ಬೆಂಗಳೂರು: ಸರಳ, ಪಾರದರ್ಶಕ ಕಂದಾಯ ಇಲಾಖೆಯನ್ನಾಗಿ (Revenue Department) ಮಾಡಲು ಈ ಬಾರಿ ನಾನು ನಿರ್ಧಾರ ಮಾಡಿದ್ದೇನೆ. ಕಂದಾಯ ಇಲಾಖೆ ಕಾರ್ಯವೈಖರಿ ಬಗ್ಗೆ ಕೆಲವು ದೂರುಗಳು ಇವೆ. ಇಲ್ಲಿ ನಾವು ಬದಲಾವಣೆ, ಸುಧಾರಣೆಗೆ ಚಾಲನೆ ನೀಡಿದ್ದೇವೆ. ಕೆಲವು ಕಡೆ ಸರಳೀಕರಣ ಮಾಡುತ್ತಲಿದ್ದು, ಅನಗತ್ಯ ಪದ್ಧತಿಗಳನ್ನು ತೆಗೆಯುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾನು ಮೂರು ಸೂತ್ರಗಳನ್ನು ಹಾಕಿಕೊಂಡಿದ್ದೇನೆ. ಇಲಾಖೆ ಅಧಿಕಾರಿಗಳ ಮಾನಸಿಕ ಸ್ಥಿತಿ ಬದಲಾವಣೆ, ಸರಳೀಕರಣ ವ್ಯವಸ್ಥೆ ಹಾಗೂ ಸಮಯದ ಪರಿಧಿಯೊಳಗೆ ಅರೆ ನ್ಯಾಯಿಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿಯನ್ನು ಹಾಕಿಕೊಂಡಿದ್ದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna Byre Gowda) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕಂದಾಯ ಇಲಾಖೆಯಲ್ಲಿ ಕೆಲವು ಕಡೆ ಸರಳೀಕರಣ ಮಾಡುತ್ತಲಿದ್ದು, ಅನಗತ್ಯ ಪದ್ಧತಿಗಳನ್ನು ತೆಗೆಯುತ್ತಿದ್ದೇವೆ. ಜತೆಗೆ ಕಡತ ವಿಲೇವಾರಿಗೆ ವೇಗ ನೀಡುತ್ತಿದ್ದೇವೆ. ತಹಸೀಲ್ದಾರ್, ಎಸಿ, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ವರ್ಷ, ಮೂರು ವರ್ಷ ಹಾಗೂ ಐದು ವರ್ಷಗಳಲ್ಲಿ ಬಾಕಿ ಇರುವ ನ್ಯಾಯಾಲಯ ಪ್ರಕರಣಗಳನ್ನು ಗುರುತಿಸಲು ಸೂಚಿಸಿದ್ದೇವೆ. ಈ ಪ್ರಕರಣಗಳನ್ನು ಇಷ್ಟು ದಿನಗಳ ಒಳಗೆ ವಿಲೇವಾರಿ ಮಾಡಬೇಕು ಎಂದು ಡೆಡ್‌ಲೈನ್ ಕೊಟ್ಟಿದ್ದೇವೆ. ನ್ಯಾಯ ಸಮ್ಮತ ತೀರ್ಪು ನೀಡಲು ಸೂಚನೆ ನೀಡಿ ಸುಧಾರಣೆಯನ್ನು ಆರಂಭ ಮಾಡಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಎಲ್ಲ ಕಡೆ ಭ್ರಷ್ಟಾಚಾರ ಇದೆ
ಇಂದು ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ. ಪ್ರತಿನಿತ್ಯ ಪ್ರತಿಯೊಬ್ಬರ ಶೋಷಣೆ ನಡೆಯುತ್ತಿದೆ. ಇದನ್ನು ನಾನು ಸಹ ಒಪ್ಪಿಕೊಳ್ಳುತ್ತೇನೆ. ಆದರೆ, ನಾವು ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಬೇಕಿದೆ. ಇದಕ್ಕಾಗಿ ಕಂದಾಯ ಇಲಾಖೆಯಲ್ಲಿ ಇರುವ ಸಿಬ್ಬಂದಿಯ ವಾತಾವರಣ ಬದಲಾವಣೆ ತರಲು ಪ್ರಯತ್ನ ಮಾಡುತ್ತಿದ್ದೇನೆ. ನಾನು ಅವರಿಗೆ ಮನವಿ ಮಾಡುತ್ತಿದ್ದೇನೆ. ಯಾರೋ ಒಂದು ಸ್ವಲ್ಪ ಜನ ಮಾಡುವ ತಪ್ಪಿನಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಸಾಮಾಜಿಕ ಬದಲಾವಣೆಯನ್ನು ತರೋಣ ಎಂದು ನಾನು ಮಾನಸಿಕ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಸರಳ ಕಂದಾಯ ಇಲಾಖೆ – ಕೃಷ್ಣ ಬೈರೇಗೌಡ ಹೇಳಿದ 3 ಸೂತ್ರ
