Site icon Vistara News

ಕೋಟಿ ಕಂಠ ಗಾಯನ | ಮರಾಠಿ ಶಿಕ್ಷಕನ ನೇತೃತ್ವದಲ್ಲಿ ಮೊಳಗಿತು 5 ಸಾವಿರ ವಿದ್ಯಾರ್ಥಿಗಳ ಧ್ವನಿ; ಗಮನ ಸೆಳೆದ ಸಾರಿಗೆ ಸಿಬ್ಬಂದಿ ಸ್ಟೆಪ್ಸ್‌

belagavi koti kanta

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಎದುರು ಮರಾಠಿ ಶಿಕ್ಷಕರೊಬ್ಬರ ಮಾರ್ಗದರ್ಶನದಲ್ಲಿ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಂಠದಲ್ಲಿ “ಕೋಟಿ ಕಂಠ ಗಾಯನ” ಕಾರ್ಯಕ್ರಮವು ವಿಜೃಂಭಣೆಯಿಂದ ಮೊಳಗಿದೆ.

ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸುವರ್ಣ ವಿಧಾನಸೌಧದ ಎದುರು “ಕೋಟಿ ಕಂಠ ಗಾಯನ” ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಚಿವೆ ಶಶಿಕಲಾ ಜೊಲ್ಲೆ, ಸಂಸದೆ ಮಂಗಳಾ ಅಂಗಡಿ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ‌‌.ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ ಸೇರಿ ಹಲವರ ಸಮ್ಮುಖದಲ್ಲಿ ವಿದ್ಯಾರ್ಥಿಗಳ ಸಹಿತ ಎಲ್ಲರೂ ಹಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕನ್ನಡ-ಮರಾಠಿ ಭಾಷಾ ಭಾವೈಕ್ಯತೆಗೆ ಸಾಕ್ಷಿ
ಈ ಬಾರಿಯ ಕೋಟಿ ಕಂಠ ಗಾಯನವು ಕನ್ನಡ-ಮರಾಠಿ ಭಾಷಾ ಭಾವೈಕ್ಯತೆಗೆ ಸಾಕ್ಷಿಯಾಯಿತು. ಮರಾಠಿ ಶಿಕ್ಷಕ ವಿನಾಯಕ ಮೋರೆ ನೇತೃತ್ವದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು. 5000 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಆಯ್ದ ಕನ್ನಡ ಗೀತೆಯನ್ನು ಅವರು ಕಲಿಸಿದ್ದಾರೆ. ಸಮೂಹ ಗಾಯನವನ್ನು ಅವರ ನೇತೃತ್ವದಲ್ಲಿಯೇ ಹಾಡಲಾಗಿದೆ.

ಇದನ್ನೂ ಓದಿ | ಕೋಟಿ ಕಂಠ ಗಾಯನ | ಉಡುಪಿ ಸಮುದ್ರದಲ್ಲಿ ಮೊಳಗಿದ ಕನ್ನಡ ಹಾಡು; ಹತ್ತಾರು ಬೋಟುಗಳಲ್ಲಿ ಸಾಗಿತು ಕನ್ನಡ ತೇರು

“ಹುಕ್ಕೇರೀಶ ಇವಳನ್ನು ಕನ್ನಡತಿ ಎಂದು ಹೇಗೆ ಹೇಳಲಯ್ಯ..” ಗಾಯನ
ಹುಕ್ಕೇರಿ ಶ್ರೀಗಳು ಬರೆದ ಗೀತೆಯನ್ನು ಸಹ ಈ ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಪ್ರಸ್ತುತಪಡಿಸಿದರು. ‘ಮಗುವಿಗೆ ಎದೆ ಹಾಲು ಕುಡಿಸಲಾರಳು ಆಧುನಿಕ ತಾಯಿ ಇವಳಯ್ಯ, ಬಾಟಲಿ ಹಾಡು ಕುಡಿಸಿ.. ಚಾಕೋಲೇಟ್ ತಿನ್ನಿಸಿ.. ಪಾಪ್ ಸಾಂಗ್ ಹಾಡುವಳಯ್ಯ.., ಹುಕ್ಕೇರೀಶ ಇವಳನ್ನು ಕನ್ನಡತಿ ಎಂದು ಹೇಗೆ ಹೇಳಲಯ್ಯ’ ಎಂಬ ಗೀತೆಯನ್ನು ಸಚಿವೆ ಗಾಯನ ಮಾಡುವ ಮೂಲಕ ಗಮನ ಸೆಳೆದರು.

