ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(KSOU) ಗಲಾಟೆಗೆ ಸಂಬಂಧಿಸಿದ ಆರೋಪ-ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ. ಸಹಾಯಕ ಕುಲಸಚಿವ ಪ್ರದೀಪ್ ಗಿರಿ ಅವರನ್ನು ಅಮಾನತು ಮಾಡಿದ ನಂತರ ಸಂಘರ್ಷ ಜೋರಾಗಿದ್ದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಬುಧವಾರ ಚಾಕುವಿನಿಂದ ಇರಿದರೆಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಡಾ.ವಿದ್ಯಾಶಂಕರ್, ʼʼನಾನು ವಿವಿಯ ಕುಲಪತಿ, ಚಾಕು ಯಾಕೆ ಇಟ್ಟುಕೊಳ್ಳಲಿ? ವಿಶ್ವವಿದ್ಯಾಲಯದ ಹಣ ದುಂದು ವೆಚ್ಚ ಸಾಬೀತು ಪಡಿಸಿದರೆ ರಾಜೀನಾಮೆ ನೀಡುವೆʼʼ ಎಂದಿದ್ದಾರೆ.
ಅಮಾನತು ಕೊಂಡಿರುವ ಸಹಾಯಕ ಕುಲಸಚಿವ ಪ್ರದೀಪ್ ಗಿರಿ ಈ ಸಂಬಂಧ ಆರೋಪ ಮಾಡಿದ್ದರು. “ಮಂಗಳವಾರ ಮೌಲ್ಯಮಾಪನ ವಿಭಾಗಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದೆ, 2.15ಕ್ಕೆ ಕುರ್ಚಿಯಲ್ಲಿ ಇಲ್ಲದ 21 ಜನರಿಗೆ ನೋಟಿಸ್ ಕೊಟ್ಟೆ, ಅವರಿಗೆ ಸಹಾಯಕ ಕುಲಸಚಿವ ಪ್ರದೀಪ್ ಗಿರಿ ಲೀಡರ್ ಆಗಿದ್ದಾನೆ. ಆತನಿಗೆ ಈಗಾಗಲೇ ನಾಲ್ಕೈದು ನೋಟಿಸ್ ನೀಡಲಾಗಿದೆ. ಇದನ್ನು ಪ್ರಶ್ನಿಸಿದಕ್ಕೆ ಗಲಾಟೆ ಮಾಡಿದ್ದಾನೆ. ನಾನು ಚಾಕು ಹಿಡಿದುಕೊಂಡು ಹೋಗಿದ್ದೆಲ್ಲ ಸುಳ್ಳು. ಕುಲಪತಿಯಾಗಿ, ಒಬ್ಬ ನೌಕರನಾಗಿ ನಾನೇಕೆ ಹಲ್ಲೆ ಮಾಡಲಿʼʼ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಯಾವುದೇ ನೌಕರರ ಸಂಘ ಇಲ್ಲ. ಸಂಘದ ಬಗ್ಗೆ ವಿವರಣೆ ಕೇಳಿದ್ದು ಇದುವರೆಗೂ ದಾಖಲೆ, ಉತ್ತರ ಕೊಟ್ಟಿಲ್ಲ. ಸರ್ಕಾರದ ಕೋರಿಕೆ ಮೇರೆಗೆ ಶಾಲೆಗಳ ದತ್ತು ಪಡೆದಿದ್ದೇವೆ. ಅದು ನನ್ನೊಬ್ಬನ ತೀರ್ಮಾನ ಅಲ್ಲ. ಆಡಳಿತ ಮಂಡಳಿ ಸದಸ್ಯರ ಒಪ್ಪಿಗೆ ಇದೆ. ನಾನು ವಿಸಿ ಆಗುವುದಕ್ಕೂ ಮುಂಚೆ 579 ಕೋಟಿ ರೂ. ಠೇವಣಿ ಇತ್ತು. ಈಗ 570 ಕೋಟಿ ರೂ. ಸಾಲ ಇದೆ. 18 ಕೋಟಿ ರೂ. ಜಿಎಸ್‌ಟಿ ಕಟ್ಟಿದ್ದೇನೆ. ಬಡ್ಡಿ ಹಣದಲ್ಲಿ ವಿಶ್ವವಿದ್ಯಾಲಯ ನಡೆಸಿದ್ದೇನೆ. ದುಂದು ವೆಚ್ಚ ಆರೋಪ 100ಕ್ಕೆ 100 ಸುಳ್ಳು. ದಾಖಲೆ ಸಮೇತ ಸಾಬೀತು ಪಡಿಸಿದರೆ ನಾನು ಹುದ್ದೆಯಲ್ಲಿ ಮುಂದುವರಿಯಲ್ಲ ಎಂದು ತಿಳಿಸಿದ್ದಾರೆ.
