Site icon Vistara News

Bus accident | ಮೂವರು ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಪ್ರಾಣ ಕಸಿದ ವಿಧಿ: ಕಲಿಕೆ ಜತೆ ಗಳಿಕೆಗೆ ಹೋದವರು ಶವವಾದರು

Ballary accident- shankar-honnur-kanakaraj

ಶಶಿಧರ ಮೇಟಿ, ಬಳ್ಳಾರಿ
ಬಡ ಪ್ರತಿಭಾವಂತ ಮಕ್ಕಳ ಬಾಳಿನಲ್ಲಿ ವಿಧಿ ಅಕ್ಷರಶಃ ಆಟವಾಡಿದೆ. ಬಡತನಕ್ಕೆ ವಿರಾಮ ಹಾಕಲು ಓದನ್ನು ಉಸಿರಾಗಿಸಿಕೊಂಡಿದ್ದ ವಿದ್ಯಾರ್ಥಿಗಳ ಉಸಿರನ್ನು ಜವರಾಯ ಶಾಶ್ವತವಾಗಿ ನಿಲ್ಲಿಸಿದ್ದಾನೆ. ಮೃತ ವಿದ್ಯಾರ್ಥಿಗಳೆಲ್ಲರೂ ಪ್ರತಿಭಾವಂತರು. ಬಡತನವೇ ಅವರನ್ನು ಹಾಸ್ಟೆಲ್‌ನಲ್ಲಿ ಆಶ್ರಯ ಪಡೆಯುವಂತೆ ಮಾಡಿತ್ತು. ಅದೇ ಹೊತ್ತಿಗೆ ಜೀವನೋಪಾಯದ ಹಣಕ್ಕೆಂದು ಅವರು ಕ್ಯಾಟರಿಂಗ್ ಮೊರೆ ಹೋಗಿದ್ದರು. ಆದರೆ, ಬಸ್ಸಿನ ರೂಪದಲ್ಲಿ (Bus accident) ಬಂದ ಜವರಾಯ ಅವರ ಪ್ರಾಣ ಪಕ್ಷಿ ಹಾರಿಸಿಕೊಂಡು ಹೋಗಿದ್ದಾನೆ. ವಿಮ್ಸ್‌ನ ಶವಾಗಾರದಲ್ಲಿ ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ತಡರಾತ್ರಿ ಬಳ್ಳಾರಿ ತಾಲೂಕಿನ ಹಲಕುಂದಿ ಸಮೀಪ ಸಾರಿಗೆ ಸಂಸ್ಥೆಯ ಬೆಂಗಳೂರಿನಿಂದ ಜೇವರ್ಗಿಗೆ ಹೊರಟಿದ್ದ ಬಸ್ ಹರಿದು ಮೂವರು ವಿದ್ಯಾರ್ಥಿಗಳು ಮೃತ ಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಚಿತ್ರದುರ್ಗ ಜಿಲ್ಲೆಯ ಮಾಚೇನಹಳ್ಳಿಯ ಶಂಕರ್(೧೮) ಬಳ್ಳಾರಿಯ ಮುನ್ಸಿಪಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿ, ಸಂಡೂರು ತಾಲೂಕಿನ ಜಿ.ನಾಗೇನ ಹಳ್ಳಿಯ ಹೊನ್ನೂರ್(೨೨) ಬಳ್ಳಾರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ವಿದ್ಯಾರ್ಥಿ. ಇವರಿಬ್ಬರೂ ಬಳ್ಳಾರಿ ಎಸ್ಸಿ ಮತ್ತು ಎಸ್ಟಿ ಹಾಸ್ಟೆಲ್‌ನ ವಿದ್ಯಾರ್ಥಿಗಳು. ಇನ್ನೊಬ್ಬ ಎಮ್ಮಿಗನೂರಿನ ವಿದ್ಯಾರ್ಥಿ ಕನಕರಾಜು(೧೯) ಪಿಯುಸಿ ವಿದ್ಯಾರ್ಥಿ.

ಮೂವರು ವಿದ್ಯಾರ್ಥಿಗಳ ಪ್ರಾಣ ಕಸಿದ ಅಪಘಾತ

ಇವರೆಲ್ಲರೂ ಕಲಿಕೆಯ ಜತೆಗೆ ಕ್ಯಾಟರಿಂಗ್‌ ಮತ್ತಿತರ ಕೆಲಸ ಮಾಡಿ ತಮ್ಮ ಜೀವನೋಪಾಯ ಕಂಡುಕೊಂಡಿದ್ದರು. ಜತೆಗೆ ಕುಟುಂಬಕ್ಕೂ ಆಧಾರವಾಗಿದ್ದರು.

