Site icon Vistara News

Free Bus Service : ಟಿಕೆಟ್‌ ಬುಕಿಂಗ್‌ಗೆ ಮಹಿಳೆಯರ ಮೇಲಾಟ; KSRTC ಸರ್ವರೇ ಡೌನ್!‌

Shakti Scheme

#image_title

ಬೆಂಗಳೂರು: ರಾಜ್ಯದಲ್ಲಿ ಉಚಿತ ಬಸ್‌ ಪ್ರಯಾಣದ (Free Bus Service) ಶಕ್ತಿ ಯೋಜನೆ (Shakti scheme) ಜಾರಿಯಾಗಿದ್ದರಿಂದ ಮಹಿಳೆಯರೆಲ್ಲ ಓಡಾಟ, ಪ್ರವಾಸದ ಗುಂಗಿನಲ್ಲಿದ್ದಾರೆ. ಇದು ಕೆಎಸ್‌ಆರ್‌ಟಿಯ ಬಸ್‌ ಬುಕಿಂಗ್‌ (KSRTC Bus Booking) ಸೇವೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಮಹಿಳೆಯರು ದೂರದೂರಿನ ಪ್ರಯಾಣಕ್ಕಾಗಿ ನಡೆಸುತ್ತಿರುವ ಟಿಕೆಟ್‌ ಬುಕಿಂಗ್‌ ಮೇಲಾಟ ಎಷ್ಟು ಜೋರಾಗಿದೆ ಎಂದರೆ ಇದರ ಒತ್ತಡವನ್ನು ತಾಳಲಾಗದೆ ಕೆಎಸ್‌ಆರ್‌ಟಿಸಿಯ ಟಿಕೆಟ್‌ ಬುಕಿಂಗ್‌ಗೆ ಸಂಬಂಧಿಸಿದ ಸರ್ವರ್‌ ಡೌನ್‌ (Server down) ಆಗಿದೆ. ಇದರಿಂದ ದೂರದೂರಿಗೆ ದುಡ್ಡು ಕೊಟ್ಟು ಟಿಕೆಟ್‌ ಬುಕಿಂಗ್‌ ಮಾಡುವವರಿಗೂ ತೊಂದರೆ ಉಂಟಾಗಿದೆ!

KSRTC bus booking server dowm

ರಾಜ್ಯದಲ್ಲಿ ಕಳೆದ ಜೂನ್‌ 11ರಂದು ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಆ ದಿನವೇ ಸುಮಾರು 5 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆದಿದ್ದರು. ಮುಂದೆ ಮರುದಿನವೇ ಮಹಿಳಾ ಪ್ರಯಾಣಿಕರ ಸಂಖ್ಯೆ ಎಂಟು ಪಟ್ಟು ಹೆಚ್ಚಾಗಿತ್ತು. ಮುಂದಿನ ಎರಡು ದಿನಗಳಲ್ಲಿ ತಲಾ 50 ಲಕ್ಷ ಮಹಿಳೆಯರು ಬಸ್‌ಗಳಲ್ಲಿ ಓಡಾಡಿದ್ದರು. ಅದರಲ್ಲೂ ದೂರ ಪ್ರಯಾಣದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಮಹಿಳೆಯರ ಪ್ರಯಾಣ ಹೆಚ್ಚಾಗಿದ್ದು ಕಂಡುಬಂದಿತ್ತು.

ಟಿಕೆಟ್‌ ಬುಕಿಂಗ್‌ ಒತ್ತಡಕ್ಕೆ ಸರ್ವರೇ ಡಮಾರ್!‌

ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾತ್ರವಲ್ಲ, ಬೇಕಾದ ಸೀಟನ್ನು ಮುಂಗಡವಾಗಿ ಕಾದಿರಿಸುವ ಅವಕಾಶವೂ ಇದೆ. ಹಲವಾರು ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯಲು ಆರಂಭಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು ದೂರ ಪ್ರಯಾಣಕ್ಕಾಗಿ ಟಿಕೆಟ್‌ ಬುಕ್‌ ಮಾಡುತ್ತಿದ್ದು, ಅದಕ್ಕಾಗಿ ಕೆಎಸ್‌ಆರ್‌ಟಿಸಿಯ ವೆಬ್‌ ಸೈಟ್‌ ಮತ್ತು ಬುಕಿಂಗ್‌ ಆ್ಯಪ್‌ನಲ್ಲಿ ಅವಕಾಶ ನೀಡಲಾಗಿದೆ.

ಮಹಿಳೆಯರು ಟಿಕೆಟ್ ಬುಕ್ ಮಾಡಲು ಕೇವಲ 20 ರೂಪಾಯಿ ನಿಗದಿ ಮಾಡಲಾಗಿದೆ. ಇದೀಗ ಬುಕಿಂಗ್‌ ಪ್ರಮಾಣ ಜಾಸ್ತಿಯಾಗಿದ್ದರಿಂದ ಕೆಎಸ್‌ಆರ್‌ಟಿಸಿಯ ವೆಬ್‌ಸೈಟ್‌ನ ಸರ್ವರ್‌ ಡೌನ್‌ ಆಗಿದೆ.

