Site icon Vistara News

KSRTC Employees Strike: ಕೆಪಿಟಿಸಿಎಲ್‌ ಬಳಿಕ ಸಾರಿಗೆ ನೌಕರರ ವೇತನವೂ ಹೆಚ್ಚಳ ಸಾಧ್ಯತೆ; ಬಸ್‌ ಸೇವೆ ಅಬಾಧಿತ?

KSRTC Employees Strike After KPTCL the salaries of transport employees are likely to be increased Will the strike be called off after the meeting

ಬೆಂಗಳೂರು: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಮಾರ್ಚ್‌ 16ರಿಂದ ಪ್ರತಿಭಟನೆಗೆ ಮುಂದಾಗಿದ್ದ ಕೆಪಿಟಿಸಿಎಲ್‌ ಸಿಬ್ಬಂದಿಯ ಶೇ. 20ರಷ್ಟು ವೇತನ ಹೆಚ್ಚಳ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿರುವ ಬೆನ್ನಲ್ಲೇ ಈಗ ಸಾರಿಗೆ ನೌಕರರ (KSRTC Employees Strike) ಬೇಡಿಕೆಯನ್ನೂ ಈಡೇರಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಮಾರ್ಚ್‌ 15ರ ಸಂಜೆ ಸಾರಿಗೆ ನೌಕರರ ಎರಡೂ ಬಣಗಳ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಒಂದು ವೇಳೆ ಸರ್ಕಾರ ಬೇಡಿಕೆಗಳಿಗೆ ಒಪ್ಪಿ ಶುಭ ಸುದ್ದಿ ನೀಡಿದರೆ ಮಾರ್ಚ್‌ 21ರಿಂದ ಸಾರಿಗೆ ಬಂದ್‌ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಯುಗಾದಿ ಸೇರಿದಂತೆ ಬೆಂಗಳೂರಿನಿಂದ ಊರಿನ ಕಡೆಗೆ ಹಾಗೂ ಬೇರೆ ಬೇರೆ ಕಡೆ ಸಂಚಾರ ಮಾಡುವವರು ನಿರಾಳರಾಗಬಹುದಾಗಿದೆ.

ಚುನಾವಣೆ ಸಮೀಪ ಬರುತ್ತಿದ್ದಂತೆ ಸರ್ಕಾರದ ವಿವಿಧ ಭಾಗವಾಗಿರುವ ಹಲವು ಇಲಾಖೆ ನೌಕರರು ಪ್ರತಿಭಟನೆ ಹಾದಿಯನ್ನು ಹಿಡಿಯುತ್ತಿದ್ದಾರೆ. ಸರ್ಕಾರಿ ನೌಕರರು ಈಚೆಗೆ ಪ್ರತಿಭಟನೆ ನಡೆಸಿದ್ದ ಪರಿಣಾಮ ಅವರಿಗೆ ಸರ್ಕಾರವು ಶೇ. 17ರಷ್ಟು ವೇತನ ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಿತ್ತು. ಈಗ ಕೆಪಿಟಿಸಿಎಲ್‌ನವರು ವೇತನ ಪರಿಷ್ಕರಣೆಗೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿತ್ತು. ಗುರುವಾರದಿಂದಲೇ ಪ್ರತಿಭಟನೆ ಆರಂಭಿಸುವ ಎಚ್ಚರಿಕೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರ ಅವರಿಗೆ ಶೇ. 20ರಷ್ಟು ವೇತನ ಹೆಚ್ಚಳಗೊಳಿಸಿ ಬುಧವಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಸಾರಿಗೆ ನೌಕರರ ಸಭೆಯನ್ನೂ ಕರೆದಿದೆ. ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರ ಮಹಾಮಂಡಳಿ, ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವೇತನವನ್ನು ಪರಿಷ್ಕರಣೆ ಮಾಡುವ ಕುರಿತು ಚರ್ಚಿಸಲು ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಹಾಗೂ ಇತರೆ ಮೂರು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಬುಧವಾರ ಸಂಜೆ 06.30ಕ್ಕೆ ಕರಾರಸಾ ನಿಗಮದ ಕೇಂದ್ರ ಕಚೇರಿಯಯಲ್ಲಿ ಸಭೆಯನ್ನು ನಿಗದಿಪಡಿಸಲಾಗಿದೆ. ಇದಕ್ಕೆ ಪ್ರತಿ ಕಾರ್ಮಿಕ ಸಂಘಟನೆಗಳ ವತಿಯಿಂದ ಇಬ್ಬರು ಮುಖಂಡರು ಮಾತ್ರ ಸಭೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಎರಡು ಪ್ರತ್ಯೇಕ ಮುಷ್ಕರ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ಮಾರ್ಚ್ 21 ಹಾಗೂ ಮಾರ್ಚ್‌ 24ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಎರಡು ಬಣಗಳಿಂದ ಪ್ರತಿಭಟನೆ ನಡೆಯುತ್ತಿರುವುದು ನೌಕರರ ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೆ, ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ವ್ಯವಸ್ಥೆಯಲ್ಲಿ ಅಸ್ತವ್ಯಸ್ತ ಆಗುವ ಲಕ್ಷಣಗಳು ಕಂಡುಬಂದಿತ್ತು. ಇದರ ಬೆನ್ನಲ್ಲೇ ಯುಗಾದಿಗೆ ಹಬ್ಬವೂ ಇರುವುದರಿಂದ ಸಾರ್ವಜನಿಕ ಸಾರಿಗೆಗೆ ತೀವ್ರ ಸಮಸ್ಯೆಯಾಗುತ್ತಿತ್ತು. ಇದೇ ಕಾರಣಕ್ಕಾಗಿ ಈಗ ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ.

