ಬೆಂಗಳೂರು: ಕಳೆದ ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (KTET Exam 2022 ) ಬರೆಯಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಯೊಬ್ಬರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಅಶ್ಲೀಲ ಚಿತ್ರವಿರುವ ಪ್ರವೇಶ ಪತ್ರವನ್ನು ಒದಗಿಸಿತ್ತೇ?
ಹೌದು, ಎನ್ನುತ್ತಿದ್ದಾರೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮಹಿಳಾ ಅಭ್ಯರ್ಥಿಯು ಟಿಇಟಿ ಬರೆಯಲು ತಾವು ಅರ್ಜಿ ಸಲ್ಲಿಸಿದ್ದು, ಇಲಾಖೆಯು ಪರೀಕ್ಷೆ ಬರೆಯಲು ಒದಗಿಸಿದ ಪ್ರವೇಶ ಪತ್ರದಲ್ಲಿ ಪರಿಕ್ಷಾರ್ಥಿಯ ಚಿತ್ರವಿರುವ ಜಾಗದಲ್ಲಿ ನಟಿ ಸನ್ನಿ ಲಿಯೋನ್ ಅವರ ಅರೆಬೆತ್ತಲೆ ಫೋಟೊವನ್ನು ಹಾಕಿದೆ ಎಂದು ದೂರಿದ್ದಾರೆ. “ತಾವು ತಮ್ಮದೇ ಫೋಟೊ ಅಪ್‌ಲೋಡ್ ಮಾಡಿ, ಅರ್ಜಿಯ ಪ್ರಿಂಟ್ ಔಟ್ ಪಡೆದುಕೊಂಡಿದ್ದರೂ, ಇಲಾಖೆ ಅರೆಬೆತ್ತಲೆ ಫೋಟೊವಿರುವ ಪ್ರವೇಶ ಪತ್ರವನ್ನು ಒದಗಿಸಿದೆʼʼ ಎಂದು ಅವರು ಆರೋಪಿಸಿದ್ದಾರೆ.
ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಸ್ಪಷ್ಟೀಕರಣ ನೀಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು, ಇದು ಅಭ್ಯರ್ಥಿಯೇ ಮಾಡಿದ ತಪ್ಪಿನಿಂದಾಗಿದ್ದು, ಇದರಲ್ಲಿ ಇಲಾಖೆ ಯಾವ ಲೋಪವನ್ನೂ ಮಾಡಿಲ್ಲ ಎಂದಿದೆ. ಅಲ್ಲದೆ, ಈ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಯನ್ನೂ ಕೋರಿದೆ.
ನಡೆದಿದ್ದೇನು?
ಸಾರ್ವಜನಿಕ ಶಿಕ್ಷಣ ಇಲಾಖೆಯು ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ’ಗೆ (ಟಿಇಟಿ) ಅರ್ಜಿ ಸಲ್ಲಿಸಲು ಕಳೆದ ಸೆಪ್ಟೆಂಬರ್‌ನಲ್ಲಿ ಅವಕಾಶ ನೀಡಿತ್ತು. ರಾಜ್ಯದಲ್ಲಿನ ಸರ್ಕಾರಿ ಶಾಲೆಗಳ ಶಿಕ್ಷಕರ ಹುದ್ದೆಗಳಿಗೆ ನಡೆಯುವ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾದರೆ ಈ ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಯು ಅರ್ಹತೆ ಪಡೆದಿರಲೇಬೇಕು. ಸರ್ಕಾರಿ ಶಾಲೆಯ ಶಿಕ್ಷಕರಾಗುವ ಕನಸು ಹೊತ್ತು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮಹಿಳಾ ಅಭ್ಯರ್ಥಿಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಈ ಪರೀಕ್ಷೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ ನವೆಂಬರ್ 6ರಂದು ನಡೆಸಿದ್ದು, ಇದಕ್ಕೆ ಪ್ರವೇಶ ಪತ್ರವನ್ನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿಯೇ ಒದಗಿಸಲಾಗಿತ್ತು. ಅಭ್ಯರ್ಥಿಗಳು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಈ ಮಹಿಳಾ ಅಭ್ಯರ್ಥಿಯು ತಮ್ಮ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಾಗ ಅವರಿಗೆ ಅಘಾತವಾಗಿತ್ತು. ಏಕೆಂದರೆ ತಮ್ಮ ಫೋಟೊ ಇರಬೇಕಾದ ಸ್ಥಳದಲ್ಲಿ ನಟಿ ಸನ್ನಿ ಲಿಯೋನ್ ಅವರ ಅಶ್ಲೀಲ ಚಿತ್ರವಿತ್ತು.
