ಬೆಂಗಳೂರು: ಈ ಬಾರಿ ಹಿಂಗಾರು ಅಬ್ಬರಿಸುತ್ತಿದ್ದು, ರಾಜ್ಯದೆಲ್ಲೆಡೆ ವರುಣನಾರ್ಭಟ ಜೋರಾಗಿದೆ. ಕೆಲವು ಕಡೆ ಅವಾಂತರವನ್ನೇ ಸೃಷ್ಟಿಸಿದೆ. ಆದರೆ, ಕರುನಾಡಿನ ಜೀವ ನದಿ ಕಾವೇರಿಯಲ್ಲಿ (Cauvery) ನೀರಿನ ಹರಿವು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪರಿಣಾಮ ಕೆಆರ್‌ಎಸ್ ಡ್ಯಾಂನಲ್ಲಿ (KRS Dam) ಕಳೆದ ಐದು ವರ್ಷದಲ್ಲೇ ಕಡಿಮೆ ಮಟ್ಟಕ್ಕೆ (Water Level) ನೀರಿನ ಸಂಗ್ರಹವಿದೆ. ಸದ್ಯ ಕೆಆರ್‌ಎಸ್ ಈಗ 81 ಅಡಿಗೆ ತಲುಪಿದ್ದು, ಪರಿಸ್ಥಿತಿ ಹೀಗೇ ಮುಂದುವರಿದರೆ ಡೆಡ್ ಸ್ಟೋರೇಜ್ ತಲುಪಿ, ಕುಡಿಯುವ ನೀರಿಗೂ ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಬೇಸಿಗೆಯಲ್ಲಿ ಬಿಸಿಲಿನ ಪ್ರಮಾಣವೂ ಎಂದಿಗಿಂತ ಹೆಚ್ಚೇ ಇರುವುದು ಸಹ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲು ಒಂದು ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ, ಕಾವೇರಿ ಕೊಳ್ಳದ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಇದು ಈಗ ಭಾರಿ ತಲೆನೋವಿಗೆ ಕಾರಣವಾಗಿದೆ. ಏಕೆಂದರೆ, ಹಲವೆಡೆ ಬತ್ತುವ ಹಂತಕ್ಕೆ ತಲುಪಿದ್ದಲ್ಲದೆ, ಕಾವೇರಿ ನದಿಯಲ್ಲಿ ಬಂಡೆಗಳ ದರ್ಶನವಾಗುತ್ತಿದೆ.
ಡೆಡ್ ಸ್ಟೋರೇಜ್‌ಗೆ 7 ಅಡಿ ಮಾತ್ರವೇ ಬಾಕಿ!
ಕೆಆರ್‌ಎಸ್‌ನ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 124.80 ಅಡಿ ಇದ್ದರೆ, ಹಾಲಿ 81.80 ಅಡಿ ನೀರಿನ ಮಟ್ಟ ತಲುಪಿದೆ. ಇನ್ನು ಒಳಹರಿವು 404 ಕ್ಯೂಸೆಕ್ ಇದ್ದರೆ, ಹೊರಹರಿವು 3011 ಕ್ಯೂಸೆಕ್ ಇದೆ. ಬುಧವಾರವಷ್ಟೇ 82.30 ಅಡಿ ನೀರಿನ ಮಟ್ಟ ಇತ್ತು. ಆದರೆ, ಎರಡೇ ದಿನದಲ್ಲಿ ಸುಮಾರು ಒಂದೂವರೆ ಅಡಿಯಷ್ಟು ನೀರಿನ ಸಂಗ್ರಹದಲ್ಲಿ ಕುಸಿತ ಕಂಡಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬಹುಬೇಗ ಡೆಡ್ ಸ್ಟೋರೇಜ್ ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಲಾಗುತ್ತಿದೆ. ಕಾರಣ 74 ಅಡಿಗೆ ಡೆಡ್ ಸ್ಟೋರೇಜ್ ಸಂಗ್ರಹ ಇರಲಿದ್ದು, ಇದಕ್ಕೀಗ ಕೇವಲ 7 ಅಡಿಯಷ್ಟೇ ಬಾಕಿ ಇದೆ.
ಡೆಡ್ ಸ್ಟೋರೇಜ್ ತಲುಪಿದರೆ ಏನು ಕಥೆ?
