Site icon Vistara News

KSOU Convocation : 64ರ ಅರ್ಧನಾರಿಗೆ ಸಂಸ್ಕೃತದಲ್ಲಿ ಚಿನ್ನ; ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಮುಕ್ತ ವಿವಿ ಗೌರವ ಡಾಕ್ಟರೇಟ್‌

Karnataka State Open University Convocation

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯ (Karnataka State Open University) 18ನೇ ವಾರ್ಷಿಕ ಘಟಿಕೋತ್ಸವ (convocation) ಮೈಸೂರಿನಲ್ಲಿ ನಡೆದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌ ನೀಡಲಾಗಿದೆ. ಬೆಂಗಳೂರಿನ ಶ್ರೀ ಲಕ್ಷ್ಮೀ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌ ಸಂಸ್ಥಾಪಕ ಮುಖ್ಯಸ್ಥ ಅಎನ್‌.ರಾಮಚಂದ್ರಯ್ಯರಿಗೆ ವೈದ್ಯಕೀಯ ಹಾಗೂ ಆಕ್ಸಫರ್ಡ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಷನ್‌ ಮುಖ್ಯಸ್ಥ ವೆಂಕಟ ಲಕ್ಷ್ಮೀ ನರಸಿಂಹ ರಾಜುರಿಗೆ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಗೌರವ ಡಾಕ್ಟರೇಟ್ ನೀಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಘಟಿಕೋತ್ಸವಕ್ಕೆ ಗೈರಾಗಿದ್ದ ಹಿನ್ನೆಲೆಯಲ್ಲಿ ರಾಜಭವನದಲ್ಲಿ ಪ್ರದಾನ ಮಾಡಲು ಅವಕಾಶ ಕೇಳಲಾಗಿದೆ ಎಂದು ಕುಲಪತಿ ಪ್ರೊ.ಶರಣಪ್ಪ ಹೇಳಿದರು.

ಓದಿಗೆ ವಯಸ್ಸು ಅಡ್ಡಿ ಅಲ್ಲ - ದೀಪಾ ರವಿಶಂಕರ್ | Deepa Ravishankar Received MA Kannada Degree | VistaraNews

ಘಟಿಕೋತ್ಸವದಲ್ಲಿ 64ರ ತಮಿಳುನಾಡು ಮೂಲದ ಎಸ್.ಅರ್ಧನಾರಿ, ಸಂಸ್ಕೃತ ವಿಷಯದಲ್ಲಿ ಚಿನ್ನದ ಪದಕ ಪಡೆದರು. ರಾಜ್ಯಶಾಸ್ತ್ರ ವಿಷಯದಲ್ಲಿ ಎನ್.ಭಾಗ್ಯಶ್ರೀ ಅವರಿಗೆ ಪಿಎಚ್​ಡಿ, ವಿವಿಧ ವಿಷಯಗಳಲ್ಲಿ ರ‍್ಯಾಂಕ್‌ ಗಳಿಸಿದ ವಿದ್ಯಾರ್ಥಿಗಳಿಗೆ 44 ಚಿನ್ನದ ಪದಕಗಳು, 27 ನಗದು ಬಹುಮಾನ ನೀಡಲಾಗಿದೆ. ಶಿವಮೊಗ್ಗದ ಶಿಕ್ಷಕಿ ಎಚ್.ಎಂ.ಸೌಭಾಗ್ಯ ಕನ್ನಡದಲ್ಲಿ ಎರಡು ಚಿನ್ನದ ಪದಕ ತಮ್ಮದಾಗಿಸಿಕೊಂಡರೆ, ರಂಗಭೂಮಿ ಹಾಗೂ ಕಿರುತೆರೆ ನಟಿ ದೀಪಾ ರವಿಶಂಕರ್ ಎಂ.ಎ. ಪದವಿ ಪಡೆದುಕೊಂಡರು.