ನಮ್ಮ ಇಲಾಖೆಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದೇನೆ. ನಾನೊಬ್ಬನೇ ಯಾವುದೇ ಕೆಲಸ ಮಾಡಲು ಆಗದು. ಅವರ ಸಹಕಾರವೂ ಮುಖ್ಯವಾಗುತ್ತದೆ. ಹೀಗಾಗಿ ಅವರನ್ನು ಜತೆಯಾಗಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಅವರಲ್ಲಿ ಮಾನಸಿಕ ಬದಲಾವಣೆ ತರಲು ಯತ್ನಿಸುತ್ತಿದ್ದೇನೆ. ಎರಡನೆಯದಾಗಿ, ಅನಗತ್ಯ ಪದ್ಧತಿಗಳನ್ನು ತೆಗೆದುಹಾಕಿ, ಸರಳೀಕರಣ ಮಾಡುತ್ತಿದ್ದೇನೆ. ಈ ಮೂಲಕ ಹೆಚ್ಚಿನ ಕೆಲಸಗಳು ಆನ್‌ಲೈನ್ ಮುಖಾಂತರವೇ ನಡೆಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ. ಮೂರನೆಯದಾಗಿ, ಅರೆ ನ್ಯಾಯಿಕ ಪ್ರಕರಣಗಳನ್ನು (ತಹಸೀಲ್ದಾರ್, ಎಸಿ, ಡಿಸಿ) ಸಮಯದ ಪರಿಧಿ ಒಳಗೆ ಮುಗಿಸಲು ಗಡುವು ನೀಡುವ ಕೆಲಸವನ್ನು ಮಾಡಿದ್ದೇನೆ. ತಾಲೂಕು, ಜಿಲ್ಲೆಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ವಿಲೇವಾರಿ ಮಾಡುವ ಸಂಬಂಧ ಖುದ್ದು ನಾನೇ ನಿಗಾ ವಹಿಸುತ್ತಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಸರಳೀಕೃತ ಭೂ ಪರಿವರ್ತನೆ
ಭೂ ಪರಿವರ್ತನೆಗೆ ಸಂಬಂಧಪಟ್ಟಂತೆ ನಾವೀಗ ಸರಳೀಕೃತ ಆದೇಶವನ್ನು ಮಾಡಿದ್ದೇವೆ. ಮೊದಲು ಭೂ ಪರಿವರ್ತನೆ ಆಗಬೇಕಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದರು. ಈಗ ಇದನ್ನು ಬದಲಿಸಿದ್ದೇವೆ. ನಗರ ಅಭಿವೃದ್ಧಿ ಪ್ರಾಧಿಕಾರದವರು ಮೊದಲು ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿರುತ್ತಾರೆ. ಅದರ ಪ್ರಕಾರ, ಕೃಷಿ ವಲಯ, ಕೈಗಾರಿಕಾ ವಲಯ ಹಾಗೂ ವಸತಿ ವಲಯ ಎಂಬುದಾಗಿ ಪ್ರತ್ಯೇಕವಾದ ಮೇಲೆ ಆ ವಲಯಗಳಿಗೆ ಸಂಬಂಧಪಟ್ಟಂತೆ ಚಟುವಟಿಕೆ ಮಾಡಲು ಅವಕಾಶ ಇದ್ದಂತೆ. ಪುನಃ ಅದಕ್ಕೆ ಹೋಗಿ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳಿಗೆ ಅನುಮತಿ ಕೇಳಲು ಅರ್ಜಿ ಸಲ್ಲಿಸುವ ಪದ್ಧತಿಯನ್ನು ಕೈಬಿಟ್ಟಿದ್ದೇವೆ. ಈ ಮೂಲಕ ಭ್ರಷ್ಟಾಚಾರಕ್ಕೆ ಕಾರಣವಾಗಿದ್ದ ಈ ಅಂಶವನ್ನು ಹೊರಗಿಟ್ಟು, ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಇದನ್ನೂ ಓದಿ: Power point with HPK : ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ವಿಶೇಷ ಟಾಸ್ಕ್‌ಫೋರ್ಸ್ ; ಕಂದಾಯ ಸಚಿವ ಕೃಷ್ಣಬೈರೇಗೌಡ
ಇನ್ನು ನೋಂದಣಿಯಾದ ಮೇಲೆ ಕಂದಾಯ ಇಲಾಖೆಗೆ ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಲಾಗುತ್ತದೆ. ಆದರೆ, ಖಾತೆ ಮಾಡಿಕೊಡಲು ಕೆಲವು ಕಡೆ ಆರು ತಿಂಗಳವರೆಗೆ ಇತ್ಯರ್ಥ ಆಗದ ಪ್ರಕರಣಗಳು ನಮ್ಮಲ್ಲಿ ಇದ್ದವು. ಇದರಲ್ಲಿ ಕೆಲವು ಅನಗತ್ಯ ಪ್ರಕ್ರಿಯೆಗಳು ಇದ್ದವು. ಆ ಎಲ್ಲವನ್ನೂ ನಾವೀಗ ತೆಗೆದುಹಾಕಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.