Site icon Vistara News

ಕೋಟಿ ಕಂಠ ಗಾಯನ| ಕಾರವಾರದ ಸದಾಶಿವಗಡದಲ್ಲಿ ಬಿಸಿಲಿಗೆ ಬಸವಳಿದ ಮಕ್ಕಳು, ಪೆಂಡಾಲ್‌ ವ್ಯವಸ್ಥೆ ಇಲ್ಲ!

karwar kannada

ಕಾರವಾರ: ರಾಜ್ಯಾದ್ಯಂತ ಕೋಟಿ ಕಂಠ ಗಾಯನ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ನಾನಾ ಕಡೆ ವಿಭಿನ್ನವಾಗಿ ಇದನ್ನೊಂದು ಹಬ್ಬದಂತೆ ಆಚರಿಸಲಾಗಿದೆ. ಉತ್ತರ ಕನ್ನಡ ಜಿಲ್ಲಾಡಳಿತ ಕಾರವಾರದ ಸದಾಶಿವಗಡದಲ್ಲೂ ಕಾರ್ಯಕ್ರಮ ಆಯೋಜಿಸಿತ್ತು. ಆದರೆ, ಈ ಬೆಟ್ಟದ ಮೇಲೆ ಯಾವುದೇ ಪೆಂಡಾಲ್‌ ವ್ಯವಸ್ಥೆ ಮಾಡದೆ ಇರುವುದರಿಂದ ಮಕ್ಕಳು ಬಸವಳಿದು ಹಾಡುವ ಮೂಡ್‌ ಕೂಡಾ ಕಳೆದುಕೊಂಡರು.

ಬಿಸಿಲಿನಲ್ಲೇ ಹಾಡುತ್ತಿರುವ ಮಕ್ಕಳು

ಬೆಳಗ್ಗಿನಿಂದಲೇ ವಿದ್ಯಾರ್ಥಿಗಳು ಬಂದು ಜಮಾವಣೆಗೊಂಡಿದ್ದರು. ಇಲ್ಲಿ ಕೆಲವೇ ಮರಗಳಿದ್ದು ನೆರಳು ಇಲ್ಲ. ಬೆಳಗ್ಗಿನಿಂದಲೇ ಸೇರಿದ್ದ ವಿದ್ಯಾರ್ಥಿಗಳು ಬಿಸಿಲೇರಿದಂತೆ ಬಸವಳಿದಿದ್ದರು. ಕಾರ್ಯಕ್ರಮ ೧೧ ಗಂಟೆಗೆ ಆರಂಭವಾಗಿದ್ದು ಅಷ್ಟು ಹೊತ್ತಿಗೆ ಸೂರ್ಯನ ಬಿಸಿಲ ಝಳ ಇನ್ನಷ್ಟು ಏರಿತ್ತು.

ಕೋಟಿ ಕಂಠ ಗಾಯನಕ್ಕೆ ಮೊದಲು ಕೆಲವರು ಸಿಕ್ಕ ಸಿಕ್ಕಲ್ಲಿ ನೆರಳಿನ ಆಸರೆಯನ್ನು ಹೇಗೋ ಪಡೆದಿದ್ದರು. ಆದರೆ, ಕಾರ್ಯಕ್ರಮ ಆರಂಭವಾದಾಗ ಬಿಸಿಲಿಗೇ ಬಂದು ನಿಲ್ಲುವಂತಾಯಿತು. ಆದರೆ, ಎರಡು ಹಾಡುವ ಆಗುವಷ್ಟು ಹೊತ್ತಿಗೆ ಮಕ್ಕಳಿಗೆ ನಿಲ್ಲಲಾಗಲೇ ಇಲ್ಲ. ಮೊದಲೇ ಒಂದು ಗಂಟೆ ಬಿಸಿಲು, ನಂತರ ಪ್ರಖರ ಬಿಸಿಲಿಗೆ ಒಳಗಾದ ಅವರು ಹಾಡು ಹಾಡುತ್ತಲೇ ನೆರಳಿನತ್ತ ಓಡಿದರು. ಕೆಲವರು ನಿಂತಲ್ಲೇ ತಲೆಸುತ್ತು ಬಂದು ಕುಳಿತುಕೊಳ್ಳಲು ಮುಂದಾದರು. ಇದು ಮಕ್ಕಳ ಕಥೆಯಷ್ಟೇ ಅಲ್ಲ, ಶಿಕ್ಷಕರು ಕೂಡಾ ಬಿಸಿಲಿಗೆ ನಿಲ್ಲಲಾಗದೆ ನೆರಳಿನತ್ತ ಓಡಿದರು.

ನೆರಳನ್ನು ಆಶ್ರಯಿಸಿದ ಮಕ್ಕಳು

ಜಿಲ್ಲಾಡಳಿತಕ್ಕೆ ಪೆಂಡಾಲ್‌ ಹಾಕದ ಪ್ರಮಾದದ ಅರಿವಾಗುವ ಹೊತ್ತಿಗೆ ಕಾರ್ಯಕ್ರಮ ಮುಗಿದಿತ್ತು.

ಇದನ್ನೂ ಓದಿ | ಕೋಟಿ ಕಂಠ ಗಾಯನ | ಕೋಟಿ ಕೋಟಿ ಕಂಠಗಳಲ್ಲಿ ಮೊಳಗಿತು ಕನ್ನಡದ ಗಾನ: ನೆಲ, ಜಲ, ಆಕಾಶದಲ್ಲೆಲ್ಲ ಅನುರಣನ

Exit mobile version