ಬೆಂಗಳೂರು: ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೋಟಿ ಕಂಠ ನಮನ ಕಾರ್ಯಕ್ರಮ ಇಂದು ನಡೆಯಲಿದ್ದು, ಒಂದು ಕೋಟಿಗೂ ಹೆಚ್ಚು ಜನ ನೊಂದಣಿ ಮಾಡಿಕೊಂಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ʼನನ್ನ ನಾಡು ನನ್ನ ಹಾಡುʼ ಶೀರ್ಷಿಕೆಯಡಿ ಕೋಟಿ ಕಂಠ ಗಾಯನ ವಿಶೇಷ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಕಂಠೀರವ ಸ್ಟೇಡಿಯಂ ಸಜ್ಜಾಗಿದೆ. ಬೆಳಗ್ಗೆ 11 ಗಂಟೆಗೆ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಲಿದ್ದು, ಕಂಠೀರವ ಸ್ಟೇಡಿಯಂನಲ್ಲಿ ಸುಮಾರು 50 ಸಾವಿರ ಮಂದಿ ಗಾನ ಸುಧೆ ಹರಿಸಲಿದ್ದಾರೆ.
ಕಂಠೀರವ ಸ್ಟೇಡಿಯಂ ಮಾತ್ರವಲ್ಲದೇ, ವಿಧಾನಸೌಧ ಮೆಟ್ಟಿಲು, ಹೈಕೋರ್ಟ್, ಗಾಂಧಿ ಪ್ರತಿಮೆ, ಚಿತ್ರದುರ್ಗ ಕೋಟೆ, ಸಮುದ್ರ ತೀರ ಹೀಗೆ ಹಲವು ಕಡೆ ಕೋಟಿ ಕಂಠ ಗಾಯನ ನಡೆಯಲಿದೆ. ಜಯಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ, ವಿಶ್ವವಿನೂತನ ವಿದ್ಯಾಚೇತನ, ಉದಯವಾಗಲೀ ನಮ್ಮ ಚೆಲುವ ಕನ್ನಡ ನಾಡು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಹಚ್ಚೇವು ಕನ್ನಡದ ದೀಪ ಪದ್ಯಗಳು ಮೊಳಗಲಿವೆ. 25ಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡಿಗರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ಕಳೆದ ವರ್ಷಕ್ಕಿಂತಲೂ ಈ ವರ್ಷದ ಕಾರ್ಯಕ್ರಮ ಅದ್ಧೂರಿಯಾಗಿದ್ದು, ಸರ್ಕಾರದ ವತಿಯಿಂದ ನಡೆಯುತ್ತಿರುವ ಬೃಹತ್ ಕಾರ್ಯಕ್ರಮ ಇದಾಗಿದೆ. ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ನೇತೃತ್ವದಲ್ಲಿ ಕಾರ್ಯಕ್ರಮ ಮಾಡುವಂತೆ ಸೂಚನೆ ನೀಡಲಾಗಿದೆ.
ಹಿಂದೆ ಇದೆಯಾ ರಾಜಕೀಯ ಲೆಕ್ಕಾಚಾರ?
ಕನ್ನಡಕ್ಕೆ ಈ ಪರಿ ಗೌರವ ಕೊಡುತ್ತಿರುವುದರ ಹಿಂದೆ ಸರ್ಕಾರದ ಪ್ಲಾನ್ ಏನು ಎಂಬುದು ಕುತೂಹಲಕಾರಿ ಎನಿಸಿದೆ. ಚುನಾವಣಾ ಪ್ರಮುಖ ಅಸ್ತ್ರಗಳಲ್ಲಿ ಕನ್ನಡ ಅಸ್ಮಿತೆಐನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ತರ್ಕಿಸಲಾಗಿದೆ.
ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್, ಹಿಂದೂ ಕಾರ್ಯಕರ್ತರ ಸಾವುಗಳು ಮುಂತಾದವುಗಳಿಂದ ಬಿಜೆಪಿ ನಡೆ ಬಗ್ಗೆ ಕಾರ್ಯಕರ್ತರಿಗೆ ಅಸಮಾಧಾನ ಮೂಡಿದೆ. ಸರ್ಕಾರದ ವಿರುದ್ಧವೇ ಕಾರ್ಯಕರ್ತರು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡಿತ್ತು. ಬಿಜೆಪಿ ಧರ್ಮದ ವಿಚಾರಗಳನ್ನ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದುದಕ್ಕೆ ಸಾರ್ವಜನಿಕವಾಗಿಯೂ ಚರ್ಚೆ ಶುರುವಾಗಿತ್ತು. ಧರ್ಮದ ವಿಚಾರಗಳು ಬಿಟ್ಟರೆ ಬೇರೇನೂ ಇಲ್ಲವೇ ಎಂದು ಕೇಳಲಾಗುತ್ತಿತ್ತು. ಹಲವು ಬಾರಿ ಕನ್ನಡ ಅಸ್ಮಿತೆ ಬಗ್ಗೆ ಯೂ ವಿಪಕ್ಷಗಳು ಪ್ರಶ್ನೆ ಮಾಡಿದ್ದವು. ಇತ್ತಿಚೆಗೆ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನಡೆಗೆ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದ್ದವು.
ಇದರ ಲಾಭ ವಿಪಕ್ಷಗಳು ಪಡೆಯಬಹುದು ಎಂದು ಲೆಕ್ಕಾಚಾರ ಹಾಕಿರುವ ಬಿಜೆಪಿ ಈಗ ಕೋಟಿ ಕಂಠ ನಮನ ಮೂಲಕ ಒಂದು ಕೋಟಿಗೂ ಅಧಿಕ ಜನರನ್ನು ರೀಚ್ ಆಗುತ್ತಿದೆ. 18 ವರ್ಷದ ಮೇಲ್ಪಟ್ಟವರೇ ಅಧಿಕ ನೊಂದಣಿ ಆಗಿರುವವರು. ಕನ್ನಡದ ಹೆಸರಲ್ಲಿ ಅವರನ್ನು ಒಂದೇ ವೇದಿಕೆಗೆ ತರುವುದು ತಂತ್ರಗಾರಿಕೆ. ಕನ್ನಡದ ವಿಚಾರಗಳನ್ನು ವಿಪಕ್ಷಗಳು ಚರ್ಚೆಗೆ ತಂದರೆ ಪ್ರತ್ಯುತ್ತರ ಕೊಡಲು ಹೀಗೆ ಅಸ್ತ್ರ ಸಿದ್ಧ ಮಾಡಿಕೊಂಡಿದೆ. ಧರ್ಮದ ವಿಚಾರಗಳ ಜತೆಗೆ ಕನ್ನಡ ಅಸ್ಮಿತೆ ವಿಚಾರ ಕೂಡಿಕೊಂಡರೆ ಚುನಾವಣೆಯಲ್ಲಿ ಬಿಜೆಪಿಗೆ ಮತ್ತಷ್ಟು ಲಾಭವಾಗುತ್ತೆ ಅನ್ನುವ ಲೆಕ್ಕಾಚಾರ ಇದರ ಹಿಂದಿದೆ.
ಇದನ್ನೂ ಓದಿ | ಅಪ್ಪು ಅಭಿಮಾನದ ಹೊಳೆ | ತುಂಬಿ ತುಳುಕಿದ ಗಂಧದ ಗುಡಿ