ಕರ್ನಾಟಕ
KSRTC Employees Strike: ಕೆಎಸ್‌ಆರ್‌ಟಿಸಿ ಎಂಡಿ ಸಂಧಾನ ಸಫಲ; ಸಾರಿಗೆ ನೌಕರರ ಮುಷ್ಕರ ವಾಪಸ್
KSRTC Employees Strike: ಮಾ.21ರಿಂದ ಮುಷ್ಕರ ನಡೆಸುವುದಾಗಿ ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಅಧ್ಯಕ್ಷ ಅನಂತ ಸುಬ್ಬರಾವ್ ಎಚ್ಚರಿಕೆ ನೀಡಿದ್ದರು. ಸಂಧಾನ ಸಭೆ ಸಫಲವಾದ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್ ಪಡೆದಿದ್ದಾರೆ.
ಬೆಂಗಳೂರು: ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಜತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಅನ್ಬುಕುಮಾರ್ ಅವರು ನಡೆಸಿದ ಸಂಧಾನ ಸಭೆ ಸಫಲವಾಗಿದ್ದು, ಮಾ.21ರಿಂದ ಕರೆದಿದ್ದ ಮುಷ್ಕರವನ್ನು ಸಾರಿಗೆ ನೌಕರರ ಸಂಘ ವಾಪಸ್ ಪಡೆದಿದೆ. ಯುಗಾದಿ ಸಂದರ್ಭದಲ್ಲಿ ನೌಕರರು ಕೊನೆಗೂ ಮುಷ್ಕರ (KSRTC Employees Strike) ವಾಪಸ್ ಪಡೆದಿರುವುದರಿಂದ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟಂತಾಗಿದೆ.
ಸಾರಿಗೆ ನೌಕರರಿಗೆ ಶೇ.15 ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಮಾ.17ರಂದು ಆದೇಶ ಹೊರಡಿಸಿತ್ತು. ಆದರೆ, ಶೇ. 20 ವೇತನ ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಮಾ.21ರಿಂದ ಮುಷ್ಕರ ನಡೆಸುವುದಾಗಿ ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಅಧ್ಯಕ್ಷ ಅನಂತ ಸುಬ್ಬರಾವ್ ಎಚ್ಚರಿಕೆ ನೀಡಿದ್ದರು. ಆದರೆ, ಶನಿವಾರ ಕೆಎಸ್‌ಆರ್‌ಟಿಸಿ ಎಂಡಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸರ್ಕಾರದಿಂದ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಸಾರಿಗೆ ನೌಕರರು ವಾಪಸ್ ಪಡೆದಿದ್ದಾರೆ .
ಸರ್ಕಾರ, ನೌಕರರಿಗೆ 2020ರ ಜನವರಿ 1ರಿಂದ ಹೆಚ್ಚುವರಿ ವೇತನ ನೀಡುವ ಭರವಸೆ ನೀಡಿದೆ. ಹಾಗೆಯೇ ಮುಷ್ಕರದ ವೇಳೆ ಮಾಡಿದ್ದ ನೌಕರರ ವಜಾ ಆದೇಶ ಹಿಂಪಡೆಯುವುದು ಹಾಗೂ ವಾರ್ಷಿಕ ವೇತನ ಬಡ್ತಿ ಹೆಚ್ಚಳಕ್ಕೂ ಸರ್ಕಾರ ಸಮ್ಮತಿಸಿದೆ. ಹೀಗಾಗಿ ಸೋಮವಾರ (ಮಾ.13) ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಅನಂತ್ ಸುಬ್ಬರಾವ್ ಬಣ ಭೇಟಿ ಮಾಡಿ, ಈಗಾಗಲೇ ಮಾಡಿರುವ ಆದೇಶಗಳನ್ನು ಕಾರ್ಯರೂಪಕ್ಕೆ ತರುವಂತೆ ಮನವಿ ಮಾಡಲಿದ್ದಾರೆ.
