Site icon Vistara News

Demon Monster ಆಗಿ ಬರ್ತಾ ಇದ್ದಾರೆ ಕಟಪಾಡಿ ರವಿ: ಈ ಬಾರಿ ಅವರ ಟಾರ್ಗೆಟ್‌ 1 ಕೋಟಿ ರೂ. ಕಲೆಕ್ಷನ್‌

katapadi Ravi

ರಾಜೇಂದ್ರ ಭಟ್‌ ಕೆ. (ರಾಜ ಮಾರ್ಗ ಅಂಕಣಕಾರರು)

ಕಾರ್ಕಳ: ಪ್ರತೀ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಬಂದರೆ ಕರಾವಳಿಯ ಜನರು ಭಾರಿ ಸಂಭ್ರಮದಲ್ಲಿ ಮುಳುಗಿ ಬಿಡುತ್ತಾರೆ. ಉಡುಪಿಯ ವಿಠ್ಠಲ ಪಿಂಡಿಯ ಸಡಗರ, ಕೃಷ್ಣ ಮಠದ ಹೂವಿನ ಅಲಂಕಾರ, ಮೊಸರು ಕುಡಿಕೆ, ರಸ್ತೆಯುದ್ದಕ್ಕೂ ಮೊಸರು ಚೆಲ್ಲುವ ಗೊಲ್ಲರು, ಕೋಲಾಟ, ಸಂಭ್ರಮದ ಹುಲಿ ವೇಷ.. ಹೀಗೆ ಉಡುಪಿಯ ಅಷ್ಟಮಿಗೆ ನೂರಾರು ಆಯಾಮಗಳು. ಅದಕ್ಕೆ ಕಳೆದ ಹತ್ತು ವರ್ಷಗಳಿಂದ ಸೇರ್ಪಡೆಯಾದ ಇನ್ನೊಂದು ಆಯಾಮವೇ ರವಿ ಕಟಪಾಡಿ!

ಕಟಪಾಡಿ ರವಿ

ಯಾರೀ ರವಿ ಕಟಪಾಡಿ?
ಉಡುಪಿ ಜಿಲ್ಲೆಯ ಕಟಪಾಡಿಯ ಒಬ್ಬ ಸಾಮಾನ್ಯ ಸೆಂಟ್ರಿಂಗ್ ಕಾರ್ಮಿಕ ರವಿ ಕಟಪಾಡಿ. ಹೆಚ್ಚು ಓದಿಲ್ಲ ಎಂದು ಅವರೇ ಹೇಳುತ್ತಾರೆ. ಆದರೆ ಆತ ಒಳ್ಳೆಯ ಮಾತುಗಾರ ಮತ್ತು ಕ್ರಿಯೇಟಿವ್ ವ್ಯಕ್ತಿ. ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ದೊಡ್ಡ ಗುಣ ಅವರಿಗೆ ಇದೆ. ಅದರಿಂದಾಗಿ ಅವರು ಇಂದು ಲೆಜೆಂಡ್ ಆಗಿದ್ದಾರೆ.

ಪ್ರತೀ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಠ್ಠಲಪಿಂಡಿಯ ಪ್ರಯುಕ್ತ ಅವರು ಥರಾವರಿ ವೇಷಗಳನ್ನು ಹಾಕುತ್ತಾರೆ. ಇಂಗ್ಲಿಷ್‌ ಸಿನೆಮಾ, ಕಾಮಿಕ್ಸ್‌ಗಳಿಂದ ಪ್ರೇರಿತವಾದ ವೇಷವನ್ನು ಧರಿಸಿ ಭಿಕ್ಷಾಪಾತ್ರೆ ಹಿಡಿದು ಜನರ ಮುಂದೆ ಬರುತ್ತಾರೆ. ಸುಮಾರು ನಾಲ್ಕು ದಿನ ಅವರು ಅದೇ ವೇಷವನ್ನು ಧರಿಸಿ ಉಡುಪಿಯ ಮೂಲೆಮೂಲೆಗೂ ಹೋಗುತ್ತಾರೆ. ಜನರಿಂದ ಹಣವನ್ನು ಸಂಗ್ರಹ ಮಾಡುತ್ತಾರೆ. ಅವರ ಗೆಳೆಯರು ದಾನಿಗಳಿಗೆ ಉದ್ದೇಶವನ್ನು ವಿವರಿಸುತ್ತಾರೆ. ಸಂಗ್ರಹವಾದ ಅಷ್ಟೂ ದುಡ್ಡನ್ನು ರವಿ ಕಟಪಾಡಿಯವರು ಚಿಕ್ಕ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ದಾನ ಮಾಡುತ್ತಾರೆ! ನಿಜವಾಗಿ ಅಗತ್ಯ ಇರುವ ಮಕ್ಕಳ ವೈದ್ಯಕೀಯ ನೆರವಿಗೆ ಅವರ ಭಿಕ್ಷಾಟನೆಯ ದುಡ್ಡು ವಿನಿಯೋಗ ಆಗುತ್ತದೆ.

