂ ಮುನ್ನವೇ ಈ ಬಾರಿ ಶುಭಾರಂಭವನ್ನು ಪಡೆದುಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರೆ ನೀಡಿದ್ದ “ಕೋಟಿ ಕಂಠ ಗಾಯನ” ಕಾರ್ಯಕ್ರಮಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ಆಗಸದಲ್ಲಿಯೂ ಕನ್ನಡ ಹಾಡು ಮೊಳಗಿದೆ!

ಹೌದು. ಸ್ಪೈಸ್‌ ಜೆಟ್‌ನಲ್ಲಿ ಶುಕ್ರವಾರ (ಅ.೨೮) ಬೆಳಗ್ಗೆ ೧೧ ಗಂಟೆ ಸಮಯದಲ್ಲಿ ವಿಮಾನ ಸಂಸ್ಥೆ ಸಿಬ್ಬಂದಿ ಹಾಗೂ ಪ್ರಯಾಣಿಕರು ಕೋಟಿ ಕಂಠ ಗಾಯನಕ್ಕೆ ಧ್ವನಿಗೂಡಿಸಿದ್ದು, ಕನ್ನಡ ಚಿತ್ರರಂಗದ ಮೇರು ನಟ, ಪದ್ಮಭೂಷಣ, ನಟ ಸಾರ್ವಭೌಮ ಡಾ. ರಾಜಕುಮಾರ್‌ ಅವರ ಅಭಿನಯದ “ಆಕಸ್ಮಿಕ” ಚಿತ್ರದ “ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೇ ಕನ್ನಡ ನಾಡನ್ನು ಮೆಟ್ಟಬೇಕು” ಎಂಬ ಹಾಡನ್ನು ಹಾಡುವ ಮೂಲಕ ಕನ್ನಡಾಭಿಮಾನವನ್ನು ಮೆರೆಯಲಾಗಿದೆ.

ಈ ಬಗ್ಗೆ ವಿಮಾನದ ಸಿಬ್ಬಂದಿ ಧ್ವನಿವರ್ಧಕವನ್ನು ಹಿಡಿದು ಹೇಳಿಕೆ ನೀಡಿದ್ದು, “ಎಲ್ಲರಿಗೂ ಗೊತ್ತಿರುವಂತೆ ನವೆಂಬರ್‌ ೧ರಂದು ಕರ್ನಾಟಕ ರಚನೆಯಾಗಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನಕ್ಕೆ ಸ್ಪೈಸ್‌ ಜೆಟ್‌ ಸಂಸ್ಥೆಯು ಬೆಂಬಲ ಸೂಚಿಸುತ್ತದೆ” ಎಂದು ಹೇಳಿಕೊಂಡಿದ್ದಾರೆ. ಬಳಿಕ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಚಪ್ಪಾಳೆಯೊಂದಿಗೆ “ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು” ಎಂದು ಹಾಡಿದ್ದಾರೆ.

ಟ್ವಿಟರ್‌ನಲ್ಲಿ ಶೇರ್‌ ಮಾಡಿದ ಸಚಿವ ಸುನಿಲ್‌ ಕುಮಾರ್‌
ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದು, ಈಗಾಗಲೇ ೨.೮ ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಇದನ್ನೂ ಓದಿ | ಕೋಟಿ ಕಂಠ ಗಾಯನ | ಉಡುಪಿ ಸಮುದ್ರದಲ್ಲಿ ಮೊಳಗಿದ ಕನ್ನಡ ಹಾಡು; ಹತ್ತಾರು ಬೋಟುಗಳಲ್ಲಿ ಸಾಗಿತು ಕನ್ನಡ ತೇರು

Exit mobile version