ಬೆಂಗಳೂರು: ವಿಧಾನಸಭಾ ಚುನಾವಣೆ (Karnataka election 2023) ದಿನಾಂಕ ಘೋಷಣೆ ಆಗಿದ್ದೇ ತಡ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ಮಾಡುತ್ತಿದ್ದಾರೆ. ಮನೆಯಲ್ಲಿ ದಾಖಲೆ ಇಲ್ಲದ ಫುಡ್ ಕಿಟ್ (Food kit) ಸಂಗ್ರಹಿಸಿದ್ದಕ್ಕೆ ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ (Ex minister Krishnayya Shetty) ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಗಾಂಧಿ ನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಕೃಷ್ಣಯ್ಯ ಶೆಟ್ಟಿ, ಮತದಾರರಿಗೆ ಹಂಚಿಕೆ ಮಾಡಿ ಮತಗಳನ್ನು ಗಳಿಸುವ ಉದ್ದೇಶದಿಂದ ಆಮಿಷವೊಡ್ಡಲು ಅಕ್ರಮವಾಗಿ ದಿನಸಿ ದಾಸ್ತಾನುಗಳನ್ನು ಸಂಗ್ರಹಿಸಿದ್ದರು. ಖಚಿತ ಮಾಹಿತಿ ಮೇರೆಗೆ ಮಲ್ಲೇಶ್ವರಂ ನಲ್ಲಿರುವ ನಿವಾಸಕ್ಕೆ ದಾಳಿ ನಡೆಸಿದಾಗ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ದಿನಸಿ ದಾಸ್ತಾನುಗಳನ್ನು ಸಂಗ್ರಹಿಸಿರುವುದು ಕಂಡು ಬಂದಿದೆ.
ಲಕ್ಷಾಂತರ ರೂ.ಮೌಲ್ಯದ ದಿನಸಿ ದಾಸ್ತಾನು ಸಂಗ್ರಹದ ದಾಖಲೆಗಳನ್ನು ಹಾಜರುಪಡಿಸಿಲ್ಲ. ಈ ಕಾರಣದಿಂದಾಗಿ ಇದು ಮತದಾರರಿಗೆ ಹಂಚಿಕೆ ಮಾಡಲು ಅಕ್ರಮವಾಗಿ ಸಂಗ್ರಹಿಸಿದ ದಿನಸಿ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಇದನ್ನೂ ಓದಿ: Murder Case: ದೊಣ್ಣೆಯಿಂದ ಅಟ್ಟಾಡಿಸಿ ಹೊಡೆದು ಯುವಕನ ಹತ್ಯೆ ಮಾಡಿದ ದುಷ್ಕರ್ಮಿಗಳು
ಕ್ಷೇತ್ರದ ಹೆಸರು ಬಳಸಿ ಫುಡ್ ಕಿಟ್‌ಗಳನ್ನು ತಯಾರಿ ಮಾಡಲಾಗಿದ್ದು, ಇದೀಗ ಚುನಾವಣಾಧಿಕಾರಿ ಲಕ್ಷ್ಮಣ್ ಅವರ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಾದ ಎರಡು ದಿನಗಳಲ್ಲಿ ಕೃಷ್ಣಯ್ಯ ಶೆಟ್ಟಿಯವರಿಗೆ ನೋಟಿಸ್ ನೀಡಿ ಅವರ ಹೇಳಿಕೆಯನ್ನು ಮಲ್ಲೇಶ್ವರ ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ.