ಬೆಂಗಳೂರು: ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಜತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಅನ್ಬುಕುಮಾರ್ ಅವರು ನಡೆಸಿದ ಸಂಧಾನ ಸಭೆ ಸಫಲವಾಗಿದ್ದು, ಮಾ.21ರಿಂದ ಕರೆದಿದ್ದ ಮುಷ್ಕರವನ್ನು ಸಾರಿಗೆ ನೌಕರರ ಸಂಘ ವಾಪಸ್ ಪಡೆದಿದೆ. ಯುಗಾದಿ ಸಂದರ್ಭದಲ್ಲಿ ನೌಕರರು ಕೊನೆಗೂ ಮುಷ್ಕರ (KSRTC Employees Strike) ವಾಪಸ್ ಪಡೆದಿರುವುದರಿಂದ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟಂತಾಗಿದೆ.
ಸಾರಿಗೆ ನೌಕರರಿಗೆ ಶೇ.15 ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಮಾ.17ರಂದು ಆದೇಶ ಹೊರಡಿಸಿತ್ತು. ಆದರೆ, ಶೇ. 20 ವೇತನ ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಮಾ.21ರಿಂದ ಮುಷ್ಕರ ನಡೆಸುವುದಾಗಿ ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಅಧ್ಯಕ್ಷ ಅನಂತ ಸುಬ್ಬರಾವ್ ಎಚ್ಚರಿಕೆ ನೀಡಿದ್ದರು. ಆದರೆ, ಶನಿವಾರ ಕೆಎಸ್‌ಆರ್‌ಟಿಸಿ ಎಂಡಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸರ್ಕಾರದಿಂದ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಸಾರಿಗೆ ನೌಕರರು ವಾಪಸ್ ಪಡೆದಿದ್ದಾರೆ .
ಸರ್ಕಾರ, ನೌಕರರಿಗೆ 2020ರ ಜನವರಿ 1ರಿಂದ ಹೆಚ್ಚುವರಿ ವೇತನ ನೀಡುವ ಭರವಸೆ ನೀಡಿದೆ. ಹಾಗೆಯೇ ಮುಷ್ಕರದ ವೇಳೆ ಮಾಡಿದ್ದ ನೌಕರರ ವಜಾ ಆದೇಶ ಹಿಂಪಡೆಯುವುದು ಹಾಗೂ ವಾರ್ಷಿಕ ವೇತನ ಬಡ್ತಿ ಹೆಚ್ಚಳಕ್ಕೂ ಸರ್ಕಾರ ಸಮ್ಮತಿಸಿದೆ. ಹೀಗಾಗಿ ಸೋಮವಾರ (ಮಾ.13) ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಅನಂತ್ ಸುಬ್ಬರಾವ್ ಬಣ ಭೇಟಿ ಮಾಡಿ, ಈಗಾಗಲೇ ಮಾಡಿರುವ ಆದೇಶಗಳನ್ನು ಕಾರ್ಯರೂಪಕ್ಕೆ ತರುವಂತೆ ಮನವಿ ಮಾಡಲಿದ್ದಾರೆ.
ಇದನ್ನೂ ಓದಿ | Male Mahadeshwara Statue: 108 ಅಡಿ ಎತ್ತರದ ಮಲೆ ಮಹದೇಶ್ವರಸ್ವಾಮಿ ಭವ್ಯ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ
ಬೇಡಿಕೆ ಈಡೇರಿಸದಿದ್ದರೆ ಮುಷ್ಕರವನ್ನು ಹಿಂಪಡೆಯುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಅಧ್ಯಕ್ಷ ಅನಂತ ಸುಬ್ಬರಾವ್ ಹಾಗೂ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರು. ಅನಂತ ಸುಬ್ಬರಾವ್ ಬಣದಿಂದ ಮಾ.21 ಹಾಗೂ ಆರ್. ಚಂದ್ರಶೇಖರ್ ಬಣದಿಂದ ಮಾ.24ರಿಂದ ಮುಷ್ಕರಕ್ಕೆ ಕರೆ ನೀಡಲಾಗಿತ್ತು.
ಮುಷ್ಕರ ಹಿಂಪಡೆದ ನಿರ್ಧಾರಕ್ಕೆ ಚಂದ್ರಶೇಖರ್ ಬಣ ಖಂಡನೆ
ಮುಷ್ಕರ ವಾಪಸ್ ಬಗ್ಗೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಪ್ರತಿಕ್ರಿಯಿಸಿ, ಸರ್ಕಾರ ಹೊರಡಿಸಿದ ಆದೇಶ ಕೇವಲ ಮೂಲವೇತನಕ್ಕೆ ಶೇ.15 ಕೊಡುವ ವೇತನಕ್ಕೆ ಸಂಬಂಧಿಸಿದೆ. ಇವತ್ತು ಜಂಟಿ ಕ್ರಿಯಾ ಸಮಿತಿಯವರು ಎಂಡಿ ಜತೆ ಮೀಟಿಂಗ್ ನಡೆಸಿದ್ದಾರೆ. ಅವರು ಯಾವ ಒಪ್ಪಂದ ಮಾಡಿಕೊಂಡು ಮುಷ್ಕರ ವಾಪಸ್ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಇದರ ಉದ್ದೇಶ ಮಾ. 24ರಂದು ನಡೆಯುವ ಸಾರಿಗೆ ಮುಷ್ಕರವನ್ನು ದಿಕ್ಕು ತಪ್ಪಿಸುವ ಹುನ್ನಾರವಾಗಿದೆ. ಆದರೆ ನಮ್ಮ ಬೇಡಿಕೆಗಳು ಈಡೇರಿಲ್ಲವೆಂದರೆ ಮಾರ್ಚ್ 24 ರಿಂದ ಸಾರಿಗೆ ನೌಕರರ ಮುಷ್ಕರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರ ಬೇಡಿಕೆ ಏನಿತ್ತು?
• ಮೂಲ ವೇತನವನ್ನು ಶೇ. 25ರಷ್ಟು ಪರಿಷ್ಕರಣೆ ಮಾಡಬೇಕು
• ಬಾಟಾ/ಭತ್ಯೆಯನ್ನು ಐದು ಪಟ್ಟು ಹೆಚ್ಚಿಸಬೇಕು
• ಏಪ್ರಿಲ್ 2011 ರಂದು ವಜಾಗೊಂಡ ಸಿಬ್ಬಂದಿಯ ಮರುನೇಮಕ ಮಾಡಬೇಕು
• ಸಿಬ್ಬಂದಿ ಮೇಲಿನ FIR ರದ್ದು ಮಾಡಬೇಕು
• ಮುಷ್ಕರದ ಸಮಯದಲ್ಲಿ ವರ್ಗಾವಣೆಯಾದ ನೌಕರರ ಮರು ನಿಯೋಜನೆ ಮಾಡಿಕೊಳ್ಳಬೇಕು