ಎಚ್ಚರಿಕೆ ನೀಡಿರುವ ಅನಂತ ಸುಬ್ಬರಾವ್

ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಅಧ್ಯಕ್ಷ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಸರ್ಕಾರ ಬೇಡಿಕೆ ಈಡೇರಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಅನಂತ್ ಸುಬ್ಬರಾವ್ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಮುಷ್ಕರ ಆರಂಭವಾದರೆ 23 ಸಾವಿರ ಬಸ್‌ಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಮಾರ್ಚ್‌ 24ರಿಂದ ಇನ್ನೊಂದು ಬಣದ ಪ್ರತಿಭಟನೆ

ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯು ಮಾರ್ಚ್ 24ರಿಂದ ಮುಷ್ಕರಕ್ಕೆ ಕರೆ ನೀಡಿದೆ. ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಅವರು ಮಾರ್ಚ್ 5ರಂದೇ ಸಭೆ ನಡೆಸಿ ಮುಷ್ಕರಕ್ಕೆ ಕರೆ ನೀಡಿದ್ದರು.

ಯುಗಾದಿಗೆ ಪ್ಲ್ಯಾನ್‌ ಮಾಡಿಕೊಳ್ಳಬಹುದೇ?

ಯುಗಾದಿಗೆ ಬೆಂಗಳೂರಿನಿಂದ ಊರಿಗೆ ಹೋಗುವ ಮೊದಲು ಎಚ್ಚರಿಕೆ ವಹಿಸಬೇಕಿದೆ. ಸಾರಿಗೆ ನೌಕರರ ಪ್ರತಿಭಟನೆಯು ತೀವ್ರಗೊಂಡಿದ್ದೇ ಆದಲ್ಲಿ ತೀವ್ರ ಸಮಸ್ಯೆಯಾಗಲಿದೆ. ಮಂಗಳವಾರವೇ (ಮಾ. 21) ಬಸ್ ಸ್ಥಗಿತಗೊಳ್ಳುವುದರಿಂದ ಸಂಚಾರಕ್ಕೆ ತೊಂದರೆಯುಂಟಾಗುವ ಸಾಧ್ಯತೆಗಳಿವೆ. ಆದರೆ, ಈಗ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಒಂದು ವೇಳೆ ಸಂದಾನ ಮಾತುಕತೆ ಯಶಸ್ವಿಯಾದರೆ ನಾಗರಿಕರು ಯಾವುದೇ ಸಮಸ್ಯೆ ಇಲ್ಲದೆ ಪ್ರಯಾಣಿಸಬಹುದಾಗಿದೆ.

ಸಾರಿಗೆ ನೌಕರರ ಬೇಡಿಕೆ ಏನು?
• ಮೂಲ ವೇತನವನ್ನು ಶೇ. 25ರಷ್ಟು ಪರಿಷ್ಕರಣೆ ಮಾಡಬೇಕು
• ಬಾಟಾ/ ಭತ್ಯೆಯನ್ನು ಐದು ಪಟ್ಟು ಹೆಚ್ಚಿಸಬೇಕು
• ಏಪ್ರಿಲ್ 2011 ರಂದು ವಜಾಗೊಂಡ ಸಿಬ್ಬಂದಿಯ ಮರುನೇಮಕ ಮಾಡಬೇಕು
• ಸಿಬ್ಬಂದಿ ಮೇಲಿನ FIR ರದ್ದು ಮಾಡಬೇಕು
• ಮುಷ್ಕರದ ಸಮಯದಲ್ಲಿ ವರ್ಗಾವಣೆಯಾದ ನೌಕರರ ಮರುನೇಮಕ ಮಾಡಿಕೊಳ್ಳಬೇಕು

Exit mobile version