ಇದನ್ನೂ ಓದಿ | Male Mahadeshwara Statue: 108 ಅಡಿ ಎತ್ತರದ ಮಲೆ ಮಹದೇಶ್ವರಸ್ವಾಮಿ ಭವ್ಯ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ
ಬೇಡಿಕೆ ಈಡೇರಿಸದಿದ್ದರೆ ಮುಷ್ಕರವನ್ನು ಹಿಂಪಡೆಯುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಅಧ್ಯಕ್ಷ ಅನಂತ ಸುಬ್ಬರಾವ್ ಹಾಗೂ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರು. ಅನಂತ ಸುಬ್ಬರಾವ್ ಬಣದಿಂದ ಮಾ.21 ಹಾಗೂ ಆರ್. ಚಂದ್ರಶೇಖರ್ ಬಣದಿಂದ ಮಾ.24ರಿಂದ ಮುಷ್ಕರಕ್ಕೆ ಕರೆ ನೀಡಲಾಗಿತ್ತು.
ಮುಷ್ಕರ ಹಿಂಪಡೆದ ನಿರ್ಧಾರಕ್ಕೆ ಚಂದ್ರಶೇಖರ್ ಬಣ ಖಂಡನೆ
ಮುಷ್ಕರ ವಾಪಸ್ ಬಗ್ಗೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಪ್ರತಿಕ್ರಿಯಿಸಿ, ಸರ್ಕಾರ ಹೊರಡಿಸಿದ ಆದೇಶ ಕೇವಲ ಮೂಲವೇತನಕ್ಕೆ ಶೇ.15 ಕೊಡುವ ವೇತನಕ್ಕೆ ಸಂಬಂಧಿಸಿದೆ. ಇವತ್ತು ಜಂಟಿ ಕ್ರಿಯಾ ಸಮಿತಿಯವರು ಎಂಡಿ ಜತೆ ಮೀಟಿಂಗ್ ನಡೆಸಿದ್ದಾರೆ. ಅವರು ಯಾವ ಒಪ್ಪಂದ ಮಾಡಿಕೊಂಡು ಮುಷ್ಕರ ವಾಪಸ್ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಇದರ ಉದ್ದೇಶ ಮಾ. 24ರಂದು ನಡೆಯುವ ಸಾರಿಗೆ ಮುಷ್ಕರವನ್ನು ದಿಕ್ಕು ತಪ್ಪಿಸುವ ಹುನ್ನಾರವಾಗಿದೆ. ಆದರೆ ನಮ್ಮ ಬೇಡಿಕೆಗಳು ಈಡೇರಿಲ್ಲವೆಂದರೆ ಮಾರ್ಚ್ 24 ರಿಂದ ಸಾರಿಗೆ ನೌಕರರ ಮುಷ್ಕರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರ ಬೇಡಿಕೆ ಏನಿತ್ತು?
• ಮೂಲ ವೇತನವನ್ನು ಶೇ. 25ರಷ್ಟು ಪರಿಷ್ಕರಣೆ ಮಾಡಬೇಕು
• ಬಾಟಾ/ಭತ್ಯೆಯನ್ನು ಐದು ಪಟ್ಟು ಹೆಚ್ಚಿಸಬೇಕು
• ಏಪ್ರಿಲ್ 2011 ರಂದು ವಜಾಗೊಂಡ ಸಿಬ್ಬಂದಿಯ ಮರುನೇಮಕ ಮಾಡಬೇಕು
• ಸಿಬ್ಬಂದಿ ಮೇಲಿನ FIR ರದ್ದು ಮಾಡಬೇಕು
• ಮುಷ್ಕರದ ಸಮಯದಲ್ಲಿ ವರ್ಗಾವಣೆಯಾದ ನೌಕರರ ಮರು ನಿಯೋಜನೆ ಮಾಡಿಕೊಳ್ಳಬೇಕು
ಕರ್ನಾಟಕ
Modi in Karnataka: ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ; ನಿಷೇಧಿತ ಪ್ರದೇಶಕ್ಕೆ ನುಗ್ಗಿದ ಇಬ್ಬರು ವಶಕ್ಕೆ
Modi in Karnataka: ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ವೇಳೆ ಬ್ಯಾರಿಕೇಡ್ ಹಾರಿ ಬಂದ ಯುವಕ ಹಾಗೂ ನಿಷೇಧಿತ ಪ್ರದೇಶದಲ್ಲಿ ನುಗ್ಗಿದ ಎನ್‌ಸಿಸಿ ಅಧಿಕಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರ ರೋಡ್ ಶೋ ವೇಳೆ ಭದ್ರತಾ ವೈಫಲ್ಯ ಉಂಟಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದುಪೊಲೀಸರು ವಿಚಾರಣೆ ನಡೆಸಿದ್ದಾರೆ. ರೋಡ್ ಶೋ ವೇಳೆ ಬ್ಯಾರಿಕೇಡ್ ಹಾರಿ ಬಂದ ಯುವಕ ಹಾಗೂ ನಿಷೇಧಿತ ಪ್ರದೇಶದಲ್ಲಿ ನುಗ್ಗಿದ ಎನ್‌ಸಿಸಿ ಅಧಿಕಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಪ್ಪಳ ಮೂಲದ ಯುವಕ ಬಸವರಾಜ್ (29) ಹಾಗೂ ಎನ್‌ಸಿಸಿ ಅಧಿಕಾರಿ ರಾಜ್ ಗೌರವ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರ ದಾವಣಗೆರೆಯಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾವೇಶದ ಸಂದರ್ಭದಲ್ಲೂ ಪ್ರಧಾನಿ ಮೋದಿ ಅವರು ಬೃಹತ್ ಪೆಂಡಾಲ್‌ನ ಸುತ್ತ ವಾಹನದಲ್ಲಿ ರೋಡ್ ಶೋ ನಡೆಸುತ್ತಿದ್ದರೆ ಯುವಕ ಬಸವರಾಜ್ ಬ್ಯಾರಿಕೇಡ್ ಹಾರಿ ಮೋದಿ ಅವರಿದ್ದ ವಾಹನದತ್ತ ದೌಡಾಯಿಸಿದ್ದ. ಕೂಡಲೇ ಎಚ್ಚೆತ್ತ ಗಾಂಧಿನಗರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ | Modi in Karnataka: ದಾವಣಗೆರೆ ಮಹಾ ಸಂಗಮದ ಆವರಣದಲ್ಲೇ ಮೋದಿ ರೋಡ್ ಶೋ ನಡೆಸಿದ್ದೇಕೆ?
ಇನ್ನು ರೋಡ್ ಶೋಗೂ ಮೊದಲು ಸಂಗಮದಲ್ಲಿ ಪ್ರಧಾನ ಮಂತ್ರಿ ಆಗಮನದ ವೇಳೆ ಡಿ ಜೋನ್‌ನಲ್ಲಿ ಪ್ರವೇಶ ಮಾಡಿದ್ದ ಎನ್‌ಸಿಸಿ ಅಧಿಕಾರಿ ರಾಜ್ ಗೌರವ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಈಗ ಎನ್‌ಸಿಸಿ ಅಧಿಕಾರಿಯಾಗಿರುವ ರಾಜ್ ಗೌರವ್ ಮೋದಿ ಅವರ ಜತೆ ಪೋಟೊ ತೆಗೆಸಿಕೊಳ್ಳಲು ಎನ್‌ಸಿಸಿ ನುಗ್ಗಿದ್ದಾರೆ ಎನ್ನಲಾಗಿದೆ. ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಬಿಟ್ಟು ಕಳುಹಿಸಿದ್ದಾರೆ.
ರಾಜ್ಯಾದ್ಯಂತ ನಡೆದ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆಯ ಸಮಾರೋಪ ಸಮಾರಂಭ ದಾವಣಗೆರೆಯಲ್ಲಿ ಆಯೋಜನೆಯಾಗಿತ್ತು. ಅಲ್ಲಿ ಸುಮಾರು 2 ಲಕ್ಷ ಜನರಿಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು. ಅವರ ಮಧ್ಯೆ ಪ್ರಧಾನಿಯವರು ವಾಹನದ ಮೂಲಕ ರೋಡ್ ಶೋ ನಡೆಸಿದರು. ಈ ವೇಳೆ ಭದ್ರತಾ ಲೋಪ ಕಂಡುಬಂದಿದೆ.
ಕರ್ನಾಟಕ
Amit Shah Visit: ಭಾನುವಾರ ಅಮಿತ್ ಶಾ ರಾಜ್ಯ ಪ್ರವಾಸ; ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
Amit Shah Visit: ಬೀದರ್, ರಾಯಚೂರು ಹಾಗೂ ಬೆಂಗಳೂರಿನಲ್ಲಿ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ.
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 26ರಂದು ರಾಜ್ಯ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೀದರ್, ರಾಯಚೂರು ಹಾಗೂ ಬೆಂಗಳೂರಿನಲ್ಲಿ ಆಯೋಜಿಸಿರುವ ಪ್ರತಿಮೆ ಲೋಕಾರ್ಪಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಅವರು (Amit Shah Visit) ಭಾಗವಹಿಸಲಿದ್ದಾರೆ.
