ಚಿಕ್ಕಬಳ್ಳಾಪುರ: ಪರಿಹಾರ ನೀಡದೆ ವಂಚಿಸಿದ್ದಾರೆಂದು ಆರೋಪಿಸಿ ಕೆಪಿಟಿಸಿಎಲ್ (KPTCL protest) ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ದೇವಿಶೆಟ್ಟಿಹಳ್ಳಿ ಗ್ರಾಮದ ಪವರ್ ಸ್ಟೇಷನ್ ಎದುರು ವಿದ್ಯುತ್ ಟವರ್ ಏರಿ ಆಕ್ರೋಶವನ್ನು ಹೊರಹಾಕಿದ್ದಾರೆ.
ರೈತರ ಜಮೀನಿನಲ್ಲಿ ವಿದ್ಯುತ್ ಟವರ್‌ಗಳನ್ನು ಈ ಹಿಂದೆ ಅಳವಡಿಸಲಾಗಿತ್ತು. ಇದಕ್ಕೆ ಪರಿಹಾರ ನೀಡುವುದಾಗಿ ಒಪ್ಪಿಸಿ ಕಾಮಗಾರಿಯನ್ನು ಮುಗಿಸಲಾಗಿತ್ತು. ಆದರೆ, ಎಷ್ಟೇ ಕೇಳಿದರೂ ಪರಿಹಾರವನ್ನು ಮಾತ್ರ ಕೆಪಿಟಿಸಿಎಲ್ ಅಧಿಕಾರಿಗಳು ನೀಡಲಿಲ್ಲ ಎಂದು ಆರೋಪಿಸಲಾಗಿದ್ದು, ಗುರುವಾರ ಪ್ರತಿಭಟನೆಗೆ ಇಳಿದಿದ್ದಾರೆ. ಅಲ್ಲದೆ, ಕೆಪಿಟಿಸಿಎಲ್ ಅಧಿಕಾರಿಗಳು ಎಲ್ಲರಿಗೂ ವಂಚನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪವರ್ ಸ್ಟೇಷನ್‌ಗೆ ನುಗ್ಗಿ ಆಕ್ರೋಶ
ಕೆಪಿಟಿಸಿಎಲ್ ವತಿಯಿಂದ ನೂರಾರು ರೈತರಿಗೆ ಪರಿಹಾರ ನೀಡಬೇಕು ಎಂದು ಹೇಳಲಾಗಿದ್ದು, ರೈತರು, ಮಹಿಳೆಯರು ಪವರ್ ಸ್ಟೇಷನ್‌ಗೆ ನುಗ್ಗಿ ಆಕ್ರೋಶವನ್ನು ಹೊರಹಾಕಿದ್ದಾರೆ. ಕೆಪಿಟಿಸಿಎಲ್, ತಹಸೀಲ್ದಾರ್ ಹಾಗೂ ಜಿಲ್ಲಾಡಳಿತದ ವಿರುದ್ಧ ರೈತರು ಘೋಷಣೆ ಕೂಗಿದ್ದಾರೆ.
ಟವರ್ ಹತ್ತಿ ಅಸಮಾಧಾನ
ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ರೈತರು, ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಟವರ್ ಹತ್ತಿ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ, ಕೂಡಲೇ ಪರಿಹಾರ ನೀಡಬೇಕು. ಇಲ್ಲದಿದ್ದರೆ ತಮ್ಮ ಜಮೀನಿನಲ್ಲಿ ಹಾಕಲಾಗಿರುವ ಟವರ್‌ಗಳನ್ನು ತೆರವುಗೊಳಿಸಿ ಎಂದು ತಾಕೀತು ಮಾಡಿದ್ದಾರೆ.
ಇದನ್ನೂ ಓದಿ | ಗಣಿ ನಾಡಿನಲ್ಲಿ ಕ್ಲಾಕ್ ಟವರ್ ರಾಜಕೀಯ: ಬಿಜೆಪಿಗೆ ಪ್ರತಿಷ್ಠೆ, ಕಾಂಗ್ರೆಸ್‌ಗೆ ಪ್ರತಿಭಟನೆಯ ಅಸ್ತ್ರ