ಓದಿಗೆ ವಯಸ್ಸು ಅಡ್ಡಿಯಿಲ್ಲ

ರಂಗಭೂಮಿ, ಕಿರುತೆರೆಯಲ್ಲಿ ತಮ್ಮದೆ ಛಾಪು ಮೂಡಿಸಿರುವ ನಟಿ ದೀಪಾ ರವಿಶಂಕರ್‌ ಎಂ.ಎ. ಕನ್ನಡದಲ್ಲಿ ಪದವಿ ಪಡೆದರು. ಪದವಿ ಪಡೆದು ಪ್ರತಿಕ್ರಿಯಿಸಿದ ಅವರು, ನನ್ನನ್ನು ನಾಡಿಗೆ ಪರಿಚಯ ಮಾಡಿದ್ದು ಕನ್ನಡ ಭಾಷೆ, ಹೀಗಾಗಿ ಕನ್ನಡದಲ್ಲಿ ಎಂ.ಎ‌ ಓದಬೇಕೆಂಬ ಆಸೆ ಈಡೇರಿಸಿಕೊಂಡಿದ್ದೇನೆ. ಕೆಎಸ್‌ಒಯು ಪಠ್ಯಗಳು ವಿಸ್ತಾರವಾದ ಕನ್ನಡ ಸಾಹಿತ್ಯವನ್ನು ಒಳಗೊಂಡಿವೆ. ಜೀವನಪೂರ್ತಿ ಸಾಹಿತ್ಯದ ಪರಾಮರ್ಶೆಗೆ ಇಟ್ಟುಕೊಳ್ಳುವಂತಹ ಪಠ್ಯಗಳಾಗಿವೆ. ಹಿಂದೆಲ್ಲ ಒಂದು ಹಂತದವರೆಗೆ ಓದಿ ಕೆಲಸಕ್ಕೆ ಸೇರಿದರೆ ಮತ್ತೆ ಓದುತ್ತಿರಲಿಲ್ಲ. ಈಗೀನ ಸಾಮಾಜಿಕ ಜಾಲತಾಣದ ಯುಗದಲ್ಲಿ ಓದಿಗೆ ವಯಸ್ಸು ಅಡ್ಡಿ ಇಲ್ಲ ಎಂದು ನಟಿ ದೀಪಾ ರವಿಶಂಕರ್ ಹೇಳಿದರು.

ಇದನ್ನೂ ಓದಿ: Chandassu: ಕನ್ನಡ ಛಂದಸ್ಸಿನ ಮೇಲೊಂದು ನೋಟ…

ಬಿಎ, ಬಿಕಾಂ, ಬಿಎಸ್ಸಿ, ಎಂಎ, ಎಂಕಾಂ, ಬಿಎಡ್ ಹೀಗೆ ಹತ್ತಾರು ವಿಷಯಗಳಲ್ಲಿ ಪದವಿ ಪಡೆದವರು ಕೆಎಸ್​ಒಯು ಅಂಗಳದಲ್ಲಿ ಉತ್ಸಾಹದಿಂದ ಕಂಡ ಬಂದರು. ಈ ಬಾರಿ 5241 ಮಹಿಳೆಯರು, 3481 ಪುರುಷರು ಸೇರಿ ಒಟ್ಟು 8722 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗಿದೆ. ಸ್ನಾತಕೋತ್ತರ ವಿಭಾಗದಲ್ಲಿ 7057, ಸ್ನಾತಕ ವಿಭಾಗದಲ್ಲಿ 8722 ಅಭ್ಯರ್ಥಿಗಳು ಪದವಿ ಪಡೆದುಕೊಂಡರು.

ಘಟಿಕೋತ್ಸವ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಧೀಶ ಅಶೋಕ್ ಎಸ್. ಕಿಣಗಿ, ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಸೇರಿ ಕುಲಸಚಿವರಾದ ಪ್ರೊ.ಕೆ.ಬಿ.ಪ್ರವೀಣ, ಪ್ರೊ.ಕೆ.ಎಲ್.ಎನ್.ಮೂರ್ತಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version