ಮೊದಲಿಗೆ ಬೀದರ್ ಜಿಲ್ಲೆ ಗೋರ್ಟಾ ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ಹಾಗೂ ಸರ್ದಾರ್ ವಲ್ಲಭಭಾಯಿ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಬಳಿಕ ರಾಯಚೂರು ಜಿಲ್ಲೆಯಲ್ಲಿ 4,238 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಬಸವೇಶ್ವರ ಹಾಗೂ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ಜಿಲ್ಲೆ ಬೀದರ್‌ಗೆ ಎರಡನೆ ಬಾರಿಗೆ ಆಗಮಿಸಿದ್ದಾರೆ. ಶನಿವಾರ (ಮಾ.25) ಸಂಜೆ ಬೀದರ್ ಏರ್ ಬೇಸ್‌ಗೆ ಅವರು ಆಗಮಿಸಿದ್ದಾರೆ. ರಾತ್ರಿ ಏರ್‌ಪೋರ್ಸ್ ಗೆಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿರುವ ಬಿಜೆಪಿಯ ಚಾಣಕ್ಯ, ಭಾನುವಾರ ಬೆಳಗ್ಗೆ 10-10ಕ್ಕೆ ಹೆಲಿಕಾಪ್ಟರ್ ಮೂಲಕ ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮಕ್ಕೆ ತೆರಳಲಿದ್ದಾರೆ. ಬೆಳಗ್ಗೆ 10-30 ರಿಂದ ಮಧ್ಯಾಹ್ನ 12-30 ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ | Modi in Karnataka: ಸರ್. ಎಂ. ವಿಶ್ವೇಶ್ವರಯ್ಯ ಅವರ ಕುರಿತು ಹೊಸ ಮ್ಯೂಸಿಯಂ ನಿರ್ಮಾಣ: ಪ್ರಧಾನಿ ನರೇಂದ್ರ ಮೋದಿ ಭರವಸೆ
ಗೋರ್ಟಾ ಗ್ರಾಮದ ಲಕ್ಷ್ಮಿ ದೇವಸ್ಥಾನದ ಎದುರು ನಿಜಾಮರ ಆಡಳಿತದಲ್ಲಿ ನಡೆದ ಹತ್ಯಾಕಾಂಡದ ಸ್ಥಳದಲ್ಲಿ 103 ಅಡಿ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, 35 ಅಡಿ ಎತ್ತರದ ಹುತಾತ್ಮದ ಸ್ಮಾರಕ, 1100 ಕೆ.ಜಿ. ತೂಕದ 11 ಅಡಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡುತ್ತಾರೆ. ಬಳಿಕ ಕಾರ್ಯಕ್ರಮದ ವೇದಿಕೆಯಲ್ಲಿ ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡ, ನಿಜಾಮರ ಆಡಳಿತ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ರಾಜ್ಯ ನಾಯಕರು ಉಪಸ್ಥಿತರಿರಲಿದ್ದಾರೆ.
ಬಳಿಕ ಮಧ್ಯಾಹ್ನ 1.45ಕ್ಕೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರಿಗೆ ತೆರಳಿ 4,283 ಸಾವಿರ ಕೋಟಿ ರೂಪಾಯಿ ವೆಚ್ಚದ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಸೇರಿ 200 ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ ಜನ ಸೇರು ನಿರೀಕ್ಷೆ ಇದೆ.
ಇದನ್ನೂ ಓದಿ | Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
ನಂತರ ಸಂಜೆ 6.30ಕ್ಕೆ ಗಂಟೆಗೆ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿ ʼಬೆಂಗಳೂರು ಹಬ್ಬʼದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ವಿಧಾನ ಸೌಧದ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಕೆಂಪೇಗೌಡ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ರಾತ್ರಿ 8.30ಕ್ಕೆ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ನಾಯಕರ ಜತೆ ಮಹತ್ವದ ಸಭೆ ನಡೆಸಲಿದ್ದಾರೆ. ಅದಾದ ನಂತರ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿ, ಮಾ.27 ರಂದು ಬೆಳಗ್ಗೆ ನವ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಕರ್ನಾಟಕ
Karnataka Rain: ಮಾ.26, 27 ರಂದು ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ
Karnataka Rain: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರ್ಚ್ 26 ಮತ್ತು 27 ರಂದು ಗುಡುಗು, ಮಿಂಚು ಸಹಿತ ಮಳೆಯಾಗುವ (Karnataka Rain) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಸುರಿಯಲಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ರಾಯಚೂರು ಜಿಲ್ಲೆಯಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಮಾ.28 ಬೆಳಗ್ಗೆ 8.30ರವರೆಗೆ ರಾಜ್ಯದ ಅಲ್ಲಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಇದನ್ನೂ ಓದಿ | ವಿಸ್ತಾರ TOP 10 NEWS: ರಾಜ್ಯಾದ್ಯಂತ ಮೋದಿ ಸಂಚಾರದಿಂದ, ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆವರೆಗಿನ ಪ್ರಮುಖ ಸುದ್ದಿಗಳಿವು
ಇತ್ತೀಚೆಗೆ ರಾಯಚೂರು, ಯಾದಗಿರಿ, ಕಲಬುರಗಿ ಹಾಗೂ ಕೋಲಾರ ಸೇರಿ ವಿವಿಧ ಜಿಲ್ಲೆಗಳಲ್ಲಿ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಾತ್ರವಲ್ಲದೆ, ಅಪಾರ ಬೆಳೆ ಹಾನಿ ಉಂಟಾಗಿತ್ತು. ಇದೀಗ ಮತ್ತೆ ಎರಡು ದಿನಗಳ ಕಾಲ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ರೈತರು ಆತಂಕಗೊಂಡಿದ್ದಾರೆ.
ಕರ್ನಾಟಕ
Reservation : ಮೀಸಲಾತಿ ಪರಿಷ್ಕರಣೆ ಮೂಲಕ ಧರ್ಮದ ಹೆಸರಿನಲ್ಲಿ ರಾಜ್ಯ ವಿಭಜನೆಗೆ ಬಿಜೆಪಿ ಯತ್ನ ಎಂದ ಜೆಡಿಎಸ್
ದೇವೇಗೌಡರು ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನೀಡಿದ್ದ ಶೇ.4ರಷ್ಟು ಮೀಸಲು ಕಸಿದುಕೊಂಡು, ಅದಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಲೇಪ ಹಚ್ಚಿ, ಮೀಸಲು ಆಶಯವನ್ನೇ ಹಾಳುಗೆಡವಲಾಗಿದೆ ಎಂದು ಜೆಡಿಎಸ್ ಹೇಳಿದೆ.
ಬೆಂಗಳೂರು: ರಾಜ್ಯ ಸರ್ಕಾರ ಪ್ರಕಟಿಸಿದ ಪರಿಷ್ಕೃತ ಮೀಸಲಾತಿ ನೀತಿಯನ್ನು ಜೆಡಿಎಸ್ ತೀವ್ರವಾಗಿ ಆಕ್ಷೇಪಿಸಿದೆ. ಇದು ಧರ್ಮದ ಹೆಸರಿನಲ್ಲಿ ರಾಜ್ಯ ವಿಭಜನೆಗೆ ನಡೆಸಿದ ಯತ್ನ ಮತ್ತು ಜಾತಿ ಜಗಳ ಸೃಷ್ಟಿಸುವ ಸಂಚು ಎಂದು ಅದು ಹೇಳಿದೆ. ಜೆಡಿಎಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮೀಸಲಾತಿ ಪರಿಷ್ಕರಣೆಗೆ ಸಂಬಂಧಿಸಿ ಹತ್ತು ಅಂಶಗಳನ್ನು ಹಂಚಿಕೊಂಡಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಮಾಜಿ ಪ್ರಧಾನಿಗಳಾದ ದೇವೇಗೌಡರು ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನೀಡಿದ್ದ ಶೇ.4ರಷ್ಟು ಮೀಸಲು ಕಸಿದುಕೊಂಡು, ಅದಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಲೇಪ ಹಚ್ಚಿ, ಮೀಸಲು ಆಶಯವನ್ನೇ ಹಾಳುಗೆಡವಿ ಬದುಕುಗಳನ್ನು ಸುಟ್ಟು ಹಾಕುವ ದುಷ್ಟತನವಲ್ಲದೆ ಮತ್ತೇನೂ ಅಲ್ಲ ಎಂದು ಹೇಳಿದೆ.
ಜೆಡಿಎಸ್‌ನ ಆಕ್ರೋಶದ ಮಾತುಗಳು ಇಲ್ಲಿವೆ.
