ಬೆಂಗಳೂರು: ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್ ಸಿಕ್ಕಿದೆ.
ಕೊಲೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪೊಲೀಸರು ಬಿ ವರದಿ (ಮುಕ್ತಾಯ) ಸಲ್ಲಿಸಿದ್ದಾರೆ.
ಈಶ್ವರಪ್ಪ ಅವರ ಮೌಖಿಕ ಆದೇಶದ ಆಧಾರದಲ್ಲಿ ಸುಮಾರು 4 ಕೋಟಿ ರೂ. ಮೊತ್ತದ ಗುತ್ತಿಗೆ ಕಾಮಗಾರಿ ಮಾಡಿದ್ದೆ, ಆದರೆ ಅದಕ್ಕೆ ಹಣ ನೀಡಿರಲಿಲ್ಲ. ಹಣ ಮಂಜೂರು ಮಾಡಬೇಕು ಎಂದರೆ 40 % ಕಮಿಷನ್‌ಗೆ ಈಶ್ವರಪ್ಪ ಬೇಡಿಕೆ ಇಟ್ಟಿದ್ದರು ಎಂದು ಬೆಳಗಾವಿ ಮೂಲದ ಸಂತೋಷ್ ಆರೋಪಿಸಿದ್ದರು.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಸಂತೋಷ್ ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನೂ ನಡೆಸಿದ್ದರು. ಏಪ್ರಿಲ್ 12ರಂದು ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ತನಿಖೆ ನಡೆಸಿರುವ ಉಡುಪಿ ಟೌನ್ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಬಿ ವರದಿ ಸಲ್ಲಿಸಿದ್ದಾರೆ.
ಕೊಲೆ ಅಥವಾ ಕೊಲೆಗೆ ಪ್ರಚೋದನೆಗೆ ಸೂಕ್ತ ಸಾಕ್ಷ್ಯಾಧಾರ ಸಿಕ್ಕಿಲ್ಲ. ಸಿಸಿಟಿಟಿ, ವಿಡಿಯೊ, ಮೊಬೈಲ್ ಸಂದೇಶಗಳು ಸೇರಿ ಎಲ್ಲ ತಾಂತ್ರಿಕ ದಾಖಲೆಗಳನ್ನೂ ಪರಿಶೀಲಿಸಲಾಗಿದೆ. ಈಶ್ವರಪ್ಪ ಅವರಿಂದ ಅಥವಾ ಅವರ ಕಡೆಯವರಿಂದ ಬೆದರಿಕೆ ಬಂದಿದೆ ಎನ್ನುವುದಕ್ಕೆ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | ಈಶ್ವರಪ್ಪ ರಾಜೀನಾಮೆ ಬಿಜೆಪಿ ನಿರ್ಧಾರವಲ್ಲ; ಅವರ ವೈಯಕ್ತಿಕ ನಿರ್ಧಾರ: ಆರಗ ಜ್ಞಾನೇಂದ್ರ
ಚೌಡೇಶ್ವರಿ ಕೃಪೆ
ನನ್ನನ್ನು ತುಳಿಯುವುದಕ್ಕೆ ಯಾವ ರಾಕ್ಷನಕೈಯಿಂದಲೂಸ ಆಧ್ಯವಿಲ್ಲ. ಹಿಜಾಬ್, ಕೇಸರಿ ಧ್ವಜ ಹಾಗೂ ಹಿಂದುತ್ವ ವಿಚಾರಗಳು ನನಗೆ ರಕ್ತಗತವಾಗಿ ಬಂದಿರುವಂತಹವು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ಸಿಕ್ಕಿರುವ ಸಂಸ್ಕಾರದ ಆಧಾರದಲ್ಲಿ ದೇಶ, ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಯಾರೋ ಬಂದು ತೊಡರುಗಾಲು ಹಾಕುತ್ತಾರೆ ಎಂದರೆ ಆ ತೊಡರುಗಾಲಿಗೆ ನಾನು ಬೀಳುವವನಲ್ಲ. ಇಂದು ನಾನು ಆರೋಫದಿಂದ ಮುಕ್ತವಾಗಿ ಬಂದಿದ್ದೇನೆ, ಹಿಂದುತ್ವದ ಪ್ರತಿಪಾದನೆಯನ್ನು ಆಜೀವನಪರ್ಯಂತ ಮುಂದುವರಿಸುತ್ತೇನೆ.
ನ್ಯಾಯಾಲಯದ ಮೊರೆ
ಬಿ ರಿಪೋರ್ಟ್ ಸಲ್ಲಿಕೆ ಕುರಿತು ಸಂತೋಷ್ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂತೋಷ್ ಸಹೋದರ ಪ್ರಶಾಂತ್, ಈ ಪ್ರಕರಣದಲ್ಲಿ ಯಾವುದೇ ಕಾನೂನು ಪ್ರಕ್ರಿಯೆಗಳನ್ನು ಪಾಲನೆ ಮಾಡಿಲ್ಲ. ಸೂಕ್ತವಾದ ಮಾಹಿತಿಯನ್ನೂ ನಮಗೆ ನೀಡಿಲ್ಲ. ನಾವು ಸಂಪರ್ಕಿಸಿದಾಗಲೂ ಪೊಲೀಸರು ಸ್ಪಂದನೆ ಮಾಡಿಲ್ಲ. ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇವೆ. ನ್ಯಾಯ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | BJP ರಾಜ್ಯ ಕಾರ್ಯಕಾರಿಣಿಗೆ ಸಂತೋಷ್ ಆತ್ಮಹತ್ಯೆ ನೆರಳು: ಒಂದೇ ದಿನವಿರುವಂತೆ ಮಾಜಿಯಾಗುವ ಈಶ್ವರಪ್ಪ