ಸಾರಿಗೆ ನೌಕರರ ಭರ್ಜರಿ ಸ್ಟೆಪ್ಸ್‌
“ಕೋಟಿ ಕಂಠ ಗಾಯನ”ಕ್ಕೆ ಮಕ್ಕಳಿಂದ ಚಾಲನೆ ಸಿಗುತ್ತಿದ್ದಂತೆ ಸುವರ್ಣ ವಿಧಾನ ಸೌಧದ ಎದುರಿಗೆ ಇದ್ದ ಸಾರಿಗೆ ನೌಕರರು ಸಖತ್‌ ಸ್ಟೆಪ್ಸ್‌ ಹಾಕಿ ಸಂತೋಷ ವ್ಯಕ್ತಪಡಿಸಿದರು. ಡಾ. ರಾಜಕುಮಾರ್‌ ಅಭಿನಯದ ಆಕಸ್ಮಿಕ ಚಿತ್ರದ “ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..” ಹಾಡಿಗೆ ಸಾರಿಗೆ ಇಲಾಖೆ ಸಿಬ್ಬಂದಿ ಹೆಜ್ಜೆ ಹಾಕಿದರು.

ರಾಜ್ಯಾದ್ಯಂತ ಮೊಳಗಿದ ಗೀತೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಅಭೂತಪೂರ್ವ ಕಾರ್ಯಕ್ರಮ ಇಡೀ ನಾಡನ್ನು ಒಂದೇ ಸ್ವರದಡಿ ತಂದು ನಿಲ್ಲಿಸಿದೆ. ವಿಧಾನಸೌಧದ ಮೆಟ್ಟಿಲಿನಿಂದ ಸರ್ಕಾರಿ ಶಾಲೆಯ ಹೊಸ್ತಿಲ ವರೆಗೆ, ವಿಮಾನ ನಿಲ್ದಾಣದ ಅಂಗಳದಿಂದ ಸಾಗರದ ಅಲೆಗಳ ನಡುವಿನವರೆಗೆ ಕನ್ನಡ ಗಾನವು ಮೊಳಗಿತು. ಇದಕ್ಕೆ ೧.೨೫ ಕೋಟಿ ಮಂದಿ ನೋಂದಣಿ ಮಾಡಿಕೊಂಡು ಹಾಡಿದ್ದಾರೆ. ಇದರ ಜತೆ ನೋಂದಣಿ ಮಾಡಿಕೊಳ್ಳದೆ ಉತ್ಸಾಹದಿಂದ ಹಾಡಿದವರೂ ಸಾಕಷ್ಟು ಮಂದಿ ಇದ್ದಾರೆ.

ಇದನ್ನೂ ಓದಿ | ಕೋಟಿ ಕಂಠ ಗಾಯನ | ಕೋಟಿ ಕೋಟಿ ಕಂಠಗಳಲ್ಲಿ ಮೊಳಗಿತು ಕನ್ನಡದ ಗಾನ: ನೆಲ, ಜಲ, ಆಕಾಶದಲ್ಲೆಲ್ಲ ಅನುರಣನ

ಬೆಂಗಳೂರಿನಲ್ಲಿ ಪ್ರಧಾನ ಕಾರ್ಯಕ್ರಮವು ವಿಧಾನಸೌಧದ ಮೆಟ್ಟಿಲಿನ ಮೇಲೆ ಮತ್ತು ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ವತಃ ಹಾಡಿಗೆ ಧ್ವನಿಯಾಗಿ ಸಂಭ್ರಮಿಸಿದರು. ಈ ಕಾರ್ಯಕ್ರಮದ ರೂವಾರಿಯಾಗಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಸಹ ಹಾಡಿದ್ದಾರೆ. ಕಂಠೀರವ ಕ್ರೀಡಾಂಗಣ, ಮೆಟ್ರೊ ರೈಲು ನಿಲ್ದಾಣ, ವಿಮಾನ ನಿಲ್ದಾಣ, ಹೈಕೋರ್ಟ್‌ಗಳ ಮುಂದೆಯೂ ಕನ್ನಡದ ಹಾಡು ಅನುರಣಿಸಿತು.

ನೆಲ- ಜಲ- ಆಕಾಶದಲ್ಲಿ ಈ ಕಾರ್ಯಕ್ರಮ ನಡೆಯಿತು. ವಿಧಾನಸೌಧದ ಮೆಟ್ಟಿಲು, ಮೈಸೂರು ಅರಮನೆ, ಪೌರಕಾರ್ಮಿಕರ ನಡುವೆ, ಜೋಗ್ ಜಲಪಾತ, ಚಿತ್ರದುರ್ಗದ ಕೋಟೆ, ರಾಯಚೂರಿನ ಥರ್ಮಲ್ ಪ್ಲಾಂಟ್- ಹೀಗೆ ಎಲ್ಲ ಕಡೆ ಗಾಯನ ಕೇಳಿಬಂತು. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ 50 ಸಾವಿರ ಜನ ಭಾಗವಹಿಸಿದ್ದರು.

