ಬೆಂಗಳೂರು: ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಮೊಹಮ್ಮದ್ ಶಾರಿಕ್‌ನನ್ನು ಭಯೋತ್ಪಾದಕ ಎಂದು ಅಷ್ಟೊಂದು ಅವಸರದಲ್ಲಿ ಘೋಷಿಸಿದ್ದೇಕೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಪ್ರಶ್ನೆಗೆ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ʻʻಗೂಂಡಾಗಿರಿ ಮಾಡುವವರು ಕಳ್ಳತನ ಮಾಡೋರು ಇಂಥ ಅಸಂಬದ್ಧ ವಿಚಾರಗಳನ್ನು ಹುಡುಕಿ ಹುಡುಕಿ ತೆಗೀತಾರೆ. ಡಿಕೆ ಶಿವಕುಮಾರ್‌ಗೆ ಇದರಲ್ಲಿ ಬಹಳ ಅನುಭವ ಇದೆ, ಕಾಂಗ್ರೆಸ್‌ನವರಿಗೂ ಚೆನ್ನಾಗಿ ಅನುಭವ ಇದೆ. ಭಯೋತ್ಪಾದನೆಯ ಮೂಲವೇ ಕಾಂಗ್ರೆಸ್ʼʼ ಎಂದು ಗೇಲಿ ಮಾಡಿದ್ದಾರೆ.
ʻʻಡಿಕೆ ಶಿವಕುಮಾರ್ ಮನೆಯಲ್ಲಿ ಎಷ್ಟು ಕಂತೆ ಕಂತೆ ನೋಟು ಇದೆ ಅಂತ ಇಡೀ ದೇಶಕ್ಕೆ ಗೊತ್ತಿದೆ. ಎಷ್ಟು ಬಾಕ್ಸ್‌ಗಳಲ್ಲಿ ಅಕ್ರಮಗಳ ದಾಖಲೆಗಳಿವೆ ಎಂದು ಗೊತ್ತಿದೆ. ಇದನ್ನೇ ನೋಡಿ ಇ.ಡಿ ಇಲಾಖೆಯವರು ತನಿಖೆ ಮಾಡಿ ತಿಹಾರ್ ಜೈಲಿಗೂ ಕಳಿಸಿದರುʼʼ ಎಂದು ಹೇಳಿದರು ಈಶ್ವರಪ್ಪ.
ʻʻಡಿಕೆಶಿಗೆ ಜವಾಬ್ದಾರಿ ಅನ್ನೋ ಪ್ರಶ್ನೆಯೇ ಇಲ್ಲ. ಕುಕ್ಕರ್ ಬ್ಲಾಸ್ಟ್‌ಗೂ ಇದಕ್ಕೂ (ವೋಟರ್ ಐಡಿ ಹಗರಣಕ್ಕೂ) ಏನು ಸಂಬಂಧ?ʼʼ ಎಂದು ಪ್ರಶ್ನಿಸಿರುವ ಅವರು, ʻʻನೀನು ಹೋಗಿ ಬಂದಿಲ್ವಾ ಜೈಲಿಗೆ? ಬಾರಲ್ಲಿ ಜಗಳಾಡಿ ಕೇಸ್ ಹಾಕಿಸಿಕೊಂಡು ಜೈಲಿಗೆ ಹೋಗಿ ಬಂದಿಲ್ವಾ? ಜೈಲಿಗೆ ಹೋಗಿ ಬಂದಿದ್ದ ತಪ್ಪು ಅಂತ ಜನರ ಮುಂದೆ ಒಪ್ಪಿಕೊಳ್ಳಿ. ತಿಹಾರ್ ಜೈಲಲ್ಲಿ ನಾನು ಸಿಕ್ಕೊಂಡಿದ್ದು ಹೌದು ಎಂದು ಒಪ್ಕೊʼʼ ಎಂದು ಹೇಳಿದರು.
ಆಂತರಿಕ ಗೊಂದಲದಿಂದ ಇಂಥ ಹೇಳಿಕೆ
ʻʻಡಿಕೆಶಿಯದ್ದು ಏನಾಗಿದೆ ಅಂದರೆ ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದು ಕಡೆ ಉಳಿದವರು. ಈಗ ಪಕ್ಷದ ಒಳಗಿನ ಆಂತರಿಕ ಗೊಂದಲ ಸುಧಾರಿಸದೆ ವಿಧಿಯಿಲ್ಲ. ಸಿದ್ದರಾಮಯ್ಯಗೆ ಬೈದರೆ ಅವರ ಕಡೆಯವರು ಡಿಕೆಶಿಗೆ ಬೈತಾರೆ. ಡಿಕೆಶಿಗೆ ಬೈದರೆ ಅವರ ಪರ ಇರೋದು ಸಿದ್ದರಾಮಯ್ಯ ಕಡೆಯವರಿಗೆ ಬೈತಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಈ ಆಂತರಿಕ ಗೊಂದಲ ಬಗೆಹರಿಸಿಕೊಳ್ಳಲಾಗದೆ ಹೀಗೆಲ್ಲ ಮಾತಾಡ್ತಾ ಇದಾರೆʼʼ ಎಂದು ಹೇಳಿದ ಅವರು, ಅವರು ಏನೇ ಹುಡುಕಿದರೂ, ನಮ್ಮದು ಒಂದೇ ಒಂದು ಕೂದಲು ಕೂಡಾ ಸಿಗಲ್ಲ ಅವರಿಗೆ ಎಂದರು.
ಭಯೋತ್ಪಾದನೆಯ ಮೂಲವೇ ಕಾಂಗ್ರೆಸ್
ʻʻಭಯೋತ್ಪಾದಕ ಚಟುವಟಿಕೆ ಮೂಲವೇ ಕಾಂಗ್ರೆಸ್. ರಾಷ್ಟ್ರ ದ್ರೋಹಿ ಚಟುವಟಿಕೆಗೆ ಬೆಂಬಲ ಕೊಡುತ್ತಾ ಬಂದವರೇ ಕಾಂಗ್ರೆಸ್‌ನವರು. ಪಿಎಫ್‌ಐ ಬೆಳೆಯಲು ಕಾಂಗ್ರೆಸ್ ಕಾರಣʼʼ ಎಂದು ಈಶ್ವರಪ್ಪ ಆಪಾದಿಸಿದರು.
ಇದನ್ನೂ ಓದಿ | DK Shivakumar | ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಭಯೋತ್ಪಾದಕ ಅಂದಿದ್ದೇಕೆ? ಡಿಕೆಶಿ ಪ್ರಶ್ನೆಗೆ ಬಿಜೆಪಿ ಸಿಡಿಮಿಡಿ