2013-14ರ ಸಾಲಿನಿಂದ ಒಂದು ವರ್ಷ ಕೂಡ ಖಾಲಿ ಬಿಡದೆ ಅವರು ಈ ಕೈಂಕರ್ಯವನ್ನು ಮಾಡುತ್ತಾ ಬಂದಿದ್ದಾರೆ! ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೂಡ ರವಿ ಕಟಪಾಡಿ ಅವರ ವೇಷ ಧರಿಸಿ ಸೇವೆ ಮಾಡುವ ಕೆಲಸ ನಿಂತಿಲ್ಲ! ಇದುವರೆಗೆ ಅವರು ಸಂಗ್ರಹ ಮಾಡಿದ ಮತ್ತು ಮಕ್ಕಳ ಆರೋಗ್ಯ ಸೇವೆಗೆ ವಿನಿಯೋಗ ಮಾಡಿದ ಒಟ್ಟು ಹಣ ಅಂದಾಜು 90 ಲಕ್ಷ! ಈ ವರ್ಷ ಒಟ್ಟು ಮೊತ್ತವನ್ನು ಒಂದು ಕೋಟಿ ಮಾಡುವ ಸಂಕಲ್ಪ ಅವರದ್ದು!

ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೆಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವು ರವಿ ಅವರಿಗೆ ದೊರೆಯಿತು. ಅಲ್ಲಿ ಅಮಿತಾಬ್ ಕೇಳುತ್ತಾರೆ – ರವಿ, ಜನ ನಿಮ್ಮನ್ನು ಹೃದಯ ಶ್ರೀಮಂತರು ಅನ್ನುತ್ತಾರೆ. ಯಾಕೆ?

ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಬ್‌ ಬಚ್ಚನ್‌ ಆವರ ಜತೆ

ಅದಕ್ಕೆ ರವಿ ಕೊಟ್ಟ ಉತ್ತರ – ನನ್ನ ತಲೆಯಿಂದ ಹಿಡಿದು ಕಾಲಿನವರೆಗೆ ಎಲ್ಲ ಅಂಗಗಳೂ ಗಟ್ಟಿ ಆಗಿವೆ. ಅದರಿಂದಾಗಿ ನಾನು ಜಗತ್ತಿನಲ್ಲಿಯೇ ಶ್ರೀಮಂತ!
ಆ ಕಾರ್ಯಕ್ರಮದಲ್ಲಿ ದೊರೆತ ಅಷ್ಟೂ ದುಡ್ಡನ್ನು ಅವರು ತನ್ನ ಸೇವೆಗೆ ವಿನಿಯೋಗ ಮಾಡಿದ್ದಾರೆ!

ಅಷ್ಟಮಿಯ ವೇಷವನ್ನು ಧರಿಸುವ ಆಸೆಗಾಗಿ ಅವರು ವಿದೇಶದ ಉದ್ಯೋಗವನ್ನು ನಿರಾಕರಿಸಿ ಊರಲ್ಲಿ ಕೂತಿದ್ದಾರೆ. ಮದುವೆ ಕೂಡ ಮುಂದೂಡುತ್ತಿದ್ದಾರೆ.

“ಒಂದು ಬಟ್ಟಲು ಗಂಜಿ, ಒಂದು ಬಂಗುಡೆ ಫ್ರೈ ನನ್ನ ಹಸಿವು ಇಂಗಿಸಲು ಸಾಕು. ನಾನು ಭವಿಷ್ಯದ ಬಗ್ಗೆ ಹೆಚ್ಚು ಯೋಚನೆ ಮಾಡುವುದಿಲ್ಲ. ವರ್ತಮಾನದಲ್ಲಿ ಬದುಕುವುದನ್ನು ಆಸೆ ಪಡುತ್ತೇನೆ. ದುಡ್ಡು ನನಗೆ ಮುಖ್ಯ ಅಲ್ಲ. ಮಾನವೀಯ ಸಂಬಂಧಗಳು ಮುಖ್ಯ. ಆರೋಗ್ಯ ಸಮಸ್ಯೆ ಇರುವ ಮಕ್ಕಳ ಕಷ್ಟಗಳ ಮುಂದೆ ನನ್ನ ಕಷ್ಟ ಏನೂ ಅಲ್ಲ. ನನಗೆ ಯಾವ ಪ್ರಶಸ್ತಿ, ಸನ್ಮಾನಗಳೂ ಬೇಡ. ಕಳೆದ ಹತ್ತು ವರ್ಷಗಳಿಂದ ನಾನು ಈ ಸೇವೆ ಮಾಡುತ್ತಿದ್ದೇನೆ. ನನ್ನ ಕೊನೆಯ ಉಸಿರಿನವರೆಗೂ ಇದನ್ನು ಮುಂದುವರೆಸಬೇಕು ಎಂದು ಆಸೆ ಇದೆ!” ಎನ್ನುತ್ತಾರೆ ರವಿ ಕಟಪಾಡಿ.

