Site icon Vistara News

Girls rescued : ಒಮ್ಮೆಗೇ ಬಸ್ಸು ನಿಲ್ಲಿಸಿ ಕೆರೆಗೆ ಧುಮುಕಿದ ಡ್ರೈವರ್‌; ನೀರಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳ ರಕ್ಷಣೆ

ಶಿರಾದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಹೆಣ್ಮಕ್ಕಳನ್ನು ಚಾಲಕರೊಬ್ಬರು ಸಾಹಸಿಕ ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದಾರೆ.

#image_title

ತುಮಕೂರು: ಚಲಿಸುತ್ತಿದ್ದ ಬಸ್ಸನ್ನು ದಿಢೀರನೆ ನಿಲ್ಲಸಿದ ಚಾಲಕರೊಬ್ಬರು ಒಂದರೆಕ್ಷಣವೂ ಹಿಂದೆ ಮುಂದೆ ಯೋಚಿಸದೆ ಕೆರೆಗೆ ಧುಮುಕಿ ಅಲ್ಲಿ ನೀರಿನಲ್ಲಿ ಮುಳುಗೇಳುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಿದ ಘಟನೆಯೊಂದು (Girls rescued) ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಮಂಜುನಾಥ ಎಂ. ಅವರೇ ಈ ಸಾಹಸ ಮೆರೆದವರು. ಈ ಹೆಣ್ಣುಮಕ್ಕಳನ್ನು ಈಗ ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.

ಆಗಿದ್ದೇನು?
ಮಂಜುನಾಥ ಎಂ. ಅವರು ಚಾಲಕರಾಗಿರುವ ಬಸ್‌ ಶಿರಾದಿಂದ ಹೊರಟು ನಾಗಪ್ಪನ ಹಳ್ಳಿ ಗೇಟ್‌ ಮಾರ್ಗದಲ್ಲಿ ಸಾಗುತ್ತಿತ್ತು. ಮಧ್ಯಾಹ್ನ ಸುಮಾರು ೧.೫೫ರ ಸುಮಾರಿಗೆ ಬಸ್ಸು ಹಂದಿಗುಂಟೆ ಅಗ್ರಹಾರ ಕೆರೆಯ ಪಕ್ಕ ಸಾಗುತ್ತಿತ್ತು. ಆಗ ಒಮ್ಮಿಂದೊಮ್ಮೆಗೇ ರಸ್ತೆ ಬದಿಗೆ ಓಡಿ ಬಂದ ಮಹಿಳೆಯೊಬ್ಬರು ಜೋರಾಗಿ ಬೊಬ್ಬೆ ಹೊಡೆದು ಬಸ್‌ ನಿಲ್ಲಿಸಿದರು. ಏನಾಯಿತು ಎಂದು ಕೇಳಿದಾಗ ತನ್ನಿಬ್ಬರು ಮಕ್ಕಳು ನೀರಲ್ಲಿ ಮುಳುಗುತ್ತಿದ್ದಾರೆ, ರಕ್ಷಿಸಿ ಎಂದು ಕೇಳಿಕೊಂಡರು. ಇದನ್ನು ಕೇಳಿದ ಚಾಲಕ ಮಂಜುನಾಥ್‌ ಅವರು ಸ್ವಲ್ಪವೂ ಯೋಚಿಸದೆ ಹಾಕಿದ ಬಟ್ಟೆಯಲ್ಲೇ ಕೆರೆಯತ್ತ ಧಾವಿಸಿ ನೀರಿಗೆ ಧುಮುಕಿಯೇ ಬಿಟ್ಟರು. ಒಬ್ಬರಾದ ಮೇಲೊಬ್ಬರಂತೆ ಇಬ್ಬರೂ ಬಾಲಕಿಯರನ್ನು ನೀರಿನಿಂದ ಮೇಲೆತ್ತಿದರು. ಅವರನ್ನು ಕೆರೆ ದಡಕ್ಕೆ ತಂದು ಹೊಟ್ಟೆಯಲ್ಲಿದ್ದ ನೀರು ಹೊರಬರುವಂತೆ ಮಾಡಿದರು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಬಸ್ಸಿನಲ್ಲಿದ್ದವರು, ಘಟನೆ ತಿಳಿದು ಓಡಿಬಂದರೆಲ್ಲ ಮಂಜುನಾಥ್‌ ಅವರ ಸಾಹಸ ಮತ್ತು ಸಮಯಪ್ರಜ್ಞೆಯನ್ನು ಮೆಚ್ಚಿ ಕೊಂಡಾಡಿದರು. ರಕ್ಷಿಸಲಾದ ಬಾಲಕಿಯರನ್ನು ಸುಷ್ಮಾ (೧೮) ಮತ್ತು ಮಂಜುಳಾ (೯) ಎಂದು ಗುರುತಿಸಲಾಗಿದೆ.

ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಮಂಜುನಾಥ್‌ ಅವರು, ʻʻಮಹಿಳೆ ಬಂದು ವಿಷಯ ಹೇಳಿದಾಗ ನಾನು ಕೂಡಲೇ ಕೆರೆಯತ್ತ ಧಾವಿಸಿದೆ. ನನಗೆ ಮೊದಲೇ ಈಜು ಗೊತ್ತಿದ್ದರಿಂದ ಧೈರ್ಯವಿತ್ತು. ಎರಡೂ ಮಕ್ಕಳನ್ನು ರಕ್ಷಿಸಿದ್ದರಿಂದ ನನಗೆ ನಿರಾಳವಾಯಿತು.ʼʼ ಎಂದು ಹೇಳಿದರು.

ವ್ಯವಸ್ಥಾಪಕ ನಿರ್ದೇಶಕರಿಂದ ಶ್ಲಾಘನೆ
ಈ ನಡುವೆ, ಮಂಜುನಾಥ್‌ ಅವರ ಸಾಹಸವನ್ನು ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿ. ಅನ್ಬುಕುಮಾರ್‌ ಅವರು ಶ್ಲಾಘಿಸಿದ್ದಾರೆ. ಮಂಜುನಾಥ್‌ ಅವರ ಮಾನವೀಯ ಸಮಯೋಚಿತ ಕಾರ್ಯದಿಂದ ಎರಡು ಅತ್ಯಮೂಲ್ಯ ಜೀವ ಉಳಿದಿದ್ದು, ಇವರ ಮಾದರಿ ಕಾರ್ಯ ಅನನ್ಯವೆಂದು ಬಣ್ಣಿಸಿದ್ದಾರೆ. ʻʻನಮ್ಮ‌ ಚಾಲನಾ ಸಿಬ್ಬಂದಿಗಳ ಈ ಕಾರ್ಯತತ್ಪರತೆ ಸಂಸ್ಥೆಯ ಹೆಮ್ಮೆ ಮತ್ತು ಗೌರವವಾಗಿದೆ, ಇಂತಹ ಸಿಬ್ಬಂದಿಗಳೇ ನಮ್ಮ ಆಸ್ತಿʼ ಎಂದು ವ್ಯವಸ್ಥಾಪಕ ನಿರ್ದೇಶಕರು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ | Bear Stuck In Tree: ಆಹಾರಕ್ಕಾಗಿ ಬಂದು ಮರದಲ್ಲಿ ಸಿಲುಕಿದ ಕರಡಿ; ಅರಣ್ಯ ಸಿಬ್ಬಂದಿಯಿಂದ ರಕ್ಷಣೆ

Exit mobile version