ಮಂಡ್ಯ: ಭಾರಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯ ಬಹುತೇಕ ಭರ್ತಿಯಾಗಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 123 ಅಡಿ ನೀರು ಭರ್ತಿಯಾಗಿದೆ. ಹೀಗಾಗಿ 15 ಗೇಟ್ ಮೂಲಕ ನದಿಗೆ 25 ಸಾವಿರ ಕ್ಯೂಸೆಕ್ ನೀರನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಸದ್ಯ ಡ್ಯಾಂಗೆ 30,216 ಕ್ಯೂಸೆಕ್ ಒಳ ಹರಿವು ಇದ್ದು, ಸಂಜೆ ವೇಳೆಗೆ ಒಳ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕೊಡಗಿನಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಡ್ಯಾಂಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಡ್ಯಾಂ ಭರ್ತಿಗೆ ಇನ್ನೊಂದು ಅಡಿ ಬಾಕಿ ಇರುವ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಬಿಡಲಾಗುತ್ತಿದ್ದು, ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಜಿಲ್ಲಾಡಳಿತ ಕೂಡ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡು ಸಜ್ಜಾಗಿದ್ದು, ನದಿ ಪಾತ್ರದ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಡ್ಯಾಂ ನಿಂದ ಹೆಚ್ಚುನೀರು ಬಿಡುಗಡೆಯಾಗುತ್ತಿದ್ದಂತೆ ಬಲಮುರಿ, ರಂಗನತಿಟ್ಟು ಪಕ್ಷಿಧಾಮ ಜಲಾವೃತವಾಗಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿಗರ ಬೋಟಿಂಗ್ ನಿಷೇಧ ಮಾಡಿದ್ದು, ಪ್ರವಾಸಿಗರಿಗೂ ನಿರ್ಬಂಧ ಹೇರಲಾಗಿದೆ.
ಬಲಮುರಿ ಹಾಗೂ ನಿಮಿಷಾಂಭ ದೇಗುಲ ಹಾಗೂ ಸಂಗಮದ ಬಳಿ ನದಿ ನೀರು ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಪ್ರವಾಸಿಗರು ನದಿ ದಂಡೆ ಬಳಿ ತೆರಳದಂತೆ ಬ್ಯಾರಿಕೇಡ್ ಅಳವಡಿಸಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಎನ್‌ಡಿಆರ್‌ಎಫ್ ತಂಡ ನಿಯೋಜಿಸಲು ಪತ್ರವನ್ನು ಕೂಡ ಜಿಲ್ಲಾಡಳಿತ ಬರೆದಿದೆ.
ಇದನ್ನೂ ಓದಿ | Rain News | ಕೊಡಗಿನಲ್ಲಿ ಮುಂದುವರಿದ ಭಾರಿ ಮಳೆ, ರಾಜ್ಯದಲ್ಲಿ 5-6 ದಿನ ವರುಣನ ಅಬ್ಬರ ನಿರೀಕ್ಷೆ