- ರಾಜ್ಯ @BJP4Karnataka ಸರಕಾರ ಪ್ರತಿಯೊಂದರಲ್ಲಿಯೂ ರಾಜಕೀಯ ಮಾಡುತ್ತದೆ, ಪ್ರತಿಯೊಂದರಲ್ಲಿಯೂ ಚುನಾವಣೆಯನ್ನೇ ಕಾಣುತ್ತದೆ! ಸಂಪುಟದಲ್ಲಿ ಸಭೆಯ ಮೀಸಲಾತಿ ಹಕೀಕತ್ತೇ ಒಂದು ಖತರ್ನಾಕ್ ನಾಟಕ. ಕೊಡಲು ಕೈ ಬಾರದು, ಕೊಡಲೂ ಆಗದು. ಹಣೆಗೆ ಮಣೆಯಿಂದ ಬಾರಿಸಿಕೊಳ್ಳುವುದೂ ಎಂದರೆ ಇದೆ. ಪಾಪದ ಪಾಶ ಬಿಜೆಪಿ ಬೆನ್ನುಬಿದ್ದಿದೆ.
- ಚುನಾವಣೆ ಎಂಬ ಚದುರಂಗದಾಟದಲ್ಲಿ @BJP4Karnataka ಬಿಸಿಲುಗುದುರೆಯ ಮೇಲೆ ಸವಾರಿ ಮಾಡುತ್ತಿದೆ, ಅಷ್ಟೇ ಅಲ್ಲ; ಕ್ರೂರ ವ್ಯಾಘ್ರನ ಮೇಲೂ ಕುಳಿತು ಕುರುಡಾಗಿ ಸರ್ಕಸ್ ಮಾಡುತ್ತಿದೆ. ಸಾಗು, ಇಲ್ಲವೇ ಹೋಗು ಎನ್ನುವ ದುಸ್ಥಿತಿಯಲ್ಲಿ ತೋಯ್ದಾಡುತ್ತಿದೆ.
- ಮತದ ಹೆಸರಿನಲ್ಲಿ ಮತಯುದ್ಧ ಗೆಲ್ಲಬಹುದೆಂದು ಚಟಕ್ಕೆ ಬಿದ್ದಿರುವ @BJP4Karnataka ಈಗ ಸರ್ವಜನರ ಕಲ್ಯಾಣದ ಪ್ರತೀಕವಾದ ಕರ್ನಾಟಕದಲ್ಲಿ ಮೀಸಲು ಕಳ್ಳಾಟ ಆಡಿದೆ. ಗೆಲ್ಲಲೇಬೇಕು, ಗೆಲ್ಲದಿದ್ದರೆ ಇನ್ನೊಬ್ಬರ ತಟ್ಟೆಗೆ ಕೈ ಹಾಕು, ಆಗದಿದ್ದರೆ ಕಸಿದುಕೋ.. ಇದೇ ಕಮಲಪಕ್ಷದ ಕುಟಿಲತೆ.
- ಮೂರೂವರೆ ವರ್ಷದಿಂದ ಗಾಳಿಯಲ್ಲಿ ಗಾಳೀಪಟ ಹಾರಿಸಿಕೊಂಡೇ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿದ್ದ @BJP4Karnataka, ಚುನಾವಣೆ ಗಿಮಿಕ್ಕಿನ ಸಂಪುಟ ಸಭೆಯಲ್ಲಿ ಮೀಸಲು ತುಪ್ಪವನ್ನು ಜನರ ಹಣೆಗೆ ಸವರುವ ಬೂಟಾಟಿಕೆ ನಡೆಸಿದೆ. ಕಳ್ಳ ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯಲು ಹೊರಟಿದೆ.
- ಒಬ್ಬರ ಅನ್ನ ಕಸಿದುಕೊಂಡು ಇನ್ನೊಬ್ಬರ ಹೊಟ್ಟೆ ತುಂಬಿಸಬಹುದು ಎನ್ನುವ ಬಿಜೆಪಿಗರ ರಕ್ಕಸ ಚಾಳಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಕ್ಕೆ ಶಾಶ್ವತ ಸಮಾಧಿ ಕಟ್ಟುವಂತಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲದವರ ನಡವಳಿಕೆ ಇದು.
