Site icon Vistara News

KSOU Scam : ಮುಕ್ತ ವಿವಿ ಸಹಯೋಗ ಸಂಸ್ಥೆಗಳಿಂದ 300 ಕೋಟಿ ರೂ. ವಂಚನೆ; ಸಿಬಿಐ ತನಿಖೆ ಆರಂಭ

KSOU Scam CBI Enquiry

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ದೂರ ಶಿಕ್ಷಣ ಸಂಸ್ಥೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ (Karnataka State Open Universtiy- KSOU) ಬಯಲಿಗೆ ಬಂದಿರುವ 300 ಕೋಟಿ ರೂ.ಗಳ ಹಗರಣದ (300 Crore rupees scam) ಬಗ್ಗೆ ಸಿಬಿಐ ತನಿಖೆ (CBI Investigation) ಆರಂಭಗೊಂಡಿದೆ.

ಮುಕ್ತ ವಿಶ್ವ ವಿದ್ಯಾಲಯವು ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಹೊಂದಿರುವ ಸಹಯೋಗ ಶಿಕ್ಷಣ ಸಂಸ್ಥೆಗಳಿಂದ ಈ ಗೋಲ್‌ಮಾಲ್‌ ನಡೆದಿದೆ (KSOU Scam) ಎಂದು ಕೆಎಸ್‌ಒಯು ಆಡಳಿತ ಮಂಡಳಿ ಈ ಮೊದಲೇ ಸರ್ಕಾರದ ಗಮನಕ್ಕೆ ತಂದಿತ್ತು. ಸರ್ಕಾರ ಇದರ ಸಿಬಿಐ ತನಿಖೆಗೆ ಆದೇಶ ಹೊರಡಿಸಿತ್ತು. ಇದೀಗ ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ ಬಳಿಕ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭ ಮಾಡಿದೆ.

ಮುಕ್ತ ವಿವಿಯ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಯೋಜನೆಯಡಿ ಈ ಮಟ್ಟದ ಹಣದ ದುರುಪಯೋಗ ನಡೆದಿದೆ ಎನ್ನಲAಗಿದೆ. ಮುಕ್ತ ವಿಶ್ವವಿದ್ಯಾಲಯವು ದೇಶ ಮತ್ತು ವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಯೋಜನೆ ಆರಂಭಿಸಿದೆ. ಅಲ್ಲಿ ಸಹಭಾಗಿತ್ವ ಯೋಜನೆ ಆರಂಭ, ವಿದ್ಯಾರ್ಥಿಗಳಿಂದ ದಾಖಲಾತಿ, ಪರೀಕ್ಷೆ ಮತ್ತು ಪರೀಕ್ಷಾ ಶುಲ್ಕ ಸಂಗ್ರಹದಂಥ ಕೆಲಸಗಳು ನಡೆಯುತ್ತವೆ. ಹೀಗೆ ಸಂಗ್ರಹಿಸಿದ ಹಣವನ್ನು ಕೆಎಸ್‌ಒಯುಗೆ ತುಂಬದೆ ಮೋಸ ಮಾಡಲಾಗಿದೆ ಎನ್ನುವುದು ಹಗರಣದ ಒಟ್ಟಾರೆ ಹೂರಣ.

2013-14 ಮತ್ತು 2014-15ನೇ ಹಣಕಾಸು ವರ್ಷದಲ್ಲಿ ವಿಶ್ವವಿದ್ಯಾಲಯದ ಆಯವ್ಯಯ ವರದಿ ಪರಿಶೀಲನೆ ವೇಳೆ ಇದು ಬೆಳಕಿಗೆ ಬಂದಿದೆ. ಸಹಭಾಗಿತ್ವ ಸಂಸ್ಥೆಗಳಿಂದ ಜಮೆಯಾಗಬೇಕಿದ್ದ 50 ಕೋಟಿ ರೂ. ಆಯವ್ಯಯ ವರದಿಯಲ್ಲಿ ಕಾಣೆಯಾಗಿರುವುದು ಪತ್ತೆಯಾಗಿದೆ. ಆಗ ಹಿಂದಿನ ವರದಿಗಳನ್ನು ಗಮನಿಸಿದಾಗ ಇನ್ನಷ್ಟು ವಂಚನೆಗಳು ಬಯಲಿಗೆ ಬಂದವು.

ಸಹಭಾಗಿತ್ವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ದಾಖಲಾತಿ, ಪರೀಕ್ಷೆ ಹಾಗೂ ಇತರ ಶುಲ್ಕವಾಗಿ ಸಂಗ್ರಹಿಸಿದ ಹಣ ಮತ್ತು ಕೆ.ಎಸ್‌ಒಯುಗೆ ತುಂಬಿದ ಹಣದಲ್ಲಿ ಭಾರಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ವಿವರ ಸಂಗ್ರಹಿಸಲಾಯಿತು. ಹಿಂದಿನ ದಾಖಲೆಗಳನ್ನು ಗಮನಿಸಿದಾಗ 2009-10ರಿಂದ 2012-13ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟು 250 ಕೋಟಿ ರೂ. ಜಮೆಯಾಗದೆ ಇರುವುದು ಪತ್ತೆಯಾಗಿದೆ. ಹೀಗೆ ಒಟ್ಟು 300 ಕೋಟಿ ರೂ. ವಂಚನೆ ನಡೆದಿರುವುದಾಗಿ ಲೆಕ್ಕಪರಿಶೋಧನೆ ವೇಳೆ ತಿಳಿದು ಬಂದಿತ್ತು.

ಇದನ್ನೂ ಓದಿ: KSOU Convocation : 64ರ ಅರ್ಧನಾರಿಗೆ ಸಂಸ್ಕೃತದಲ್ಲಿ ಚಿನ್ನ; ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಮುಕ್ತ ವಿವಿ ಗೌರವ ಡಾಕ್ಟರೇಟ್‌

ಇದರ ಗಮನಿಸಿಸಿದ ಮುಕ್ತ ವಿವಿಯ ನಿರ್ದೇಶಕ ಮಂಡಳಿಯು ತಕ್ಷಣ ರಾಜ್ಯ ಸರ್ಕಾರದ ಗಮನಕ್ಕೆ ತಂದಿತ್ತು. ಇದನ್ನು ಪರಿಶೀಲಿಸಿದ ರಾಜ್ಯ ಸರ್ಕಾರ 2009-10ರಿಂದ 2015-16 ರವರೆಗಿನ ಅವಧಿಯಲ್ಲಿ ನಡೆದಿರಬಹುದಾದ ಎಲ್ಲ ದುರುಪಯೋಗಗಳ ತನಿಖೆ ನಡೆಸುವಂತೆ ಸಿಬಿಐಯನ್ನು ಕೋರಿತ್ತು.

ಕೇಂದ್ರೀಯ ತನಿಖಾ ಮಂಡಳಿಯು ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿ, ಬ್ಯಾಂಕ್‌ ದಾಖಲೆಗಳನ್ನೂ ಪರಿಶೀಲಿಸಿ ಈಗ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ.

Exit mobile version