Site icon Vistara News

Lok Sabha Election: ಮಂಡ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ; ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಡಾ. ರವೀಂದ್ರ ರಾಜೀನಾಮೆ

Dr HN Ravindra

ಮಂಡ್ಯ: ಲೋಕಸಭೆ ಚುನಾವಣೆ (Lok Sabha Election) ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಬಹುತೇಕ ಖಚಿತವಾದ ಹಿನ್ನೆಲೆ ಮಂಡ್ಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟವಾಗಿದೆ. ಟಿಕೆಟ್ ಕೈ ತಪ್ಪುವ ಸೂಚನೆ ಸಿಕ್ಕ ಕೂಡಲೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಡಾ. ಎಚ್.ಎನ್.ರವೀಂದ್ರ ರಾಜೀನಾಮೆ ನೀಡಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಡಾ. ರವೀಂದ್ರ ಈ ಬಾರಿಯ ಕಾಂಗ್ರೆಸ್‌ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಉದ್ಯಮಿ ಸ್ಟಾರ್‌ ಚಂದ್ರು ಸ್ಪರ್ಧೆಗೆ ಗ್ರೀನ್‌ ಸಿಗ್ನಲ್‌ ನೀಡಿರುವುದರಿಂದ ಸಚಿವ ಚಲುವರಾಯಸ್ವಾಮಿ ವಿರುದ್ಧ ಡಾ. ಎಚ್.ಎನ್.ರವೀಂದ್ರ ಆಕ್ರೋಶ ಹೊರಹಾಕಿದ್ದಾರೆ.

ನಗರದಲ್ಲಿ ಬುಧವಾರ ಮಾತನಾಡಿರುವ ಅವರು, ಟಿಕೆಟ್ ಕೊಡುವಾಗ ದುಡ್ಡೇ ಮಾನದಂಡ ಎಂಬುವುದು ಈಗ ಮನವರಿಕೆಯಾಗಿದೆ. ಜನರಾಗಲಿ, ಅಭ್ಯರ್ಥಿ ಗೆಲ್ಲುತ್ತಾನಾ ಎಂಬ ಯೋಚನೆಯಾಗಲಿ ಯಾವುದೂ ಇಲ್ಲಿ ಬರಲ್ಲ. ನಮ್ಮಲ್ಲಿ ಏಳು ಶಾಸಕರಿದ್ದಾರೆ. ನಮ್ಮ‌ ಹತ್ತಿರವೂ ದುಡ್ಡಿರೋ ಅಭ್ಯರ್ಥಿಗಳು ಇದ್ದಾರೆ. ನಾವು ಗೆದ್ದೇ ಗೆಲ್ಲುತ್ತೇವೆ ಎಂಬಂತೆ ಇದ್ದೀರಿ. ಇದೇ ರೀತಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಯೋಚನೆ‌ ಮಾಡಿದ್ದರು ಎನಿಸುತ್ತೆ. ನೀವು ಅದೇ ರೀತಿ ಜಿದ್ದಿಗೆ ಬಿದ್ದು ಚುನಾವಣೆ ಮಾಡಲು ಹೊರಟರೆ ಜಿಲ್ಲೆಯ ಜನ ಅಷ್ಟು ಸುಲಭಕ್ಕೆ ಬಗ್ಗುವ ಮಕ್ಕಳಲ್ಲ ಯಾರನ್ನೂ ಬಿಟ್ಟಿಲ್ಲ ಎಂದು ಪರೋಕ್ಷವಾಗಿ ಸಚಿವ ಚೆಲುವರಾಯಸ್ವಾಮಿಗೆ ಎಚ್ಚರಿಕೆ ನೀಡಿದರು.

ನಾಟಿ ಬ್ರೀಡ್ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಚಿವರಿಗೆ ನಾಟಿ ಕೋಳಿ ರುಚಿ ಗೊತ್ತಿಲ್ಲ, ಗಿರಿರಾಜ ಕೋಳಿಯನ್ನು ನಾಟಿ ಕೋಳಿ ಅಂದುಕೊಂಡಿದ್ದಾರೆ. ಸಚಿವರು ನಾಟಿ ಕೋಳಿ ತಿಂದಿಲ್ಲ. ಅವರು ಬೆಂಗಳೂರಿನಲ್ಲಿ ಇರುವುದರಿಂದ ಗಿರಿರಾಜ ಕೋಳಿಯನ್ನು ನಾಟಿ ಕೋಳಿ ಅಂದುಕೊಂಡಿದ್ದಾರೆ. ಪರಿಸ್ಥಿತಿ ಆ ರೀತಿಯಲ್ಲಿ ಇಲ್ಲ, ಸ್ವಲ್ಪ ಪ್ರಜ್ಞೆ ಇರಬೇಕು. ನಮ್ಮೂರಲ್ಲಿ ನಮ್ಮ ಪೌಲ್ಟ್ರಿಯಲ್ಲಿ ಬೆಳೆದದ್ದು ನಾಟಿ ಕೋಳಿಯಾಗಲ್ಲ.
ನಾಟಿ ಅಂದ್ರೆ ನಮ್ಮೂರಲ್ಲೆ ತಿರುಗಾಡಿ ತಿಪ್ಪೆಯಲ್ಲಿ ತಿಂದು ಬೆಳೆಯುವುದು. ಇದು ನಮ್ಮೂರಲ್ಲೇ ಬೆಳೆಸಿರುವ ಬ್ರಾಯ್ಲರ್ ಕೋಳಿ. ಸ್ಟಾರ್ ಚಂದ್ರು ವಿಷಯಕ್ಕೆ ಹೋಗಲ್ಲ ಎಂದು ನಾಟಿ ಬ್ರೀಡ್ ಅರ್ಥ ಹೇಳಿ ಸಚಿವರಿಗೆ ತಿರುಗೇಟು ನೀಡಿದರು.

