ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly elections) ಕಾಂಗ್ರೆಸ್ ಅಭೂತಪೂರ್ವ ಜಯ ಸಾಧಿಸಿದ್ದು, 135 ಸ್ಥಾನಗಳನ್ನು ಪಡೆಯುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಇದು ರಾಜ್ಯ ರಾಜಕೀಯದಲ್ಲಿ (Karnataka Politics) ಸಾಕಷ್ಟು ಪರಿಣಾಮವನ್ನುಂಟು ಮಾಡಿದೆ. ಅಲ್ಲದೆ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಸಚಿವ ಸಂಪುಟ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಅವಕಾಶ ವಂಚಿತರಲ್ಲಿ ಅಸಮಾಧಾನ ಮಡುಗಟ್ಟಿದೆ. ಕೆಲವು ಹಿರಿಯ ಸಚಿವರು ಈಗಾಗಲೇ ತಮ್ಮ ಆಕ್ರೋಶವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಪಕ್ಷದ ಕಾರ್ಯಕರ್ತರಿಗೂ ಸೂಕ್ತ ಸ್ಥಾನಮಾನ ಕಲ್ಪಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ. ಹಾಗಾಗಿ ಶೀಘ್ರವೇ ನಿಗಮ, ಮಂಡಳಿಗೆ ಅಧ್ಯಕ್ಷರ, ಸದಸ್ಯರ ನೇಮಕಾತಿಗೆ (Recruitment to Corporations and Boards) ಚಾಲನೆ ನೀಡಲಿದ್ದು, ಇದಕ್ಕಾಗಿ ಈಗ ಕೆಲವು ಮಾನದಂಡವನ್ನೂ ನಿಗದಿ ಪಡಿಸಿದೆ. ಈಗ ವಿಧಾನಸಭಾ ಚುನಾವಣೆಯಲ್ಲಿ ಬೂತ್‌ವಾರು ಮತಗಳಿಕೆಯ ವಿವರಗಳನ್ನು ಆಕಾಂಕ್ಷಿಗಳ ಹೆಸರಿನೊಂದಿಗೆ ಕಳುಹಿಸಿಕೊಡುವಂತೆ ಕೆಪಿಸಿಸಿ ಸೂಚನೆ ನೀಡಿದೆ.
ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಯಾವುದೇ ಒಂದು ಸಚಿವ ಸ್ಥಾನವನ್ನೂ ಖಾಲಿ ಬಿಡದಂತೆ ತಮ್ಮ ಸಚಿವ ಸಂಪುಟವನ್ನು ಭರ್ತಿ ಮಾಡಿಕೊಂಡರು. ಈ ಮೂಲಕ ಸದ್ಯ ಯಾರಿಗೂ ಸಚಿವ ಸ್ಥಾನ ಇಲ್ಲ ಎಂಬ ಸಂದೇಶವನ್ನು ರವಾನೆ ಮಾಡಿದರು. ಇದು ಸಹಜವಾಗಿಯೇ ಕೆಲವು ಹಿರಿಯ ಶಾಸಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇನ್ನು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು (Congress workers) ಸಹ ಸೂಕ್ತ ಸ್ಥಾನಮಾನದ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಲೋಕಸಭಾ ಚುನಾವಣೆಯೂ (Lok Sabha Election 2024) ಬರುತ್ತಿರುವುದರಿಂದ ಕಾಂಗ್ರೆಸ್ ಭರ್ಜರಿ ಕಾರ್ಯತಂತ್ರವನ್ನೇ ಹೆಣೆಯುತ್ತಿದೆ.
ಇದನ್ನೂ ಓದಿ: Karnataka Politics: ವಿಧಾನ ಪರಿಷತ್ಗೆ ನಾಮ ನಿರ್ದೇಶನ; ಕಾಂಗ್ರೆಸ್‌ನಿಂದ ಉಮಾಶ್ರೀ ಸೇರಿ ಮೂವರ ಹೆಸರು ಅಂತಿಮ
ಅಸಮಾಧಾನಿತರಿಗೆ ಮಣೆ ಹಾಕುವ ಜತೆಗೆ ಪಕ್ಷಕ್ಕೆ ನಿಷ್ಠೆಯಿಂದ ದುಡಿದ ಕಾರ್ಯಕರ್ತರಿಗೆ ನಿಗಮ, ಮಂಡಳಿಗಳಲ್ಲಿ ಇಲ್ಲವೇ ಸಮಿತಿಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ನಿರ್ಧಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ನಿಗಮ ಮಂಡಳಿಗೆ ಅಧ್ಯಕ್ಷರ, ಸದಸ್ಯರ ನೇಮಕಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನಿಂದ ಪರಿಶೀಲನಾ ಸಮಿತಿ ರಚನೆ ಸಾಧ್ಯತೆ ಇದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr G Parameshwara) ಅಥವಾ ಹಿರಿಯ ನಾಯಕರೊಬ್ಬರ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅರ್ಜಿ ನಮೂನೆಯನ್ನು ಕಳುಹಿಸಿರುವ ಕೆಪಿಸಿಸಿ, ಆಕಾಂಕ್ಷಿತರು ಸಂಪೂರ್ಣ ವಿವರಗಳೊಂದಿಗೆ ಅದನ್ನು ಭರ್ತಿ ಮಾಡಿ ಕಳುಹಿಸಲು ಸೂಚಿಸಿದೆ.
