ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು ವಿವಿಧ ಹುದ್ದೆಗಳಿಗೆ ನೇಮಕಾತಿ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದೆ. ಆದರೆ, ಫಲಿತಾಂಶ ಕೊಡುವುದನ್ನೇ ಮರೆತು ಹೋದಂತಿದೆ. ಕೆಪಿಎಸ್‌ಸಿ ಪರೀಕ್ಷೆ ಮುಗಿದು 17ತಿಂಗಳು ಕಳೆದರೂ ಇಂದಿಗೂ ಫಲಿತಾಂಶ (KPSC Result Late) ಪ್ರಕಟಗೊಂಡಿಲ್ಲ. ಹೀಗಾಗಿ ಮತ್ತೊಮ್ಮೆ ಕೆಪಿಎಸ್‌ಸಿ ವಿರುದ್ಧ ನೂರಾರು ಅಭ್ಯರ್ಥಿಗಳು ಪ್ರತಿಭಟಿಸಿದ್ದಾರೆ.
“ಆಡು ಮುಟ್ಟದ ಸೊಪ್ಪಿಲ್ಲ ಕೆಪಿಎಸ್‌ಸಿ ಮಾಡದ ತಪ್ಪಿಲ್ಲ”, “ಕೆಪಿಎಸ್‌ಸಿ ಬರೆಯಲು ಬಂದ ಯುವಕ ಕೊನೆಗೆ ಆಗುವನು ಮುದುಕ” ಎಂದೆಲ್ಲ ಘೋಷಣೆ ಕೂಗುತ್ತಾ ಧಿಕ್ಕಾರ ಕೂಗಿದರು. “ಯುಪಿಎಸ್‌ಸಿ ರಿಸ್ಟಲ್ ಬಿಡೋದ್ರಲ್ಲಿ ಎಕ್ಸ್‌ಪರ್ಟ್, ಆದರೆ ಕೆಪಿಎಸ್‌ಸಿ ರೀಲ್ ಬಿಡೋದ್ರಲ್ಲಿ ಎಕ್ಸ್‌ಪರ್ಟ್” ಎಂದು ಅಭ್ಯರ್ಥಿಗಳು ಕಿಡಿಕಾರಿದರು.
ಪ್ರತಿಭಟನಾ ಸ್ಥಳಕ್ಕೆ ಕೆಪಿಎಸ್‌ಸಿ ಅಧಿಕಾರಿ ಮದುಮಾಲತಿ ಆಗಮಿಸಿ ಅಭ್ಯರ್ಥಿಗಳ ಜತೆಗೆ ಕೆಲಕಾಲ ಮಾತುಕತೆ ನಡೆಸಿದರು. ಒಂದು ವಾರ ಸಮಯಾವಕಾಶ ಕೋರಿದರು. ಈ ವೇಳೆ ಅಭ್ಯರ್ಥಿಗಳು ಇಂದೇ ಫಲಿತಾಂಶ ಪ್ರಕಟಿಸುವಂತೆ ಪಟ್ಟು ಹಿಡಿದರು. ಕೊನೆಗೆ ಸ್ಥಳಕ್ಕೆ ಕಾರ್ಯದರ್ಶಿ ವಿಕಾಸ್ ಕಿಶೋರ್ ಬರುವಂತೆ ಒತ್ತಾಯಿಸಿದರು.
ಅಭ್ಯರ್ಥಿಗಳ ಬೇಡಿಕೆ
-ಚಾಲ್ತಿಯಲ್ಲಿರುವ ಪರೀಕ್ಷೆಗಳ ಫಲಿತಾಂಶ
-ಮುಂಬರುವ ಪರೀಕ್ಷೆಗಳ ತ್ವರಿತ ಅಧಿಸೂಚನೆ
-UPSC ಮಾದರಿಯಲ್ಲಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿಗಳ ಬಿಡುಗಡೆ
-PC ಹೋಟಾ ಸಮಿತಿ ಶಿಫಾರಸುಗಳ ತ್ವರಿತ ಅನುಷ್ಠಾನ
-ನಡೆಯುತ್ತಿರುವ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಮುಂಬರುವ ಎಲ್ಲ ನೇಮಕಾತಿಗಳಲ್ಲಿ ಪಾರದರ್ಶಕತೆ
ಫಲ ನೀಡದ ಮಾಜಿ ಸಚಿವರ ಪ್ರತಿಭಟನೆ
ಈ ಹಿಂದೆ ಮಾಜಿ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಆಯೋಗದ ಮುಂದೆ ಪ್ರತಿಭಟನೆ ನಡೆಸಿದರೂ ಯಾವುದೇ ಫಲ ಸಿಗಲಿಲ್ಲ. ರಾಜ್ಯ ಸರ್ಕಾರದ ಗೆಜೆಟೆಡ್ ಪ್ರೊಬೆಶನರಿ, ಎಸ್‌ಡಿಎ, ಪಿಡಬ್ಲ್ಯೂಡಿ ಜೆಇ, ಎಇ ಗ್ರೂಪ್ ಸಿ, ಎಸಿಎಫ್ ಸೇರಿದಂತೆ 3,000 ಹುದ್ದೆಗಳಿಗೆ ಪರೀಕ್ಷೆ ನಡೆದಿದೆ. 2021ರ ಫೆಬ್ರವರಿಯಲ್ಲಿ ಗೆಜೆಟೆಡ್ ಪ್ರೊಬೆಶನರಿಗೆ ಮುಖ್ಯ ಪರೀಕ್ಷೆ, ಎಸ್‌ಡಿಎ ನೇಮಕಾತಿಗೆ 2021 ಅಕ್ಟೋಬರ್‌ನಲ್ಲಿ, ಪಿಡಬ್ಲ್ಯೂಡಿ ಜೆಇ ಹಾಗೂ ಎಇ ನೇಮಕಾತಿಗೆ 2021 ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆದಿದೆ.
ಇದನ್ನೂ ಓದಿ | KPSC EXAM | 2017ರಲ್ಲೂ ನಡೆದಿತ್ತು ತಂತ್ರಜ್ಞಾನ ಬಳಸಿ ಅಕ್ರಮ