ನಾವು ಕಾಂಗ್ರೆಸ್ ಉಳಿಸಲು ಸಪೋರ್ಟ್ ಮಾಡ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಇದೇ ವ್ಯಕ್ತಿ ಸ್ಪರ್ಧಿಸಿದರೆ ನಂತರ ಏನು ಮಾಡಬೇಕೋ ತೀರ್ಮಾನ ಮಾಡುತ್ತೇವೆ. ಕಳೆದ ಬಾರಿ ಎಂಪಿ ಚುನಾವಣೆಯಲ್ಲಿ ಡಿಕೆಶಿ ಕರೆ ಮಾಡಿದ್ದರು. ನಿರಂತರವಾಗಿ ಕರೆ ಮಾಡಿದ್ದರಿಂದ ಅವರ ನಂಬರ್‌ ಕೂಡ ಬ್ಲಾಕ್ ಮಾಡಿದ್ದೆ. ನನಗೆ ಬಂಡತನ ಇದೆ. ಈ ಬಾರಿಯ ಚುನಾವಣೆಯಲ್ಲಿ ಸಕ್ರಿಯವಾಗಿರುತ್ತೇನೆ. ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡ್ತಿದ್ದೇನೆ. ನಾನು ಯಾವ ಪಕ್ಷಕ್ಕೂ ಸೇರಲ್ಲ, ನನ್ನ ಪಕ್ಷ ಕಾಂಗ್ರೆಸ್ ಮಾತ್ರ. ಆದರೆ, ಸಂಸದೆ ಸುಮಲತಾ ಜೊತೆ ಇನ್ನು ಯಾವುದೇ ಕಾರಣಕ್ಕೂ ಹೋಗಲ್ಲ ಎಂದರು.

ಹಣದ ಕಾರಣ ಬಿಟ್ಟು ಪಕ್ಷದ ಕೆಲಸ ಮಾಡಿ. ದುಡ್ಡು ಬೇಕು, ದುಡ್ಡು ಬೇಕು ಅಂತಾರೆ ಚುನಾವಣೆಗೆ ಎಷ್ಟು ಬೇಕು.?
ಸಾರ್ವಜನಿಕವಾಗಿ 100 ಕೋಟಿ ಅಂತ ಮಾತನಾಡುತ್ತಾರೆ, ಒದ್ದು ಒಳಗೆ ಹಾಕಬೇಕು ಅಲ್ವಾ? ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು, ಸುಮಲತಾ ಸ್ಪರ್ಧೆ ಮಾಡಿದರೆ ನಾವು ವಿರೋಧ ಮಾಡುತ್ತೇವೆ, ಬೇರೆ ಅಭ್ಯರ್ಥಿಗಳಾದರೆ ಮಾತ್ರ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.

