ಬೆಂಗಳೂರು: ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಬಿ.ಎಸ್. ಯಡಿಯೂರಪ್ಪ ಅವರ ಜತೆಗಿರುವ ಒಬ್ಬ ಗನ್ ಮ್ಯಾನ್ ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಯಾಗಿದ್ದ, ಅವರ ಚಲನವಲನಗಳ ಮೇಲೆ ಸಂಪೂರ್ಣ ನಿಗಾ ವಹಿಸುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಣ್, ಯಡಿಯೂರಪ್ಪ ಹಿಂದೆ ಗನ್ ಮ್ಯಾನ್ ಇರುತ್ತಾರೆ. ಗನ್ ಮ್ಯಾನ್‌ಗಳಲ್ಲಿ ಒಬ್ಬರು ಇ.ಡಿ. ಅಧಿಕಾರಿ ಇರುತ್ತಾರೆ. ಅವರು ಎಲ್ಲೇ ಇರಲಿ ಅಲ್ಲಿ ಇ.ಡಿ. ಅಧಿಕಾರಿ ಇರುತ್ತಾರೆ. ಗನ್ ಮ್ಯಾನ್ ದಿರಿಸಿನಲ್ಲೇ ಅವರು ಇರುತ್ತಾರೆ. ಅವರೇ ಯಡಿಯೂರಪ್ಪ ಬಾಯಿಂದ ಹೇಳಿಕೆ ಕೊಡಿಸುತ್ತಾರೆ. ಪ್ರತಿ ಭಾಷಣದ ವೇಳೆ ಅವರು ಇರುತ್ತಾರೆ. ಅವರು ಯಾರು ಎಂದು ನಾನು ತೋರಿಸುತ್ತೇನೆ. ಇದಕ್ಕಾಗಿಯೇ ಯಡಿಯೂರಪ್ಪ ಅವರು ಪಕ್ಷದ ವಿರುದ್ಧ ಏನೂ ಮಾತನಾಡುವುದಿಲ್ಲ ಎಂದು ಆರೋಪ ಮಾಡಿದರು.
ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ವಾಗ್ದಾಳಿ ನಡೆಸಿದ ಲಕ್ಷ್ಮಣ್, ಚಿಕ್ಕಮಗಳೂರಿನಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಸಿ.ಟಿ.ರವಿ ವಸೂಲಿ ಗಿರಾಕಿ. ದತ್ತ ಜಯಂತಿಯನ್ನು ವಸೂಲಿಗೆ ಬಳಸಿಕೊಂಡಿದ್ದಾರೆ. ಅಂಗಡಿಗಳಿಂದ ವಸೂಲಿ ಮಾಡಿದ್ದರಂತೆ. ಈಗಲೂ ಸಿ.ಟಿ.ರವಿ ಅಂಗಡಿಗಳಿಂದ ವಸೂಲಿ ಮಾಡುತ್ತಾರೆ. ಸಿ.ಟಿ.ರವಿ ಪ್ರಮಾಣಿಕರೇ ಆಗಿದ್ದರೆ ತನಿಖೆ ಮಾಡಿಸಿ. ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡುವ ನೀವು, ನಿಮ್ಮ ಆಸ್ತಿ ಎಲ್ಲಿಂದ ಬಂದಿದೆ ಎಂದು ತಿಳಿಸಿ.
ನನಗೂ ಎರಡು ಲೀಗಲ್ ನೊಟೀಸ್ ಕೊಟ್ಟಿರಿ. ಮಾನನಷ್ಟ ಮೊಕದ್ದಮ್ಮೆ ಹಾಕುತ್ತೇವೆ ಎಂದಿರಿ. ನಿಮ್ಮವರನ್ನು ಬಿಟ್ಟು ನನ್ನನ್ನು ಹಿಂಬಾಲಿಸಿದಿರಿ. ನಾನು ಇವತ್ತಿಗೂ ರೈಲಿನಲ್ಲೇ ಓಡಾಡುತ್ತಿದ್ದೇನೆ. ಯಾಕೆ ನೀವು ನೊಟೀಸ್ ಕೊಟ್ಟು ಸುಮ್ಮನಾದಿರಿ? ಯಾಕೆ ನೀವು ಕೋರ್ಟ್‌ಗೆ ಹೋಗಲಿಲ್ಲ? ಬಸ್‌ಸ್ಟ್ಯಾಂಡ್‌ನಲ್ಲಿ ಏನು ಮಾಡಿದಿರಿ ಎಂದು ತಿಳಿಸಿಕೊಡಲು ನಾನು ದಾಖಲೆ ಸಮೇತ ಬರುತ್ತೇನೆ ಎಂದರು.
ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಎಂಎಲ್‌ಸಿ ರಮೇಶ್ ಬಾಬು, ನಾನು ಕಾಂಗ್ರೆಸ್‌ಗೆ ಬರುವ ಮುನ್ನ ಜೆಡಿಎಸ್ ಪಕ್ಷದಲ್ಲಿದ್ದೆ. ಆಗ ದೇವೇಗೌಡರ ಮನೆಗೆ ಬಂದು ಏನು ಮಿಂಗಲ್ ಮಾಡಿಕೊಳ್ಳುತ್ತಿದ್ದಿರಿ ಗೊತ್ತಿದೆ. ನೀವು ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಕಿಂಗ್. ನೀವು ತಾಕತ್ತಿದ್ದರೆ ಅಡ್ಜಸ್ಟ್‌ಮೆಂಟ್ ರಾಜಕಾರಣ ಬಿಡಿ. ಕಾಂಗ್ರೆಸ್ ವಿರುದ್ಧ ಲಘುವಾಗಿ ಮಾತನಾಡಬೇಡಿ. ನಿಮ್ಮ ರಾಜಕೀಯ ಗುರು ಶ್ರೀನಿವಾಸ್‌ಗೆ ಏನು ಮೋಸಮಾಡಿದಿರಿ? ಪದ್ಮನಾಭನಗರದಲ್ಲಿ ನಿಮ್ಮ ಅಡ್ಜೆಸ್ಟ್‌ಮೆಂಟ್ ಏನು ಎಂಬುದು ಗೊತ್ತಿದೆ ಎಂದರು.
ಇದನ್ನೂ ಓದಿ | ಹಾಸನ ಅಭಿವೃದ್ಧಿಗೆ ಬಿ.ಎಸ್. ಯಡಿಯೂರಪ್ಪ ಅಡ್ಡಗಾಲು: ಮೋದಿ ಭೇಟಿ ನಂತರ ಎಚ್.ಡಿ. ದೇವೇಗೌಡ ವಾಗ್ದಾಳಿ