ಆರು ಹಾಡುಗಳ ಗುಂಜನ
ಕೋಟಿ ಕಂಠ ಗಾಯನದಲ್ಲಿ ಕನ್ನಡದ ಆರು ಶ್ರೇಷ್ಠ ಹಾಡುಗಳು ಕಂಪನ ಸೃಷ್ಟಿಸಿದವು.
೧) ಕನ್ನಡದ ನಾಡ ಗೀತೆ – ಜಯ ಭಾರತ ಜನನಿಯ ತನುಜಾತೆ (ಕುವೆಂಪು)
೨) ಬಾರಿಸು ಕನ್ನಡ ಡಿಂಡಿಮವ (ಕುವೆಂಪು)
೩) ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು (ಹುಯಿಲಗೋಳ ನಾರಾಯಣ ರಾಯರು)
೪) ಹಚ್ಚೇವು ಕನ್ನಡದ ದೀಪ (ಡಿ. ಎಸ್. ಕರ್ಕಿ)
೫) ವಿಶ್ವ ವಿನೂತನ ವಿದ್ಯಾಚೇತನ (ಚೆನ್ನವೀರ ಕಣವಿ)
೬) ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು (ಹಂಸಲೇಖ)
ಈ ಆರು ಹಾಡುಗಳನ್ನು ಎಲ್ಲ ಕಡೆ ಅನುರಣಿಸಲಾಗಿದ್ದು, ಇದನ್ನು ಹೊರತುಪಡಿಸಿ ಕೆಲವರು ಬೇರೆ ಹಾಡುಗಳನ್ನೂ ಹಾಡಿದ್ದಾರೆ.

ಕೋಟಿ ದಾಟಿದ ಕನ್ನಡಿಗರ ನೋಂದಣಿ!
ಈ ಕಾರ್ಯಕ್ರಮಕ್ಕೆ QR ಕೋಡ್ ಮೂಲಕ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಹಾಡುವವರ ನೋಂದಣಿ ಮಾಡಲಾಗಿದೆ. ಎರಡು ದಿನಗಳ ಮೊದಲೇ ಒಂದು ಕೋಟಿ ಹತ್ತು ಲಕ್ಷ ಮಂದಿ ನೋಂದಣಿ ಮಾಡಿ ದಾಖಲೆ ಬರೆದಿದ್ದಾರೆ ಅನ್ನುತ್ತದೆ ಕನ್ನಡ ಸಂಸ್ಕೃತಿ ಇಲಾಖೆ! ನೋಂದಣಿ ಮಾಡಿದವರಲ್ಲಿ ಹೊರ ರಾಜ್ಯ, ಹೊರದೇಶಗಳ ಕನ್ನಡಿಗರು ಬಹುದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ರಿಕ್ಷಾ ಚಾಲಕರು, ಬಸ್ಸು ಚಾಲಕರು, ವಿದ್ಯಾರ್ಥಿಗಳು, ಶಿಕ್ಷಕರು, ವಕೀಲರು, ವೈದ್ಯರು, ಸಾಹಿತಿಗಳು, ಕಾರ್ಮಿಕರು, ಶ್ರಮಿಕರು, ರೈತರು, ಕಲಾವಿದರು ಎಲ್ಲರೂ ಇದ್ದಾರೆ.

ಬೃಹತ್ ಮಟ್ಟದ ಕನ್ನಡದ ಗೀತ ಗಾಯನ
ಕೋಟಿ ಕಂಠ ಗಾಯನದಲ್ಲಿ ೪೧ ದೇಶಗಳು, ೨೭ ರಾಜ್ಯಗಳು, ೧೮,೮೦೦ ಸಂಘ ಸಂಸ್ಥೆಗಳು, ೧೦,೦೦೦ಕ್ಕಿಂತ ಅಧಿಕ ಬೃಹತ್ ವೇದಿಕೆಗಳು, ರಾಜ್ಯದ ಎಲ್ಲ ಶಾಲಾ ಕಾಲೇಜುಗಳು ಈ ಬೃಹತ್ ಅಭಿಯಾನದಲ್ಲಿ ಸ್ವಯಂ ಆಸಕ್ತಿಯಿಂದ ಪಾಲ್ಗೊಂಡಿವೆ. ದೆಹಲಿ, ಮುಂಬೈ, ಚೆನ್ನೈ, ಪೂನಾ, ನಾಗಪುರ, ಭೋಪಾಲ್, ಹೈದರಾಬಾದ್‌ಗಳಲ್ಲಿ ವಾಸವಾಗಿರುವ ಹೊರನಾಡ ಕನ್ನಡಿಗರು ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದರು.

ಇದನ್ನೂ ಓದಿ | ಕೋಟಿ ಕಂಠ ಗಾಯನ | ಆಕಾಶದಲ್ಲಿ ಮೊಳಗಿದ ಕನ್ನಡದ ಕಂಠ ಸಿರಿ; ಸ್ಪೈಸ್‌ ಜೆಟ್‌ ಸಿಬ್ಬಂದಿ, ಪ್ರಯಾಣಿಕರಿಂದ ಹಾಡು

Exit mobile version