ಊಟ ಹಾಕುವ ಜಿಲ್ಲೆಯ ಜನರನ್ನು ಕಾಂಗ್ರೆಸ್ ನಾಯಕರು ದುಡ್ಡಿನಲ್ಲಿ ಅಳೆಯುತ್ತಿದ್ದಾರೆ. ಮಂಡ್ಯದಲ್ಲಿ ಸ್ಪಲ್ಪ ದಿನ ಕೆರೆಯಲ್ಲಿ ಬೋಟ್ ನಿಲ್ಲಿಸಿ ಗೋವಾ ತರ ಕ್ಯಾಸಿನೊ ಶುರು ಮಾಡ್ತಾರೆ ಎಂದು ಕಿಡಿಕಾರಿದ ಅವರು, ಜನರಿಗೆ ಆರೋಗ್ಯ ಮತ್ತು ಶಿಕ್ಷಣ ಮಾತ್ರ ಉಚಿತ ಬೇಕು. ಉಳಿದ ಯಾವುದೂ ಫ್ರೀ ಬೇಡ. ಒಬ್ಬ ವ್ಯಕ್ತಿಯ ಆರೋಗ್ಯ ಕೆಟ್ಟರೆ ಸಾವಿರಾರು ರೂಪಾಯಿ ಖರ್ಚಾಗುತ್ತೆ. ಆ ಬಡ ವ್ಯಕ್ತಿ ಒಂದು ವರ್ಷ ಜಮೀನಲ್ಲೆ ಕೆಲಸ ಮಾಡಬೇಕು. ಮಣಿಪಾಲ್ ಆಸ್ಪತ್ರೆಗೆ ಸೇರಿಸಿದರೆ ರೈತ ತನ್ನ ಜಮೀನನ್ನೆ ಮಾರಿಕೊಳ್ಳಬೇಕು. ಪರಿಸ್ಥಿತಿ ಕೆಟ್ಟದಿದೆ, ಉಚಿತ ಚಿಕಿತ್ಸೆ ಕೊಡುವ ಬಗ್ಗೆ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೆ. ಒಳ್ಳೆಯ ಯೋಚನೆ, ಬಜೆಟ್‌ನಲ್ಲಿ ಘೋಷಣೆ ಮಾಡೋಣ ಎಂದು ಸಿಎಂ ಹೇಳಿದ್ದರು. ಆದರೆ ಸಿಎಂ ಅವರು ಸಿಗಲಿಲ್ಲ, ಕಡೆಗೆ ಡೆಲ್ಲಿಗೆ ಸಿದ್ದರಾಮಯ್ಯ ನೋಡಲು ಹೋಗಿದ್ದೆ. ಅಲ್ಲಿ ಕೂಡ ಹೊಸ ಹೊಸ ಮುಖದ ಜನರು ಇದ್ದಾರೆ. ಪಕ್ಷಕ್ಕಾಗಿ ಮಣ್ಣು ಹೊತ್ತವರು ಯಾರೋ, ವ್ಯವಹಾರ ಮಾಡಲು ಬೇರೆ ಯಾರೋ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಯಾವನೋ 100 ಕೋಟಿ ತರುತ್ತಾನೆ, ದುಡ್ಡು ಇಲ್ಲದೆ ಚುನಾವಣೆ ಗೆಲ್ಲಕ್ಕಾಗಲ್ಲ ಅಂದ್ರೆ ಅರ್ಥವೇನು? ಜಿಲ್ಲೆಯ ಸಾಮಾನ್ಯ ಕುಟುಂಬ ವರ್ಗದವರು ಪ್ರತಿ ವರ್ಷ ದೇವರ ಸೇವೆ ಮಾಡಿ ನೂರಾರು ಜನಕ್ಕೆ ಊಟ ಹಾಕುತ್ತಾರೆ‌. ಆದರೆ ಕಾಂಗ್ರೆಸ್ ನಾಯಕರು ಅನ್ನ ಹಾಕುವ ಜನರನ್ನು ದುಡ್ಡಿನಲ್ಲಿ ಅಳೆಯಲು ಮುಂದಾಗಿದ್ದಾರೆ. ದುಡ್ಡು ಕೊಡದಿದ್ದರೆ ಜಿಲ್ಲೆಯ ಜನತೆ ಮತ ಹಾಕಲ್ಲ ಎಂದು ಜಿಲ್ಲೆಯ ಜನರನ್ನು ಅವಮಾನಿಸಲು ಮುಂದಾಗಿದ್ದಾರೆ. ದುಡ್ಡಿಗೆ ಓಟ್ ಹಾಕುತ್ತಾರೆ ಅಂದ್ರೆ ಕಳೆದ ಬಾರಿ ಸುಮಲತಾ ಗೆಲ್ಲೋದಕ್ಕೆ ಸಾಧ್ಯವಿತ್ತಾ? ವಿಜಯಮಲ್ಯಗೆ ಇರುವ ಶೋಕಿಗೆ ಪ್ರಧಾನ ಮಂತ್ರಿ ಆಗುತ್ತಿದ್ದ. ದುಡ್ಡಲ್ಲೇ ಎಲ್ಲ ಆಗಲ್ಲ, ಜನರ ಪ್ರೀತಿ, ವಿಶ್ವಾಸ ಇರಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಮೈಸೂರಿನಲ್ಲಿ ಮಾತ್ರ ಕ್ಲಬ್ ಬ್ಯಾನ್ ಮಾಡಿಸ್ತಾರೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಕ್ಲಬ್ ಬ್ಯಾನ್ ಮಾಡಬೇಕು ಎಂಬ ತಾಕತ್ ಯಾಕಪ್ಪ ನಿನಗಿಲ್ಲ‌ ಎಂದು ಸಚಿವರಿಗೆ ಪ್ರಶ್ನಿಸಿದ ಅವರು, ಕ್ಲಬ್, ಇಸ್ಪೀಟ್ ಎಲ್ಲಾ ಕಡೆ ನಡೆಯುತ್ತಿದೆ. ಇನ್ನು ಸ್ಪಲ್ಪ ದಿನಗಳಲ್ಲಿ ಕೆರೆಯಲ್ಲೇ ಬೋಟ್ ನಿಲ್ಲಿಸಿ ಗೋವಾ ತರ ಕ್ಯಾಸಿನೊ ಶುರು ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.

Exit mobile version