ಬೆಂಗಳೂರು: ಕೆ.ಆರ್.ಪುರ ಟು ವೈಟ್ ಫೀಲ್ಡ್ ನಡುವಿನ (Kr pura to Whitefield Metro) ಮೆಟ್ರೋ ಮಾರ್ಗ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲು ಬಿಎಂಆರ್‌ಸಿಎಲ್ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. ಈ ಮಾರ್ಗದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಮಾರ್ಚ್ 25ಕ್ಕೆ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ ಎನ್ನಲಾಗುತ್ತಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮೂಲಗಳ ಪ್ರಕಾರ, 12.75 ಕಿ.ಮೀ ಉದ್ದದ ವೈಟ್‌ಫೀಲ್ಡ್-ಕೆ.ಆರ್.ಪುರಂ ಮೆಟ್ರೋ ಮಾರ್ಗವು ಮಾರ್ಚ್ 25ರಂದು ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಮೆಟ್ರೋ ಅಧಿಕಾರಿಗಳು ಸ್ಪಷ್ಟತೆಯನ್ನು ನೀಡಿಲ್ಲ. ವಾಣಿಜ್ಯ ಸಂಚಾರಕ್ಕೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಕಳೆದ ಫೆ. 28ಕ್ಕೆ ಬಿಎಂಆರ್‌ಸಿಎಲ್‌ಗೆ ಸುರಕ್ಷತಾ ಕ್ಲಿಯರೆನ್ಸ್ ನೀಡಿದ್ದು, ಸದ್ಯ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ.
ಇನ್ನು ಪ್ರತಿ ರೈಲುಗಳು 12 ನಿಮಿಷಗಳಿಗೊಂದು ಓಡಾಡುವ ನಿರೀಕ್ಷೆಯಿದೆ. ನೇರಳೆ ಮಾರ್ಗದಲ್ಲಿ ಲೋಕೋ ಪೈಲೆಟ್ ಒಟ್ಟು 106 ಸಿಬ್ಬಂದಿ ಇದ್ದು, ಅವರಲ್ಲಿ ಕೆಲವರನ್ನು ಕೆ.ಆರ್.ಪುರಂ ಮತ್ತು ವೈಟ್‌ಫೀಲ್ಡ್ ಮಾರ್ಗಕ್ಕೆ ಪಡೆಯುವ ಚಿಂತನೆಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ಈ ಹೊಸ ವಿಸ್ತರಣೆಯಲ್ಲಿ ಏಳು ರೈಲುಗಳ ಒಟ್ಟಾರೆ ರಚನೆಯು ಅಸ್ತಿತ್ವದಲ್ಲಿರುವ ಮೆಟ್ರೋ ರೈಲುಗಳ ರಚನೆಯನ್ನು ಹೋಲುತ್ತದೆಯಾದರೂ, ಕಾರ್ಯಾಚರಣೆಯ ಅನುಕೂಲತೆಯ ದೃಷ್ಟಿಯಿಂದ ಸ್ವಲ್ಪ ಮಾರ್ಪಾಡು ಇರುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಕೆ.ಆರ್.ಪುರ ಟು ವೈಟ್ ಫೀಲ್ಡ್ ಮೆಟ್ರೋ ಮುಕ್ತ ಸಂಚಾರಕ್ಕೆ ಅಧಿಕೃತವಾಗಿ ದಿನಾಂಕಗಳನ್ನು ನಿರ್ಧರಿಸಿಲ್ಲ. ಆದರೆ ಮಾರ್ಚ್ ತಿಂಗಳ ಅಂತ್ಯದೊಳಗಾಗಿ ಜನರ ಸೇವೆಗಾಗಿ ನೀಡಲು ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.
ಸಿವಿಲ್ ಕೆಲಸಗಳಷ್ಟೇ ಬಾಕಿ
ಮೆಟ್ರೋ ನಿಲ್ದಾಣಗಳಲ್ಲಿ ವಿಶೇಷವಾಗಿ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದಲ್ಲಿ ಕೆಲವು ಕೆಲಸಗಳು ಬಾಕಿ ಉಳಿದಿವೆ. ಇವುಗಳಲ್ಲಿ ಗಾಜಿನ ಫಿಕ್ಸಿಂಗ್ ಮತ್ತು ಸೂಚನಾ ಫಲಕ ನಿರ್ವಹಣೆಯಂತಹ ಕೆಲವು ಸಿವಿಲ್ ಕೆಲಸಗಳು ಸೇರಿವೆ. ಹೀಗಾಗಿ ಅದಷ್ಟು ಬೇಗ ಈ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: NHM Workers Protest: 48 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗಿ; ಎನ್‌ಎಚ್‌ಎಂ ಒಳಗುತ್ತಿಗೆ ನೌಕರರಿಗೆ ಸರ್ಕಾರ ಎಚ್ಚರಿಕೆ
ಸಾಮಾನ್ಯವಾಗಿ ಸ್ವಂತ ವಾಹನದಲ್ಲೋ ಅಥವಾ ಬಸ್‌ನಲ್ಲಿ ಕೆ.ಆರ್.ಪುರ ಟು ವೈಟ್‌ಫೀಲ್ಡ್‌ಗೆ ಹೋಗಬೇಕಾದರೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸರಿ ಸುಮಾರು ಒಂದು ಗಂಟೆಯ ಸಮಯ ಬೇಕಾಗುತ್ತದೆ. ಆದರೆ ಮೆಟ್ರೋದಿಂದಾಗಿ ಪ್ರಯಾಣದ ಸಮಯವು 24 ನಿಮಿಷಗಳಿಗೆ ಇಳಿಯಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