ಟ್ವಿಟರ್‌ನಲ್ಲಿ ಜನಾಕ್ರೋಶ

ಈ ನಡುವೆ ವೆಬ್‌ಸೈಟ್‌ನಲ್ಲಿ ಬುಕಿಂಗ್‌ ಆಗದೆ ಇರುವುದರಿಂದ ಜನರು ಸಿಟ್ಟಿಗೆದ್ದಿದ್ದಾರೆ. ಒಂದು ಕಡೆ ಟಿಕೆಟ್ ಬುಕ್ ಮಾಡಿದರೆ 20 ರೂ. ಹಣ ಕಟ್‌ ಆಗುತ್ತಿದೆ. ಆದರೆ, ಟಿಕೆಟ್‌ ಬುಕ್‌ ಆಗುತ್ತಿಲ್ಲ ಎನ್ನುವ ಸಮಸ್ಯೆ ಇದ್ದರೆ, ಕೆಲವೊಮ್ಮೆ ಸರ್ವರೇ ಕೆಲಸ ಮಾಡುವುದಿಲ್ಲ. ಈ ನಡುವೆ ಕೆಎಸ್ ಆರ್ ಟಿಸಿ ಸಹಾಯವಾಣಿಗೆ ಕರೆ ಮಾಡಿದರೂ ನೋ ರೆಸ್ಪಾನ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವಾಗ ನೋಡಿದ್ರೂ ಸಮಸ್ಯೆ

ಕೆಎಸ್‌ಆರ್‌ಟಿಸಿ ಬುಕಿಂಗ್‌ ಸರ್ವರ್‌ ಯಾವಾಗ ನೋಡಿದರೂ ಸಮಸ್ಯೆಯನ್ನೇ ತೋರಿಸುತ್ತಿದೆ. ಹೀಗಾದ್ರೆ ಟಿಕೆಟ್‌ ಬುಕ್‌ ಮಾಡುವುದು ಹೇಗೆ ಎಂದು ಕೆಲವರು ಕೇಳಿದ್ದಾರೆ. ವೆಬ್‌ಸೈಟ್‌ನಲ್ಲಿ ಸಾಮಾನ್ಯ ಬಸ್‌ಗಳಲ್ಲದೆ ದೂರದೂರಿನ ಪ್ರಯಾಣಕ್ಕೆ ಬೇಕಾಗುವ ಐಷಾರಾಮಿ ಬಸ್‌ಗಳ ಪ್ರಯಾಣದ ಬುಕಿಂಗ್‌ ಕೂಡಾ ನಡೆಯುತ್ತದೆ. ಈಗ ಅದೇ ತೋರಿಸದೆ ಹೋದರೆ ದೊಡ್ಡ ಸಮಸ್ಯೆ ಆಗುತ್ತದೆ. ಅದರಲ್ಲೂ ಶುಕ್ರವಾರ, ಶನಿವಾರ ಟಿಕೆಟ್‌ಗಳಿಗೆ ಭಾರಿ ಡಿಮ್ಯಾಂಡ್‌ ಇರುವುದರಿಂದ ಮೊದಲೇ ಟಿಕೆಟ್‌ ಬುಕ್‌ ಮಾಡುವ ಅನಿವಾರ್ಯತೆ ಇರುತ್ತದೆ. ಹೀಗಾಗಿ ಟಿಕೆಟ್‌ ಬುಕ್‌ ಮಾಡಲು ಮುಂದಾಗುವವರು ದೊಡ್ಡ ಸಮಸ್ಯೆಯಲ್ಲಿ ಸಿಲುಕುತ್ತಿದ್ದಾರೆ.

ಈ ನಡುವೆ ಕೆಎಸ್‌ಆರ್‌ಟಿಸಿ ಸಮಸ್ಯೆಯನ್ನು ಗಮನಿಸಿದ್ದು, ಕೆಲವು ದಿನಗಳಲ್ಲಿ ಸರಿ ಹೋಗಲಿದೆ ಎಂದು ಸಮಾಧಾನ ಹೇಳುತ್ತಿದೆ. ಟಿಕೆಟ್‌ ಬುಕಿಂಗ್‌ಗಾಗಿ ಕಟ್‌ ಆಗುವ 20 ರೂ. ಮೊತ್ತ, ಒಂದು ವೇಳೆ ಟಿಕೆಟ್‌ ಬುಕ್‌ ಆಗದೆ ಹೋದರೆ ಐದರಿಂದ ಏಳು ದಿನಗಳ ಒಳಗೆ ಮರಳಿ ಖಾತೆಗೆ ಬರಲಿದೆ ಎಂದು ಹೇಳಿದೆ. ಜತೆಗೆ ಇಂಥ ಸಂದರ್ಭದಲ್ಲಿ ಸಂಪರ್ಕಿಸಬಹುದಾದ ಇತರ ನಂಬರ್‌ಗಳನ್ನು ಕೂಡಾ ನೀಡಿದೆ.

ಒಟ್ಟಾರೆಯಾಗಿ ಶಕ್ತಿ ಯೋಜನೆಯಿಂದ ಜನರಲ್ಲಿ ಸಂಚಲನ ಸೃಷ್ಟಿಯಾಗಿದ್ದು ನಿಜ. ಮಹಿಳೆಯರು ಸಾಕಷ್ಟು ಓಡಾಡುವ ಖುಷಿಯನ್ನು ಅನುಭವಿಸುತ್ತಿರುವುದು ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯಿಂದಲೂ ಸ್ಪಷ್ಟವಾಗಿದೆ.

ಇದನ್ನೂ ಓದಿ : Free Bus Service : ಬಸ್ಸಿನಲ್ಲಿ ಮದ್ಯ ಒಯ್ಯಲು ಅವಕಾಶ ನೀಡದ್ದಕ್ಕೆ ಸಿಟ್ಟಿಗೆದ್ದ ಮಹಿಳೆಯರು!

Exit mobile version