Site icon Vistara News

ಕೋಟಿ ಕಂಠ ಗಾಯನ | 29 ರಾಜ್ಯ, 25 ದೇಶಗಳಿಂದ 60 ಲಕ್ಷ ಜನರ ನೋಂದಣಿ: ಸಿನಿ ರಂಗದ ನೀರಸ ಸ್ಪಂದನೆ

koti kantha gayana

ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ಅಕ್ಟೋಬರ್‌ ೨೮ ರಂದು ಆಯೋಜಿಸಿರುವ ” ಕೋಟಿ ಕಂಠ ಗಾಯನ” ಕಾರ್ಯಕ್ರಮಕ್ಕೆ ಇದೀಗ ದೇಶ- ವಿದೇಶಗಳಿಂದಲೂ ಸ್ಪಂದನೆ ವ್ಯಕ್ತವಾಗಿದ್ದು, ಇದುವರೆಗೆ ೬೦ ಲಕ್ಷಕ್ಕೂ ಮೇಲ್ಪಟ್ಟು ನೋಂದಣಿ ಕಾರ್ಯ ನಡೆದಿದೆ.

ಈ ಕಾರ್ಯಕ್ರಮ ನಿಮಿತ್ತ ಇಲಾಖೆ ವತಿಯಿಂದ ಪ್ರತ್ಯೇಕ ಕ್ಯೂ ಆರ್ ಕೋಡ್ ರೂಪಿಸಲಾಗಿದ್ದು, ಇದರಲ್ಲಿ 29 ರಾಜ್ಯಗಳು ಹಾಗೂ 25 ರಾಷ್ಟ್ರಗಳಿಂದ ಕನ್ನಡ ಪ್ರೇಮಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ಒಂದು ಕೋಟಿ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಏಕ ಕಾಲದಲ್ಲಿ ಕನ್ನಡದ ಕಂಪು ಪಸರಿಸುತ್ತಾರೆ ಎಂಬ ಗುರಿ ಹೊಂದಲಾಗಿದೆ. ಈಗಾಗಲೇ ಕ್ಯೂಆರ್ ಕೋಡ್ ಮೂಲಕವೇ ೬೦ ಲಕ್ಷ ನೋಂದಣಿಯಾಗಿರುವುದನ್ನು ಗಮನಿಸಿದರೆ ಕೋಟಿ ಸಂಖ್ಯೆಯನ್ನು ಮೀರಿ ಕನ್ನಡ ಪ್ರೇಮಿಗಳು ಈ ವೃಂದ ಗಾಯನದಲ್ಲಿ ಭಾಗವಹಿಸಬಹುದು ಎಂಬ ವಿಶ್ವಾಸವನ್ನು ಇಲಾಖೆ ಮೂಲಗಳು ವ್ಯಕ್ತಪಡಿಸಿವೆ.

ಅಕ್ಟೋಬರ್‌ ೨೮ರಂದು ಬೆಳಗ್ಗೆ ನಡೆಯುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” , ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ಡಾ.ಚನ್ನವೀರ ಕಣವಿ ಅವರ “ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ “, ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮ” , ಡಾ.ಡಿ.ಎಸ್. ಕರ್ಕಿಯವರ “ಹಚ್ಚೇವು ಕನ್ನಡದ ದೀಪ “ ಹಾಗೂ ಡಾ. ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು “ ಎಂಬ ಆರು ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಗುತ್ತದೆ. ಇದನ್ನು ಹೊರತುಪಡಿಸಿಯೂ ಆಸಕ್ತರು ಬೇರೆ ಕನ್ನಡ ಗೀತೆಗಳನ್ನು ಸಮಯದ ಮಿತಿ ಆಧರಿಸಿ ಪ್ರಸ್ತುಪಡಿಸಬಹುದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್‌, ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಲು ಕರ್ನಾಟಕ ಮಾತ್ರವಲ್ಲ 25 ರಾಷ್ಟ್ರ ಹಾಗೂ 29 ರಾಜ್ಯಗಳಿಂದ ಕನ್ನಡಿಗರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿರುವುದು ಹೆಮ್ಮೆ ಎನಿಸುತ್ತಿದೆ. ಬಿಂದು ಸಿಂಧುವಾಗುವ ರೀತಿ ಅಕ್ಟೋಬರ್ ೨೮ ರಂದು ಕನ್ನಡಿಗರ ಧ್ವನಿ ಕೋಟಿ ಮೀರಲಿ ಎಂದು ಆಶಿಸುತ್ತೇನೆ. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ ಎಂದಿದ್ದಾರೆ.

ಸಿನಿ ರಂಗದ ನೀರಸ ಸ್ಪಂದನೆ?

ಒಂದೆಡೆ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ಹಾಗೂ ಸ್ಪಂದನೆ ವ್ಯಕ್ತವಾಗುತ್ತಿದೆ. ಆದರೆ ಕನ್ನಡ ಚಿತ್ರರಂಗ ಮಾತ್ರ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿರುವುದು ರಾಜ್ಯ ಸರ್ಕಾರದ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕನ್ನಡ ಸಂಸ್ಕ್ರತಿ ಇಲಾಖೆಯಿಂದ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಹಲವು ಸ್ಟಾರ್ ನಟರಿಗೆ ಖುದ್ದಾಗಿ ಕರೆ ಮಾಡಿ ವಿನಂತಿಸಲಾಗಿದೆ. ಕಾರ್ಯಕ್ರಮಕ್ಕಾಗಿ ವಿಡಿಯೋ ಸಂದೇಶ ನೀಡುವುದಕ್ಕೂ ಕೆಲ ಕಲಾವಿದರು ಬಾಯ್ಬಿಟ್ಟು ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಕನ್ನಡದ ಕೆಲಸಕ್ಕೆ, ಕನ್ನಡದ ಹಾಡಿಗೆ ಧ್ವನಿಯಾಗುವುದಕ್ಕೆ ಕನ್ನಡ ಚಿತ್ರರಂಗ ನಿರಾಸಕ್ತಿ ತೋರುತ್ತಿರುವುದು ಸರಿಯೇ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಅ.28ರಿಂದ ಮಲ್ಲೇಶ್ವರ ಕ್ಷೇತ್ರದಲ್ಲಿ ಮನೆಮನೆ ಮೇಲೂ 10 ದಿನ ಕನ್ನಡ ಧ್ವಜಾರೋಹಣ: ಡಾ.ಸಿ.ಎನ್.ಅಶ್ವತ್ಥನಾರಾಯಣ

Exit mobile version