ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ (Karnataka Elections) ಟಿಕೆಟ್ ಬೇಕು ಎಂದರೆ ಅರ್ಜಿ ಸಲ್ಲಿಸಬೇಕು ಎಂದು ನಿಯಮ ಮಾಡಿದ ಕಾಂಗ್ರೆಸ್ ಅದರಲ್ಲಿ ದೊಡ್ಡ ಯಶಸ್ಸನ್ನು ಪಡೆದಿದೆ. ಆದರೆ, ಈಗ ಟಿಕೆಟ್ ಆಕಾಂಕ್ಷಿಗಳು ನಡೆಸುತ್ತಿರುವ ಗುಂಪುಗಾರಿಕೆಯಿಂದ ಕೆಪಿಸಿಸಿಗೆ ತಲೆ ನೋವಾಗಿದೆ.
ಟಿಕೆಟ್ ಅರ್ಜಿ ಸಲ್ಲಿಸಿದವರು ತಮ್ಮದೇ ಆದ ತಂಡಗಳನ್ನು ಕಟ್ಟಿಕೊಂಡು ಗುಂಪುಗಾರಿಕೆ ನಡೆಸುತ್ತಿರುವ ದೂರುಗಳು ಕೇಳಿಬಂದಿವೆ. ಪ್ರತ್ಯೇಕ ಸಭೆಗಳನ್ನು ನಡೆಸಿ ತಮ್ಮ ಶಕ್ತಿ ಪ್ರದರ್ಶನ ನಡೆಸುವುದು, ತಮಗೇ ಹೆಚ್ಚು ಜನಬೆಂಬಲ ಇರುವಂತೆ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ತಾವೇ ಮುಂದಿನ ಅಭ್ಯರ್ಥಿ ಎಂದು ಬಿಂಬಿಸುತ್ತಾ ಪ್ರಚಾರಕ್ಕೇ ಇಳಿದುಬಿಟ್ಟಿದ್ದಾರೆ ಎಂಬ ದೂರಿದೆ.
ಈ ಗುಂಪುಗಾರಿಕೆ ವಿರುದ್ಧ ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ʻʻಅರ್ಜಿ ಹಾಕಿದ ಕೆಲವರು ಗುಂಪು ಕಟ್ಟಿದ್ದಾರೆ. ತಾವೇ ಅಭ್ಯರ್ಥಿಗಳೆಂದು ಮಾಧ್ಯಮಗಳ ಮುಂದೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಅಂಶಗಳು ಎಐಸಿಸಿ ಹಾಗೂ ಕೆಪಿಸಿಸಿ ಗಮನಕ್ಕೆ ಬಂದಿದೆ. ಅರ್ಜಿಗಳನ್ನು ಪರಿಶೀಲನೆ ನಡೆಸಿ, ಕೆಲ ಮಾನದಂಡಗಳ ಪ್ರಕಾರ ಅಭ್ಯರ್ಥಿ ಆಯ್ಕೆ ಆಗುತ್ತದೆʼʼ ಎಂದು ಡಿ.ಕೆ. ಶಿವಕುಮಾರು ಸ್ಪಷ್ಟಪಡಿಸಿದ್ದಾರೆ.
ಇದರ ಜತೆಗೆ ಎಲ್ಲಾ ಆಕಾಂಕ್ಷಿಗಳಿಗೆ ಪತ್ರ ಬರೆದಿರುವ ಶಿವಕುಮಾರ್, ಅದರಲ್ಲಿ ನಾಲ್ಕು ಸೂಚನೆಗಳನ್ನು ನೀಡಿದ್ದಾರೆ.
ನಾಲ್ಕು ಸೂಚನೆಗಳು
1) ಎಲ್ಲಾ ಆಕಾಂಕ್ಷಿಗಳು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮತ್ತು ಬಲವರ್ಧನೆ ಮಾಡಬೇಕು.
2) ಎಲ್ಲಾ ಆಕಾಂಕ್ಷಿಗಳು ಒಂದಾಗಿ ಪ್ರತಿಯೊಂದು ಬೂತ್‌ಗೆ ಹೋಗಿ ಬಿಜೆಪಿ ಸರ್ಕಾರ ವೈಫಲ್ಯಗಳು ಹಾಗೂ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಹೇಳಬೇಕು.
3) ಯಾರು ಕೂಡ ವೈಯುಕ್ತಿಕವಾಗಿ ಗುಂಪು ನಿರ್ಮಿಸಿಕೊಂಡು ಗುಂಪುಗಾರಿಕೆಗೆ ಆಸ್ಪದ ಕೊಡಬಾರದು
4) ಮೇಲಿನ ಯಾವುದೇ ಸೂಚನೆಗಳನ್ನು ಉಲ್ಲಂಘನೆ ಮಾಡಬಾರದು, ವೈಯಕ್ತಿಕವಾಗಿ, ಸಾರ್ವಜನಿಕವಾಗಿ ಹೇಳಿಕೆ ಕೊಡಬಾರದು. ಸಂಬಂಧಿತ ಕೆಪಿಸಿಸಿ ಕಾರ್ಯಾಧ್ಯಕ್ಷರು, ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಅಧ್ಯಕ್ಷರ ಅನುಮತಿ ಇಲ್ಲದೆ ಯಾವುದೇ ಸಭೆ ನಡೆಸುವಂತಿಲ್ಲ.
ಇದನ್ನೂ ಓದಿ | ಸಿದ್ದರಾಮಯ್ಯ, ಡಿಕೆಶಿ ಸ್ಪರ್ಧೆ ಮಾಡುವುದು ಬೇಡ ಎಂದ ಸಂತೋಷ್ ಲಾಡ್; ಸೇಫ್ ಜಾಗ ಇರಲಿ ಎಂದ ಸತೀಶ್ ಜಾರಕಿಹೊಳಿ