70-30 ಫಾರ್ಮುಲಾ?
ನಿಗಮ, ಮಂಡಳಿ ಆಯ್ಕೆಯಲ್ಲಿ 70-30 ಪರ್ಸೆಂಟ್ ಫಾರ್ಮುಲಾ ಅಳವಡಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದರಂತೆ ಶಾಸಕರಿಗೆ ಮತ್ತು ಕಾರ್ಯಕರ್ತರಿಗೆ ಅಧಿಕಾರ ನೀಡುವ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ ಈಗ ಪ್ರತಿ ಬೂತ್ ಮಟ್ಟದ ಶೇಕಡಾವಾರು ಮತಗಳಿಕೆಯ ಮಾಹಿತಿಯನ್ನು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DCM and KPCC president DK Shivakumar) ಕೇಳಿದ್ದಾರೆ.
ಸ್ಥಳೀಯ ನಾಯಕರು ಪ್ರತಿನಿಧಿಸುವ ಬೂತ್‌ನಲ್ಲಿ ಎಷ್ಟು ಮತಗಳು ಬಂದಿವೆ? ಮತಗಳ ಪ್ರಮಾಣ ಎಷ್ಟು ಎಂದು ಮಾಹಿತಿ ಕೇಳುವ ಮೂಲಕ ಚುನಾವಣೆಯಲ್ಲಿ ಕಾರ್ಯಕರ್ತರ ಪಾಲ್ಗೊಳ್ಳುವಿಕೆ ಎಷ್ಟಿದೆ ಎಂದು ಪತ್ತೆ ಹಚ್ಚುವ ತಂತ್ರ ಇದರಲ್ಲಿ ಅಡಗಿದೆ. ಪಕ್ಷದ ಪರವಾಗಿ ಹೆಚ್ಚು ಕೆಲಸ ಮಾಡಿ, ಪ್ರತಿನಿಧಿಸುವ ಬೂತ್‌ನಲ್ಲಿ ಹೆಚ್ಚು ಮತಗಳು ಬಂದಿದ್ದರೆ ಅಂಥವರಿಗೆ ಅವಕಾಶವನ್ನು ನೀಡಲಾಗುತ್ತದೆ. ನಿಗಮ – ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ.
ಇದನ್ನೂ ಓದಿ: Weather Report : ರಾಜ್ಯದಲ್ಲಿ ತಗ್ಗಿತು ಮಳೆಯಬ್ಬರ; ಬೆಂಗಳೂರಲ್ಲಿ ಮೋಡ-ಬಿಸಿಲಿನ ಜತೆಯಾಟ
ಕಾಂಗ್ರೆಸ್‌ಗೆ ಏನು ಲಾಭ?
ಕಾರ್ಯಕರ್ತರನ್ನೂ ನಿಗಮ, ಮಂಡಳಿ ಸೇರಿದಂತೆ ಸಮಿತಿಗಳಿಗೆ ನೇಮಕ ಮಾಡುವುದರಿಂದ ಕಾರ್ಯಕರ್ತರ ವಲಯದಲ್ಲಿ ಪಕ್ಷದ ಮೇಲೆ ಅಭಿಮಾನ ಹೆಚ್ಚುತ್ತದೆ. ಇದರಿಂದ ಅವರು ಪಕ್ಷಕ್ಕಾಗಿ ಇನ್ನಷ್ಟು ಶ್ರಮ ವಹಿಸುತ್ತಾರೆ. ಶ್ರಮ ಪಟ್ಟು ಕೆಲಸ ಮಾಡಿದರೆ ಪಕ್ಷ ಗುರುತಿಸುವುದರ ಜತೆಗೆ ಸೂಕ್ತ ಸ್ಥಾನ ಮಾನವನ್ನು ಕೊಡಲಾಗುತ್ತದೆ. ಅದಕ್ಕೆ ಈ ಆಯ್ಕೆ ಪ್ರಕ್ರಿಯೆಯೇ ಸಾಕ್ಷಿ ಎಂಬ ಸಂದೇಶವನ್ನು ರವಾನೆ ಮಾಡಿದಂತೆ ಆಗುತ್ತದೆ. ಇದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಾರ್ಗೆಟ್ 20 ಕ್ಷೇತ್ರದ ಗುರಿ ತಲುಪುವ ಮಾರ್ಗ ಮತ್ತಷ್ಟು ಹತ್ತಿರವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷ ಇದೆ.