Site icon Vistara News

KSRTC Ticket Price Hike: ಸಾರಿಗೆ ಬಸ್‌ ಪ್ರಯಾಣಿಕರಿಗೆ ಶಾಕ್‌; ಟಿಕೆಟ್ ದರ ಏರಿಕೆ ಸುಳಿವು ನೀಡಿದ KSRTC ಅಧ್ಯಕ್ಷ!

KSRTC Ticket Price Hike

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಬೆನ್ನಲ್ಲೇ ಸಾರಿಗೆ ಬಸ್‌ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC Ticket Price Hike) ಶಾಕ್ ನೀಡಲು ಮುಂದಾಗಿದೆ. ಬಸ್ ಟಿಕೆಟ್‌ ದರ ಏರಿಕೆ ವಿಚಾರವಾಗಿ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌.ಆರ್‌. ಶ್ರೀನಿವಾಸ್ ಸುಳಿವು ನೀಡಿದ್ದು, ಇದಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಗುಬ್ಬಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌.ಆರ್‌. ಶ್ರೀನಿವಾಸ್ ಅವರು, ಇಂಧನ ದರ, ವಾಹನ ಬಿಡಿ ಭಾಗಗಳ ಬೆಲೆ ಏರಿಕೆ ಹಾಗೂ ಸಿಬ್ಬಂದಿ ವೇತನ ವೆಚ್ಚದಿಂದ ಕೆಎಸ್‌ಆರ್‌ಟಿಸಿ ನಷ್ಟ ಅನುಭವಿಸುತ್ತಿದೆ. ಹೀಗಾಗಿ ನಷ್ಟ ಸರಿದೂಗಿಸಲು ಟಿಕೆಟ್‌ ದರ ಏರಿಕೆ ಅನಿವಾರ್ಯ ಎಂದು ಹೇಳುವ ಮೂಲಕ ಬಸ್‌ ಟಿಕೆಟ್‌ ದರ ಖಚಿತ ಎಂಬ ಸುಳಿವನ್ನು ನೀಡಿದ್ದಾರೆ. ಮೂಲಗಳ ಪ್ರಕಾರ ಶೇ. 15-20 ರಷ್ಟು ಟಿಕೆಟ್ ದರ ಏರಿಕೆಗೆ ನಿಗಮ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ?

ಬಸ್‌ ಟಿಕೆಟ್ ದರ ಏರಿಕೆ ವಿಚಾರ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಗುಬ್ಬಿ ಶ್ರೀನಿವಾಸ್ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಕೆಟ್ ದರ ಏರಿಕೆ ವಿಚಾರವಾಗಿ ಸ್ಪಷ್ಟನೆ ನೀಡಲು ನಿರಾಕರಿಸಿರುವ ರಾಮಲಿಂಗಾರೆಡ್ಡಿ ಅವರು, ದರ ಏರಿಕೆ ಬಗ್ಗೆ ಗುಬ್ಬಿ ಶ್ರೀನಿವಾಸ್‌ರನ್ನೇ ಕೇಳಿಕೊಳ್ಳಿ ಎಂದು ಹೇಳಿದ್ದಾರೆ. ಹೀಗಾಗಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ.

ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆ ಇದೆ: ರಾಜು ಕಾಗೆ

MLA Raju Kage Press meet

ರಾಜ್ಯ ಸರ್ಕಾರ ಶಕ್ತಿ ಯೋಜನೆ ಆರಂಭಿಸಿ ಒಂದು ವರ್ಷವಾಗಿದೆ. ಇದರಿಂದ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಾರೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಷ್ಟದಲ್ಲಿದೆ. ಹೀಗಾಗಿ ಬಸ್ ಟಿಕೆಟ್ ದರವನ್ನು ಹೆಚ್ಚಿಸಲು ಚಿಂತನೆ ನಡೆಸಿದ್ದೇವೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ತಿಳಿಸಿದ್ದಾರೆ.

ಇದನ್ನೂ ಓದಿ | Cauvery Dispute: ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನೀರು ಬಿಡಲು ಸೂಚನೆ; ಸರ್ವಪಕ್ಷ‌ ಸಭೆ ಕರೆದ ಸಿಎಂ ಸಿದ್ದರಾಮಯ್ಯ

ಕಾಗವಾಡದಲ್ಲಿ ಮಾತನಾಡಿರುವ ಅವರು, ಶಕ್ತಿ ಯೋಜನೆಯಿಂದ ಸಂಸ್ಥೆ ನಷ್ಟ ಅನುಭವಿಸಿದೆ. ಡೀಸೆಲ್ ಮತ್ತು ಬಸ್ ಬಿಡಿ ಭಾಗಗಳ ಬೆಲೆಯೂ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಬಸ್ ದರ ಏರಿಕೆ ಮಾಡಿಲ್ಲ. ಈಗಾಗಲೇ ಹಳೆಯ ಕ್ಲಬ್ ಕಟ್ಟಡವನ್ನು ನವೀಕರಿಸಿ ಬಾಡಿಗೆಗೆ ನೀಡಲಾಗುತ್ತಿದೆ. ಹೀಗಾಗಿ ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

Exit mobile version