ಬೆಂಗಳೂರು: ಜನದಟ್ಟಣೆಯ ಕೆ.ಆರ್. ಮಾರ್ಕೆಟ್ ಬಳಿಯ ಫ್ಲೈ ಓವರ್ (KR Market Flyover) ಮೇಲಿಂದ ನೋಟುಗಳನ್ನು ಎಸೆದು ಸುದ್ದಿ ಮಾಡಿದ ಆ್ಯಂಕರ್ ಅರುಣ್ ಎಂಬಾತನನ್ನು ಪೊಲೀಸರು ಆತನ ನಾಗರಬಾವಿ ಕಚೇರಿಯಿಂದ ವಶಕ್ಕೆ ಪಡೆದಿದ್ದಾರೆ. ಸಿಟಿ ಮಾರ್ಕೆಟ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರು ನಾಗರಬಾವಿಯಲ್ಲಿರುವ ಜಿ.ಟಿ. ಬಿಸಿನೆಸ್ ಕಚೇರಿಗೆ ಭೇಟಿ ನೀಡಿ ಆತನನ್ನು ವಶಕ್ಕೆ ಪಡೆದರು.
ಕೆ.ಆರ್ ಮಾರ್ಕೆಟ್ ಫ್ಲೈಓವರ್‌ನಲ್ಲಿ ಹಣ ಎಸೆದು ಅವಾಂತರ ಸೃಷ್ಟಿಸಿದ ಅರುಣ್ ಅಲ್ಲಿಂದ ನೇರವಾಗಿ ಹೋಗಿದ್ದೇ ತನ್ನ ಕಚೇರಿಗೆ. ಅಲ್ಲಿ ಹೋಗಿ ಆರಾಮವಾಗಿಯೇ ಇದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ.
ದೂರು ದಾಖಲು
ಕೆ.ಆರ್. ಮಾರ್ಕೆಟ್ ಬಳಿ ನಡೆಸಿದ ಅವಾಂತರಕ್ಕೆ ಸಂಬಂಧಿಸಿ ವಂದೇ ಮಾತರಂ ಸಮಾಜಸೇವಾ ಸಂಘಟನೆ ಸಿಟಿ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ವ್ಯಕ್ತಿ ಪ್ರಚಾರದ ಹುಚ್ಚಿನಿಂದ ಈ ರೀತಿ ಮಾಡಿದ್ದಾನೆ. ಸಾವಿರಾರು ವಾಹನಗಳು ಓಡಾಡುವ ರಸ್ತೆಯಲ್ಲಿ ಈ ರೀತಿ ಮಾಡಿರುವುದು ಅತ್ಯಂತ ಅಪಾಯಕಾರಿ. ಏನಾದರೂ ಅಪಘಾತ ಆಗಿದ್ರೆ ಯಾರು ಹೊಣೆ? ಆತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಚಾರದ ಗಿಮಿಕ್ ಇನ್ನು ಮುಂದೆ ಯಾರೂ ಈ ರೀತಿ ಮಾಡಬಾರದು. ಜನರಿಗೆ ತೊಂದರೆ ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳಲು ಅವಕಾಶ ನೀಡಬಾರದು. ಆ ರೀತಿಯ ಶಿಕ್ಷೆ ವಿಧಿಸಬೇಕು ಎಂದು ವಂದೇ ಮಾತರಂ ಸಮಾಜಸೇವಾ ಸಂಘಟನೆಯ ಅಧ್ಯಕ್ಷ ಶಿವಕುಮಾರ್ ದೂರಿನಲ್ಲಿ ಹೇಳಿದ್ದಾರೆ.
ವಿಚಾರಣೆಯ ಅಂಶಗಳು
ಅರುಣ್ ಯಾವ ಕಾರಣಕ್ಕಾಗಿ ಹಣ ಎಸೆದ? ಎಷ್ಟು ಹಣ ಎಸೆದ? ಹಣ ಎಸೆಯಲು ಕೆ.ಆರ್ ಮಾರ್ಕೆಟ್ ಪ್ಲೈ ಓವರನ್ನೇ ಯಾಕೆ ಆಯ್ಕೆ ಮಾಡಿಕೊಂಡ ಎಂಬಿತ್ಯಾದಿ ಪ್ರಶ್ನೆಗಳನ್ನು ಪೊಲೀಸರು ಕೇಳಲಿದ್ದಾರೆ. ಜೊತೆಗೆ ಕುತ್ತಿಗೆಗೆ ಗಡಿಯಾರ ನೇತು ಹಾಕಿಕೊಂಡಿದ್ದರ ಉದ್ದೇಶವೇನು? ಅವನು ಹೇಳಿದ ಗುಡ್ ಟೈಮ್ ಎಂಬ ಪದದ ಅರ್ಥವೇನು ಎಂದೆಲ್ಲ ಪೊಲೀಸರು ಪ್ರಶ್ನಿಸಲಿದ್ದಾರೆ.
ಇದನ್ನೂ ಓದಿ | KR Market Flyover: ನೋಟು ಎಸೆದವನಿಗೆ ಪೊಲೀಸ್ ನೋಟಿಸ್; ಇಷ್ಟೆಲ್ಲ ಮಾಡಿದ್ದಕ್ಕೆ ನೂರೇ ರೂಪಾಯಿ ದಂಡ!