ಅವರು ಈಗಲೂ ಸೆಂಟ್ರಿಂಗ್ ಕಾರ್ಮಿಕರಾಗಿಯೇ ದುಡಿಯುತ್ತಿದ್ದಾರೆ. ಒಂದಿಷ್ಟು ಅಹಂ ಅವರ ಮಾತಲ್ಲಿ ಕಾಣುವುದಿಲ್ಲ. ಅವರ ಸೇವಾ ಮನೋಭಾವಕ್ಕೆ ಬೆಂಬಲ ವಾಗಿ ನಿಂತ ದೊಡ್ಡ ಗೆಳೆಯರ ಬಳಗವೇ ಅವರ ಆಸ್ತಿ ಎಂದು ಅವರು ಹೇಳುತ್ತಾರೆ.

ಇನ್ನು ಅವರ ವೇಷಗಳ ಬಗ್ಗೆ ಹೇಳಬೇಕೆಂದರೆ, ಅಷ್ಟಮಿಗೆ ಒಂದು ತಿಂಗಳ ಮೊದಲೇ ಅವರು ತನ್ನ ವೇಷಗಳ ವಿನ್ಯಾಸ ಮಾಡಲು ತೊಡಗುತ್ತಾರೆ. ಅದು ತುಂಬಾ ಕ್ಲಿಷ್ಟವಾದ ವೇಷ. ಎಷ್ಟೋ ಬಾರಿ ಮೈ ಮತ್ತು ಮುಖದ ಚರ್ಮವು ಕಿತ್ತುಹೋಗಿ ರಕ್ತ ಬಂದ ಪ್ರಸಂಗವೂ ಇದೆ. ಕಳೆದ ವರ್ಷ ಮುಖದ ಚರ್ಮ ಕಿತ್ತು ಬಂದಿತ್ತು! ಕಣ್ಣು ನೋವು ಬಂದಿತ್ತು!

ಆದರೆ ರವಿ ತನ್ನ ಸೇವೆಯಲ್ಲಿ ಆ ಎಲ್ಲ ನೋವನ್ನು ಮರೆಯುತ್ತಾರೆ. ಈ ಬಾರಿ ಅವರು ಧರಿಸಿರುವ ವೇಷ Demon Monster! ರವಿ ಅವರಿಗೆ ಇರುವ ಎತ್ತರ ಅವರ ವೇಷಕ್ಕೆ ಸಹಾಯ ಮಾಡುತ್ತದೆ. ಇಂದು ಮುಂಜಾನೆ ತನ್ನ ಗೆಳೆಯರ ಸಹಾಯದಿಂದ ವೇಷ ಧರಿಸಿ ಹೊರಟ ರವಿ ಮುಂದಿನ ನಾಲ್ಕು ದಿನ ನಿದ್ದೆ ಮಾಡುವುದಿಲ್ಲ. ಹೆಚ್ಚು ಕಡಿಮೆ ಉಪವಾಸ. ನಡೆದು ಕಾಲು ದಣಿಯುವುದಿಲ್ಲ. ದೀಪವಾರಿದ ಕಣ್ಣಲ್ಲಿ ಬೆಳಕು ತುಂಬಿಸುವ ಕಾಯಕ ನಿಲ್ಲುವುದಿಲ್ಲ!

ರವಿ ಕಟಪಾಡಿ ಈ ವರ್ಷ ಒಂದು ಕೋಟಿ ಮೊತ್ತ ತಲುಪಲು ನಿಮ್ಮ ಸಹೃದಯ ಸಹಾಯ ಇರಲಿ. ಹಾಗೆಯೇ ರವಿ ಅವರ ಹೃದಯ ಶ್ರೀಮಂತಿಕೆಗೆ ಒಂದು ಸೆಲ್ಯೂಟ್ ಕೂಡ ಇರಲಿ.

ಇದನ್ನೂ ಓದಿ| ರಾಜ ಮಾರ್ಗ ಅಂಕಣ | ಇಂಗ್ಲಿಷ್‌ ಎಂಎ ಮಾಡಿ ಕ್ಯಾಬ್‌ ಓಡಿಸುತ್ತಿದ್ದ ಆ ಯುವಕ ಹೇಳಿದ ಒಂದು ಅದ್ಭುತ ಪಯಣದ ಕಥೆ

Exit mobile version