ಒಂದು ವೇಳೆ ಕೆಆರ್‌ಎಸ್ ಡ್ಯಾಂನಲ್ಲಿ ನಿರೀಕ್ಷಿತ ನೀರು ಸಂಗ್ರಹವಾಗದೆ, ಇದೇ ಮಾದರಿಯಲ್ಲಿದ್ದು ಡೆಡ್ ಸ್ಟೋರೇಜ್ ತಲುಪಿದರೆ ಕೃಷಿ ಚಟುವಟಿಕೆಗೆ ನೀರು ಬಿಡಲಾಗುವುದಿಲ್ಲ. ಆಗ ಕುಡಿಯುವ ನೀರಿಗಷ್ಟೇ ಬಳಕೆ ಮಾಡಬೇಕಾದ ಪರಿಸ್ಥಿತಿ ತಲೆದೋರುತ್ತದೆ. ಇದರಿಂದ ಮೈಸೂರು, ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಆಗ ಪ್ರತಿ ಹನಿ ಬಿಡುವಾಗಲೂ ಹಿಂದೆ ಮುಂದೆ ನೋಡಬೇಕಾಗಲಿದೆ.
2016ರಲ್ಲಿ ಡೆಡ್ ಸ್ಟೋರೇಜ್ ತಲುಪಿತ್ತು!
2017ರ ವರೆಗೆ ಕೆಆರ್‌ಎಸ್‌ನಲ್ಲಿ ಹಲವು ಬಾರಿ ನೀರಿನ ಮಟ್ಟದಲ್ಲಿ ಭಾರಿ ಕುಸಿತವಾಗುತ್ತಿತ್ತು. ಆದರೆ, ಆರು ವರ್ಷದಿಂದೀಚೆಗೆ ಉತ್ತಮ ಮಳೆಯಾಗಿ ಯಾವುದೇ ಸಮಸ್ಯೆಯಾಗಿರಲಿಲ್ಲ. 2016ರಲ್ಲಿ ಜಲಾಶಯವು ಡೆಡ್ ಸ್ಟೋರೆಜ್ ತಲುಪಿತ್ತು. ಅದೇ 2017ರಲ್ಲಿ ಮುಂಗಾರು ಅಷ್ಟಾಗಿ ಬಾರದಿದ್ದರೂ ಹಿಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ಸಮಸ್ಯೆಯಾಗಿರಲಿಲ್ಲ. ಅದೇ 2018ರಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಮೂಲಕ ಪ್ರವಾಹವೇ ಸೃಷ್ಟಿಯಾಗಿತ್ತು. ಹೀಗಾಗಿ ಜಲಾಶಯವೂ ಭರ್ತಿಯಾಗಿತ್ತು. ಕಳೆದ ವರ್ಷವೂ ನವೆಂಬರ್‌ನಲ್ಲಿಯೇ ಜಲಾಶಯ ಭರ್ತಿಯಾಗಿತ್ತು.
ಮುಂಗಾರು ವಿಳಂಬವಾದರೆ ಕಷ್ಟ
ಈಗ ಮುಂಗಾರು ಪ್ರಾರಂಭವಾಗಿ ಸರಿಯಾದ ಪ್ರಮಾಣದಲ್ಲಿ ಮಳೆಯಾದರೆ ಸಮಸ್ಯೆಯಾಗದು, ಒಂದು ವೇಳೆ ಮುಂಗಾರು ವಿಳಂಬವಾಗಿ ಇತ್ತ ನೀರಿನ ಸಂಗ್ರಹದಲ್ಲಿ ಕುಸಿತವಾಗುತ್ತಾ ಸಾಗಿದರೆ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಲಿದೆ.
ರೈತರಲ್ಲಿ ಆತಂಕ
ಇಷ್ಟೊಂದು ಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿರುವುದು ಕೆಆರ್‌ಎಸ್ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರ ಆತಂಕಕ್ಕೆ ಕಾರಣವಾಗಿದೆ. ಜಲಾಶಯದಲ್ಲಿ 49.452 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದರೂ ಹಾಲಿ 11.602 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹವಿದೆ. ಹೀಗೇ ಮುಂದುವರಿದರೆ ಕೃಷಿಗೆ ನೀರು ಲಭ್ಯವಾಗುವುದಿಲ್ಲ ಎಂದು ಆತಂಕ ಪಡುತ್ತಿದ್ದಾರೆ.
ಇದನ್ನೂ ಓದಿ: IPL Betting: ಐಪಿಎಲ್ ಬೆಟ್ಟಿಂಗ್ ದಂಧೆಗೆ ಯುವಕ ಬಲಿ, ಹಣ ಕೇಳಲು ಹೋದಾಗ ಕೊಲೆ
ಕಳೆದ ವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಹಿಂಗಾರು ಮಳೆ ಭರ್ಜರಿಯಾಗಿಯೇ ಸುರಿದಿದ್ದರಿಂದ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ, ಈ ಬಾರಿ ಪರಿಸ್ಥಿತಿ ಉಲ್ಟಾ ಆಗಿದೆ. ಅಲ್ಲದೆ, ಕಳೆದ ವರ್ಷ ಈ ಹೊತ್ತಿಗೆ ಜಲಾಶಯದಲ್ಲಿ 103.8 ಅಡಿ ನೀರಿತ್ತು. ಆದರೆ, ಈ ಬಾರಿ 81.80 ಅಡಿ ನೀರಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