ಇದರಿಂದಾಗಿ ಅವರಿಗೆ ಈ ಪ್ರವೇಶ ಪತ್ರವನ್ನು ತೆಗೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗುವುದಿರಲಿ, ಈ ಕುರಿತು ಮಾತನಾಡಲೂ ಮುಜುಗರ ಉಂಟಾಗುವ ಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಮಾಹಿತಿ ಪಡೆಯಲು ಇಲಾಖೆಯು ನೀಡಿದ್ದ ಕಾಲ್ ಸೆಂಟರ್ ನಂಬರ್‌ಗೆ ಹಲವಾರು ಬಾರಿ ಕರೆ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರನ್ನು ಸಂಪರ್ಕಿಸಿ ಈ ಕುರಿತು ಮಾಹಿತಿ ನೀಡಿದಾಗ, ಅವರು ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರು. ಆದರೆ ತಮಗಾದ ಮುಜುಗರಕ್ಕಾಗಿ ಅವರು ಶಿಕ್ಷಣ ಇಲಾಖೆಯು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರ್ಜಿ ಸಲ್ಲಿಸುವಾಗ ತಮ್ಮಿಂದ ಯಾವುದೇ ತಪ್ಪಾಗಿಲ್ಲ. ತಾವು ತಮ್ಮದೇ ಫೋಟೊವನ್ನು ಅಪ್‌ಲೋಡ್ ಮಾಡಿದ್ದು, ಇದರ ಪ್ರಿಂಟ್‌ಔಟ್ ಕೂಡ ಇಟ್ಟುಕೊಂಡಿದ್ದೇನೆ. ಆದರೆ ಪ್ರವೇಶ ಪತ್ರದಲ್ಲಿದಲ್ಲಿ ಅಶ್ಲೀಲ ಫೋಟೊ ಹಾಕಲಾಗಿದೆ ಎಂದು ಈ ಮಹಿಳಾ ಅಭ್ಯರ್ಥಿಯು ಹೇಳಿದ್ದಾರೆ. ಅಲ್ಲದೆ, ತಾವು ಸಲ್ಲಿಸಿದ ಅರ್ಜಿಯ ಪ್ರತಿಗಳನ್ನು ಮಾಧ್ಯಮಗಳಿಗೆ ಒದಗಿಸಿದ್ದಾರೆ.
ಅಭ್ಯರ್ಥಿಯದ್ದೇ ತಪ್ಪು ಎನ್ನುತ್ತಿದೆ ಇಲಾಖೆ
ಆದರೆ ಈ ಕುರಿತು ಸ್ಪಷ್ಟೀಕರಣ ನೀಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು, ಪ್ರತಿ ಅಭ್ಯರ್ಥಿಯು ಟಿಇಟಿ-2022 ಪರೀಕ್ಷೆಗೆ ಆನ್ ಲೈನ್ ಅರ್ಜಿ ಸಲ್ಲಿಸುವ ಮುನ್ನ ತಾವೇ ತಮ್ಮ User ID ಮತ್ತು Password ಅನ್ನು ಸೃಷ್ಟಿಸಿಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ. ಈ ರೀತಿಯಾಗಿ ಸೃಷ್ಟಿಸಿಕೊಂಡ User ID ಮತ್ತು Password ಮಾಹಿತಿಯು ಸಂಪೂರ್ಣ ಗೌಪ್ಯ ಹಾಗೂ ಅಭ್ಯರ್ಥಿಯ ಖಾಸಗಿ ಮಾಹಿತಿಯಾಗಿರುತ್ತದೆ.