- ಮೀಸಲು ಕೊಡುವುದು ತಪ್ಪಲ್ಲ, ಆದರೆ, ತನ್ನ ಹಿಡೆನ್ ಅಜೆಂಡಾವನ್ನು ಮೀಸಲಿನೊಳಕ್ಕೂ ನುಸುಳಿಸಿದ @BJP4Karnataka ನರಿ ರಾಜಕಾರಣ ಆಘಾತಕಾರಿ.
- ಸಾಮಾಜಿಕ ನ್ಯಾಯದಿಂದಲೇ ಇಡೀ ದೇಶಕ್ಕೆ ಮೇಲ್ಪಂಕ್ತಿಯಾಗಿದ್ದ ಕರ್ನಾಟಕವನ್ನು ಮೀಸಲು ಮೂಲಕವೇ ವಿಭಜಿಸಿ ಮತ ಫಸಲು ತೆಗೆಯುವ ದುರಾಲೋಚನೆಯೊಂದಿಗೆ ಬಿಜೆಪಿ, ಸಾಮಾಜಿಕ ನ್ಯಾಯಕ್ಕೆ ಚಟ್ಟ ಕಟ್ಟಿ ಸ್ಮಶಾನ ಕೇಕೆ ಹಾಕುತ್ತಿದೆ.
- ಒಳ ಮೀಸಲು ಎನ್ನುವುದು ಒಡೆಯಲಾಗದ ಕಗ್ಗಂಟೇನಲ್ಲ. ಬಿಜೆಪಿ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲವಷ್ಟೇ. ಆದರೆ, ಚುನಾವಣೆ ಹೊತ್ತಿನಲ್ಲಿ ಜಾತಿ ಜಾತಿಗಳ ನಡುವೆ ವೈಮನಸ್ಸು ತಂದು ಉರಿಯುವ ಕಿಚ್ಚಿನಲ್ಲಿ ಚಳಿ ಕಾಯಿಸಿಕೊಳ್ಳಬೇಕು ಎನ್ನುವುದೇ ಬಿಜೆಪಿಯ ಅಸಲಿ ಆಟ.
- ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda ಅವರು ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನೀಡಿದ್ದ ಶೇ.4ರಷ್ಟು ಮೀಸಲು ಕಸಿದುಕೊಂಡು, ಅದಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಲೇಪ ಹಚ್ಚಿ, ಮೀಸಲು ಆಶಯವನ್ನೇ ಹಾಳುಗೆಡವಿ ಬದುಕುಗಳನ್ನು ಸುಟ್ಟು ಹಾಕುವ ದುಷ್ಟತನವಲ್ಲದೆ ಮತ್ತೇನೂ ಅಲ್ಲ.
- ಬಿಜೆಪಿ ಪಾಪದಕೊಡ ಭರ್ತಿ ಆಗಿದೆ. ರಾಜ್ಯವನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿ, ಜಾತಿಜಗಳಕ್ಕೆ ತುಪ್ಪ ಸುರಿಯುತ್ತಿದೆ. ಅರಗಿನ ಮನೆಯಲ್ಲಿ ಪಾಂಡವರಿಗೆ ಕೊಳ್ಳಿ ಇಡಲು ಹೋಗಿ ಮುಂದೊಮ್ಮೆ ತಾವೇ ಎಸಗಿದ ಪಾಪಕುಂಡದಲ್ಲಿ ಬೆಂದುಹೋದ ಕೌರವರಂತೆ, ಬಿಜೆಪಿಗರು ಮದವೇರಿ ಮೆರೆಯುತ್ತಿದ್ದಾರೆ. ಉರಿಯುತ್ತಿರುವ ಜನರ ಒಡಲು ತಣ್ಣಗಾಗುವುದಿಲ್ಲ. ನೆನಪಿರಲಿ.
ಇದನ್ನೂ ಓದಿ : Panchamasali Reservation : 2ಡಿ ಮೀಸಲಾತಿಗೆ ಪಂಚಮಸಾಲಿ ಒಪ್ಪಿಗೆ, ಎರಡು ವರ್ಷಗಳ ಹೋರಾಟಕ್ಕೆ ತೆರೆ
-
ಅಂಕಣ16 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ17 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ16 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ18 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ15 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ14 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಕರ್ನಾಟಕ10 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಅಂಕಣ11 hours ago
ಹೊಸ ಅಂಕಣ: ಸೈಬರ್ ಮಿತ್ರ: ಜಾಣರಾಗಿ, ಜಾಗರೂಕರಾಗಿರಿ!