ಪರಸ್ಪರ ಕೆಸರೆರಚಾಟ
ಅಶಿಸ್ತು ಹಿನ್ನೆಲೆಯಲ್ಲಿ ಪ್ರದೀಪ್ ಗಿರಿಯನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಕುಲಪತಿ ಪ್ರೊ.ವಿದ್ಯಾಶಂಕರ್ ಸ್ಪಷ್ಟನೆ ನೀಡಿದ್ದರೆ, ಮತ್ತೊಂದೆಡೆ ಅವಾಚ್ಯ ಶಬ್ದಗಳಿಂದ ಕುಲಪತಿ ನಿಂದಿಸಿದ್ದು, ಅವರ ಆಪ್ತ ಸಹಾಯಕ ದೇವರಾಜ್ ಚಾಕು ತೆಗೆದುಕೊಂಡು ಹಲ್ಲೆ ಮಾಡಲು ಬಂದಿದ್ದರು ಎಂದು ಸಹಾಯಕ ಕುಲಸಚಿವ ಪ್ರದೀಪ್‌ಗಿರಿ ಆರೋಪಿಸಿದ್ದಾರೆ.
ಅಶಿಸ್ತು ಪ್ರಶ್ನಿಸಿದ್ದಕ್ಕೆ ಸಹಾಯಕ ಕುಲಸಚಿವ ಪ್ರದೀಪ್‌ಗಿರಿ ನಮ್ಮ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾನೆ. ಏಕೆ ತಡವಾಗಿ ಕಚೇರಿಗೆ ಬಂದೆ ಎಂದು ಪ್ರಶ್ನಿಸಿದ್ದಕ್ಕೆ ನಮ್ಮನ್ನೇ ಬೈದಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸುವುದು ತಪ್ಪು ಎಂದಿದ್ದಕ್ಕೆ ನಮ್ಮ ಮೇಲೆ ಎಗರಿಬಿದ್ದ. ನಾವು ಅವನ ಮೇಲೆ ಹಲ್ಲೆ ಮಾಡಿಲ್ಲ. ಆತನ ಅಶಿಸ್ತು ಪ್ರಶ್ನೆ ಮಾಡಿದ್ದೇ ತಪ್ಪಾಯ್ತಾ? ಪ್ರದೀಪ್ ಗಿರಿ ಎಗರಿ ಬೀಳುವಾಗ ನಾವು ತಡೆದೆವು. ಆ ಸಂದರ್ಭದಲ್ಲಿ ಮುಖಕ್ಕೆ ಉಗುರು ತರಚಿರಬಹುದು. ಆತನನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಕುಲಪತಿ ಪ್ರೊ.ವಿದ್ಯಾಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ | Mysore Dasara | ಗಜಪಡೆ ಆಗಮನಕ್ಕೆ ಸಕಲ ಸಿದ್ಧತೆ; ಬರಲಿವೆ 14 ಆನೆಗಳು!
ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿರುವ ಸಹಾಯಕ ಕುಲಸಚಿವ ಪ್ರದೀಪ್ ಗಿರಿ, ನಾಗರ ಪಂಚಮಿ ನಿಮಿತ್ತ ಹತ್ತು ನಿಮಿಷ ತಡವಾಗಿ ಕಚೇರಿಗೆ ಹೋಗಿದ್ದು ನಿಜ. ಅದಕ್ಕೆ ಕುಲಪತಿ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅವರ ಆಪ್ತ ಸಹಾಯಕ ದೇವರಾಜ್ ಚಾಕು ತೆಗೆದುಕೊಂಡು ಚುಚ್ಚಲು ಬಂದ. ಕುಲಪತಿ ವಿಶ್ವವಿದ್ಯಾಲಯದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದಾರೆ. ಅದನ್ನು ನೌಕರರ ಸಂಘದ ಕಾರ್ಯದರ್ಶಿಯೂ ಆದ ನಾನು ಪ್ರಶ್ನೆ ಮಾಡಿದ್ದೆ. ಅದೇ ಕಾರಣಕ್ಕೆ ನನ್ನ ಮೇಲೆ ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಹಲ್ಲೆ ಮಾಡಲಾಗಿದೆ ಎಂದು ಸಹಾಯಕ ಕುಲಸಚಿವ ಪ್ರದೀಪ್‌ಗಿರಿ ನೀಡಿದ ದೂರಿನ ಮೇರೆಗೆ ಕುಲಪತಿ ಪ್ರೊ.ವಿದ್ಯಾಶಂಕರ್ ವಿರುದ್ಧ ನಗರದ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ ಕುಲಪತಿ ಪ್ರೊ.ವಿದ್ಯಾಶಂಕರ್ ಅವರೂ ಪ್ರತಿದೂರು ದಾಖಲಿಸಿದ್ದಾರೆ.
ಇದನ್ನೂ ಓದಿ | ಕೆಎಸ್‌ಒಯು ಸಹಾಯಕ ಕುಲಸಚಿವ ಪ್ರದೀಪ್ ಗಿರಿ ಅಮಾನತು