ಶಿವಮೊಗ್ಗದಲ್ಲಿ ತನಿಖೆ ಶುರು
ಮಹಿಳಾ ಅಭ್ಯರ್ಥಿ ಹಾಲ್ ಟಿಕೆಟ್ ನಲ್ಲಿ ಸನ್ನಿ ಲಿಯಾನ್ ಫೋಟೊ ಇದ್ದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ವಜನಿಕ ಶಿಕ್ಷಣ ಇಲಾಖೆಯು ಈ ಸಂಬಂಧ ಪೊಲೀಸರಿಗೆ ದೂರು ನೀಡಿದೆ. ಶಿವಮೊಗ್ಗದಲ್ಲಿ ಮಹಿಳಾ ಅಭ್ಯರ್ಥಿಯ ಪರೀಕ್ಷಾ ಕೇಂದ್ರ ಇದ್ದುದ್ದರಿಂದ ಅಲ್ಲಿಯೇ ದೂರು ದಾಖಲಿಸಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಡಿಡಿಪಿಐ ಪರಮೇಶ್ವರಪ್ಪ, ಬಿಇಒ ಲೋಕೇಶ್ ಮತ್ತಿತರ ಅಧಿಕಾರಿಗಳು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು. ಪರೀಕ್ಷಾ ಕೇಂದ್ರದ ಕಾಲೇಜು ಪ್ರಾಂಶುಪಾಲರಾದ ರುದ್ರಪ್ಪ ದೂರು ಸಲ್ಲಿಸಿದ್ದಾರೆ. ಪ್ರಕರಣವನ್ನು ಸಿಇಎನ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಸನ್ನಿ ಲಿಯೊನ್ ಫೋಟೊ ಬಂದಿದ್ದಾದರೂ ಹೇಗೆ? ಫೋಟೊ ಎಲ್ಲಿಂದ ಅಪ್‌ಲೋಡ್ ಆಗಿದೆ ಎಂಬ ಕುರಿತು ತನಿಖೆ ನಡೆಸಲಾಗುವುದು ಎಂದು ಎಸ್‌ಪಿ ಮಿಥುನ್ ಕುಮಾರ್ ಹೇಳಿಕೆ ನೀಡಿದ್ದಾರೆ. ಈಗಾಗಲೇ ಅಭ್ಯರ್ಥಿಯಿಂದ ಮಾಹಿತಿ ಪಡೆಯಲಾಗಿದೆ. ಅರ್ಜಿ ಸಲ್ಲಿಸಲು ಬೇರೆಯವರಿಗೆ ಹೇಳಲಾಗಿತ್ತು ಎಂದು ಅಭ್ಯರ್ಥಿ ತಿಳಿಸಿದ್ದಾರೆ. ಸಂಬಂಧಪಟ್ಟ ಮೂವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ User ID ಮತ್ತು Password ನ್ನು ಬಳಸಿ ಲಾಗಿನ್ (Login) ಅಗುವುದರ ಮೂಲಕ ಅಭ್ಯರ್ಥಿಯು ತಮ್ಮ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಫೋಟೊ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ನಿಗಧಿತ ಅಂಕಣದಲ್ಲಿ ಅಫ್‌ಲೋಡ್ ಮಾಡಿದ ನಂತರ, ಅಭ್ಯರ್ಥಿಯು ತಾನು ನೀಡಿರುವ ಮಾಹಿತಿಯು ಸರಿಯಾಗಿದೆ ಎಂದು ಖಚಿತಪಡಿಸಿಕೊಂಡು ಅರ್ಜಿ Submit ಮಾಡಿದ ನಂತರವೇ ನಿಗದಿತ ಅರ್ಜಿ ಶುಲ್ಕ ಪಾವತಿಸಿ, ಅಭ್ಯರ್ಥಿಯು ತಮ್ಮ ಅನ್‌ಲೈನ್ ಅರ್ಜಿಯ ಪ್ರಿಂಟ್ ಅನ್ನು ಪಡೆಯಲು ಅವಕಾಶ ನೀಡಲಾಗಿರುತ್ತದೆ.
ಅಭ್ಯರ್ಥಿಯು ತಮ್ಮ ಅರ್ಜಿಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾರೆ. ಈ ತಂತ್ರಾಂಶವು KSWAN ಅಂತರ್ಜಾಲ ಸೌಲಭ್ಯವನ್ನು ಹೊಂದಿದ್ದು, ಸಂಪೂರ್ಣ ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆಯ State Data Center (SDC) ನಿಯಂತ್ರಣದ ಸರ್ವರ್‌ನಲ್ಲಿ ಅಳವಡಿಸಲಾಗಿರುತ್ತದೆ. ಹೀಗಾಗಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
ಅಭ್ಯರ್ಥಿಯನ್ನು ಹೊರತುಪಡಿಸಿ ಇತರರು ಅನ್ ಲೈನ್ ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ. ಹೀಗಾಗಿ ಅಭ್ಯರ್ಥಿಯ ಫೋಟೊ ಬದಲಾಗಲು ಸಾಧ್ಯವೇ ಇಲ್ಲ. ಇದು ಅರ್ಜಿ ಸಲ್ಲಿಸುವಾಗಲೇ ಆಗಿರುವ ತಪ್ಪಿರಬಹುದು ಎಂದು ಇಲಾಖೆ ಹೇಳಿದೆ. ಆದರೂ ಈ ಕುರಿತು ತನಿಖೆ ಮಾಡಿ, ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಕೋರಲಾಗಿದೆ ಎಂದು ಇಲಾಖೆ ಹೇಳಿದೆ.
ಇದನ್ನೂ ಓದಿ | KTET Exam 2022 | ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು ಗೊಂದಲವೇ? ಈ ಪ್ರಶ್ನೋತ್ತರ ಓದಿ