ತಾಯಿ ಕ್ಯಾನ್ಸರ್‌ಗೆ ಬಲಿ, ತಂದೆ ಮಾನಸಿಕ ಅಸ್ವಸ್ಥ
ಹೊನ್ನೂರ ಪಿಯುಸಿಯಲ್ಲಿ ಶೇ.೯೬ರಷ್ಟು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ. ಕಳೆದ ೨೦ ದಿನದ ಹಿಂದೆ ತಾಯಿ ಹನುಮಕ್ಕ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರೆ, ತಂದೆ ಮಾನಸಿಕ ಅಸ್ವಸ್ಥರು. ಈತನ ಸಹೋದರ ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತ ಪಟ್ಟಿದ್ದ. ಅತ್ಯಂತ ಬಡಕುಟುಂಬದಿಂದ ಬಂದ ಹೊನ್ನೂರ ತಾಯಿ ನಿಧನದಿಂದ ಮಾನಸಿಕವಾಗಿ ನೊಂದಿದ್ದ. ಈತನ ಓದಿನ ಮೇಲೆ ಇಡೀ ಕುಟುಂಬವೇ ಕನಸು ಕಟ್ಟಿಕೊಂಡಿತ್ತು. ಈಗ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.

ತಂದೆಯ ಸಾವಿನ ಹಾದಿ ಹಿಡಿಸಿದ ವಿಧಿ
ಇನ್ನು ಶಂಕರ್ ಕೂಡ ಪ್ರತಿಭಾವಂತ ಬಡ ವಿದ್ಯಾರ್ಥಿ. ಕಳೆದ ೧೫ ವರ್ಷಗಳ ಹಿಂದೆ ಈತನ ತಂದೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ತಾಯಿಗೆ ಮಗನನ್ನು ಓದಿಸಬೇಕೆಂಬ ಹಂಬಲದಲ್ಲಿಯೇ ಹಾಸ್ಟೆಲ್‌ನಲ್ಲಿ ಬಿಟ್ಟಿದ್ದರು. ಇಬ್ಬರು ವಿದ್ಯಾರ್ಥಿಗಳು ಕ್ಯಾಟರಿಂಗ್‌ನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡಿ, ತಮ್ಮ ವಿದ್ಯಾಭ್ಯಾಸ ವೆಚ್ಚವನ್ನು ತಾವೇ ಭರಿಸುತ್ತಿದ್ದರು. ಎರಡು ಬಡ ಕುಟುಂಬದ ಆಸೆಯನ್ನು ವಿಧಿ ನುಚ್ಚುನೂರು ಮಾಡಿದೆ.

ಹಾಸ್ಟೆಲ್‌ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು
ವಿದ್ಯಾರ್ಥಿಗಳು ಕಳೆದ ಮೂರು ದಿನದಿಂದ ಹಾಸ್ಟೆಲ್‌ನಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆಂದು ಆರೋಪಿಸಿ ಶವಾಗಾರದ ಬಳಿ ಬಂದ ಎಸ್ಟಿ ಇಲಾಖೆಯ ಅಧಿಕಾರಿಗಳನ್ನು ಅಲ್ಲಿ ಜಮಾಯಿಸಿದ್ದ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ನೂಕಾಡಿದರು. ಪೋಷಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆದರೆ, ಅಧಿಕಾರಿಗಳ ಮಾಹಿತಿ ಪ್ರಕಾರ ಇಬ್ಬರು ವಿದ್ಯಾರ್ಥಿಗಳು ಭಾನುವಾರ ಬೆಳಗ್ಗೆ ಹೊರಗಡೆ ಹೋಗಿದ್ದಾರೆ.

ʻʻಶಂಕರ ಉತ್ತಮವಾಗಿ‌ ಓದುತ್ತಿದ್ದ, ನಿತ್ಯವೂ ಏಡಾಡುವುದು ಕಷ್ಟವೆಂದು ಹಾಸ್ಟೆಲ್‌ಗೆ ಸೇರಿಸಲಾಗಿತ್ತು. ಅವರ ತಂದೆ 15 ವರ್ಷದ ಹಿಂದೆ ಅಪಘಾತದಲ್ಲಿ ಮೃತ ಪಟ್ಟಿದ್ದರು. ಇದೀಗ ಮಗನೂ ತೀರಿಕೊಂಡಿದ್ದಾನೆ. ಅವರ ತಾಯಿ ಇವನ ಓದಿನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಳುʼʼ ಎಂದು ಕಣ್ಣೀರಿಡುತ್ತಾ ಹೇಳಿದರು ಮೃತ ಶಂಕರನ ದೊಡ್ಡಪ್ಪ ಬಸವರಾಜ್‌.

ಇದನ್ನೂ ಓದಿ | Bus accident | ಸಾರಿಗೆ ಸಂಸ್ಥೆ ಬಸ್ ಡಿಕ್ಕಿ, ಮೂವರು ವಿದ್ಯಾರ್ಥಿಗಳ ಸಾವು

Exit mobile version