ಚಾಮರಾಜನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅವರು ತೀವ್ರ ಹೃದಯಾಘಾತದಿಂದ ಮೈಸೂರಿನ ಡಿಆರ್‌ಎಂ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದ ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸುವ ಉಮೇದು ಹೊಂದಿದ್ದರು.
1983ರಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷ ಸೇರಿ ಬೆಳೆದ ಅವರು ಸಂಸದರಾಗಿದ್ದ ವೇಳೆ ಅನುದಾನ ಬಳಕೆ ವಿಚಾರದಲ್ಲೂ ಚಾಮರಾಜನಗರ ಕ್ಷೇತ್ರದಲ್ಲಿ ಉತ್ತಮ ಹೆಸರು ಪಡೆದಿದ್ದರು. 2004ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತದಿಂದ ಗೆಲುವು ಪಡೆದು, 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಶಾಸಕರಾಗಿದ್ದರು. 2009ರಲ್ಲಿ ಹಾಗೂ 2014ರಲ್ಲಿ ಲೋಕಸಭೆ ಚುನಾವಣೆಗೆ ನಿಂತು ಗೆದ್ದಿದ್ದರು. 2018ರಲ್ಲಿ ಅಲ್ಲಿಯೇ ಶ್ರೀನಿವಾಸ್ ಪ್ರಸಾದ್ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು. ಸೋಲಿನ ಬಳಿಕವೂ ಕ್ಷೇತ್ರಾದ್ಯಂತ ಸಕ್ರಿಯರಾಗಿ ಓಡಾಡುತ್ತಿದ್ದರು.